ಅದ್ಧೂರಿಯಾಗಿ ನೆರವೇರಿದ ಸಿದ್ಧಾರೂಢರ ಜನ್ಮದಿನೋತ್ಸವ

| Published : Apr 18 2024, 02:16 AM IST

ಅದ್ಧೂರಿಯಾಗಿ ನೆರವೇರಿದ ಸಿದ್ಧಾರೂಢರ ಜನ್ಮದಿನೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಸಿದ್ಧಾರೂಢರ 188ನೇ ಜನ್ಮದಿನೋತ್ಸವದ ಪ್ರಯುಕ್ತ ಹುಬ್ಬಳ್ಳಿ ನಗರದ ಶ್ರೀ ಸಿದ್ಧಾರೂಢರ ಮಠದಲ್ಲಿ ಉಭಯ ಶ್ರೀಗಳ ಗದ್ದುಗೆಗೆ ಅಭಿಷೇಕ, ವಿಶೇಷ ಪೂಜೆ, ಮಧ್ಯಾಹ್ನ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಮತ್ತಿತರ ಕಾರ್ಯಕ್ರಮ ನಡೆಯಿತು.

ಹುಬ್ಬಳ್ಳಿ: ಶ್ರೀ ಸಿದ್ಧಾರೂಢರ 188ನೇ ಜನ್ಮದಿನೋತ್ಸವದ ಪ್ರಯುಕ್ತ ನಗರದ ಶ್ರೀ ಸಿದ್ಧಾರೂಢರ ಮಠದಲ್ಲಿ ಅದ್ಧೂರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಬೆಳಗ್ಗೆ 5.30ಕ್ಕೆ ಉಭಯ ಶ್ರೀಗಳ ಗದ್ದುಗೆಗೆ ಅಭಿಷೇಕ, ವಿಶೇಷ ಪೂಜೆ, ಮಧ್ಯಾಹ್ನ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಶ್ರೀಗಳ ಉತ್ಸವ ಮೂತಿಯ ಪಾಲಕಿಯು ಸಕಲ ವಾದ್ಯಮೇಳದೊಂದಿಗೆ ನಗರದ ವಿವಿಧ ಕಡೆ ಸಂಚರಿಸಿತು. ಸಂಜೆ ಮಠಕ್ಕೆ ಹಿಂದಿರುಗಿದ ಸಂದರ್ಭದಲ್ಲಿ ಮಹಿಳೆಯರು ಕುಂಭದೊಂದಿಗೆ ಅದ್ಧೂರಿಯಾಗಿ ಬರಮಾಡಿಕೊಂಡರು. ನಂತರ ಸಂಜೆ ಇಲ್ಲಿನ ಕೈಲಾಸ ಮಂಟಪದಲ್ಲಿ ಆಯೋಜಿಸಿದ್ದ ತೊಟ್ಟಿಲೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಆಡಳಿತಾಧಿಕಾರಿ ಕೆ.ಜಿ. ಶಾಂತಾ ಚಾಲನೆ ನೀಡಿದರು. ರಾಜ್ಯವಲ್ಲದೇ ಮಹಾರಾಷ್ಟ್ರ, ಗೋವಾ ಹಾಗೂ ಇನ್ನೂ ಅನೇಕ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸಿ ಉಭಯ ಶ್ರೀಗಳ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಭಕ್ತರ ಮೇಲ್ಮನೆಸಭೆ ಅಧ್ಯಕ್ಷ ಡಿ.ಆರ್. ಪಾಟೀಲ, ಮಠದ ಟ್ರಸ್ಟ್‌ನ ಚೇರ್‌ಮನ್‌ ಬಸವರಾಜ ಕಲ್ಯಾಣಶೆಟ್ಟರ, ಉಪಾಧ್ಯಕ್ಷ ಉದಯಕುಮಾರ ನಾಯ್ಕ, ಧರ್ಮದರ್ಶಿಗಳಾದ ಬಾಳು ಮಗಜಿಕೊಂಡಿ, ಕೆ.ಎಲ್. ಪಾಟೀಲ, ಶಾಮಾನಂದ ಪೂಜೇರಿ, ಡಾ. ಗೋವಿಂದ ಮಣ್ಣೂರು, ಚೆನ್ನವೀರ ಮುಂಗುರವಾಡಿ, ಅಂದಾನಪ್ಪ ಚಾಕಲಬ್ಬಿ, ವಸಂತ ಸಾಲಗಟ್ಟಿ, ಗೀತಾ ಕಲಬುರ್ಗಿ, ಸಿದ್ದನಗೌಡ ಪಾಟೀಲ, ವಿನಾಯಕ ಘೋಡ್ಕೆ, ಮ್ಯಾನೇಜರ್ ಈರಣ್ಣ ತುಪ್ಪದ ಇದ್ದರು. ಸಂಜೆ ಸಿದ್ಧಾರೂಢರ ಮಠಕ್ಕೆ ಭೇಟಿ ನೀಡಿದ ಚಿತ್ರನಟಿ ತಾರಾ ಉಭಯ ಶ್ರೀಗಳ ಗದ್ದುಗೆ ದರ್ಶನ ಪಡೆದು ತೊಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ: ಇಲ್ಲಿನ ಶ್ರೀ ಸಿದ್ಧಾರೂಢ ಮಠದಲ್ಲಿ ಪೂರ್ಣಗೊಂಡಿರುವ ಶ್ರೀ ಸಿದ್ಧಾರೂಢ ಅತಿಥಿಗೃಹ, ಮಠ ಮುಂಭಾಗದಲ್ಲಿ ಗ್ರಾನೈಟ್‌ ಕಲ್ಲುಗಳು ನೆಲಹಾಸು, ಯಾತ್ರಿ ನಿವಾಸ ಕೊಠಡಿಗಳ ನವೀಕರಣಕ್ಕೆ ಶ್ರೀಮಠದ ಮುಖ್ಯ ಆಡಳಿತಾಧಿಕಾರಿ ಹಾಗೂ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶೆ ಕೆ.ಜಿ. ಶಾಂತಾ ಬುಧವಾರ ಲೋಕಾರ್ಪಣೆಗೊಳಿಸಿದರು. ಈ ವೇಳೆ ಟ್ರಸ್ಟ್‌ನ ಪದಾಧಿಕಾರಿಗಳು, ಭಕ್ತರು ಪಾಲ್ಗೊಂಡಿದ್ದರು.

ಶುಭಕೋರಿದ ಪ್ರಧಾನಿ ಮೋದಿ

ಸದ್ಗುರು ಶ್ರೀ ಸಿದ್ಧಾರೂಢರ 188ನೇ ಜಯಂತಿಗೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ಬುಧವಾರ ಬೆಳಗ್ಗೆ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಶುಭಾಶಯ ಕೋರಿರುವ ಪ್ರಧಾನಿ, ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮೀಜಿಯವರ ಜಯಂತಿಯಂದು ಅವರಿಗೆ ನನ್ನ ಗೌರವ ನಮನಗಳನ್ನು ತಿಳಿಸಿದ್ದಾರೆ.ಆಧ್ಯಾತ್ಮಿಕ ಪ್ರಬುದ್ಧತೆ, ಸಾಮಾಜಿಕ ಸಾಮರಸ್ಯ ಮತ್ತು ವಂಚಿತರ ಸಬಲೀಕರಣಕ್ಕೆ ನೀಡಿದ ಕೊಡುಗೆಗಳಿಗಾಗಿ ಅವರನ್ನು ಸ್ಮರಿಸಲಾಗುತ್ತದೆ. ಅವರ ಜೀವನ ಮತ್ತು ಕಾರ್ಯಗಳು ಎಲ್ಲ ಜೀವಿಗಳ ಕಲ್ಯಾಣಕ್ಕೆ ಗಾಢವಾದ ಬದ್ಧತೆಗೆ ನಿದರ್ಶನವಾಗಿದೆ. ಶ್ರೀ ಸಿದ್ಧಾರೂಢರು ಯಾವಾಗಲೂ ಏಕತೆ ಮತ್ತು ದಯೆಯ ಮಹತ್ವವನ್ನು ಎತ್ತಿ ತೋರಿಸಿದರು. ಅವರ ಆದರ್ಶಗಳನ್ನು ಈಡೇರಿಸಲು ನಾವು ಸದಾ ಶ್ರಮಿಸುತ್ತೇವೆ ಎಂದು ಪ್ರಧಾನಿ ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ಕೋರಿದ್ದಾರೆ.

ಪ್ರಧಾನಿಗಳ ಈ ಶುಭಾಶಯ ಸಾಮಾಜಿಕ ಜಾಲತಾಣಗಳಲ್ಲೀಗ ವೈರಲ್ ಆಗಿದ್ದು, ಸಿದ್ಧಾರೂಢರ ಭಕ್ತರು ಪ್ರಧಾನಿ ಅವರ ಶುಭಾಶಯ ಪತ್ರವನ್ನು ಎಲ್ಲೆಡೆ ಹಂಚಿಕೊಳ್ಳುತ್ತಿದ್ದಾರೆ.