ಸಿದ್ಧಾರೂಢರ ಜಯಂತ್ಯುತ್ಸವ: ಏ. 10ರಿಂದ ರಾಜ್ಯಮಟ್ಟದ ಭಜನಾ ಸ್ಪರ್ಧೆ

| Published : Mar 19 2024, 12:47 AM IST / Updated: Mar 19 2024, 12:48 AM IST

ಸಿದ್ಧಾರೂಢರ ಜಯಂತ್ಯುತ್ಸವ: ಏ. 10ರಿಂದ ರಾಜ್ಯಮಟ್ಟದ ಭಜನಾ ಸ್ಪರ್ಧೆ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಸಿದ್ಧಾರೂಢ ಸ್ವಾಮಿಗಳ ಜಯಂತ್ಯುತ್ಸವದ ಹಿನ್ನೆಲೆಯಲ್ಲಿ ಏ. 10ರಿಂದ 15ರ ವರೆಗೆ ಶ್ರೀಮಠದಲ್ಲಿ ರಾಜ್ಯಮಟ್ಟದ 9ನೇ ವರ್ಷದ ರಾಜ್ಯಮಟ್ಟದ ಭಜನಾ ಸ್ಪರ್ಧೆ ಆಯೋಜಿಸಲಾಗಿದೆ.

ಹುಬ್ಬಳ್ಳಿ:

ಶ್ರೀ ಸಿದ್ಧಾರೂಢ ಸ್ವಾಮಿಗಳ ಜಯಂತ್ಯುತ್ಸವದ ಹಿನ್ನೆಲೆಯಲ್ಲಿ ಏ. 10ರಿಂದ 15ರ ವರೆಗೆ ಶ್ರೀಮಠದಲ್ಲಿ ರಾಜ್ಯಮಟ್ಟದ 9ನೇ ವರ್ಷದ ರಾಜ್ಯಮಟ್ಟದ ಭಜನಾ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಶ್ರೀಮಠದ ಧರ್ಮದರ್ಶಿ, ಭಜನಾ ಸ್ಪರ್ಧೆ ಸಮಿತಿ ಅಧ್ಯಕ್ಷ ಶಾಮಾನಂದ ಪೂಜೇರಿ ಹೇಳಿದರು.

ಶ್ರೀಮಠದಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪರ್ಧೆಯಲ್ಲಿ ಭಾಗವಹಿಸುವ ಭಜನಾ ತಂಡಗಳು ಏ. 10ರ ರೊಳಗೆ ಹೆಸರು ನೋಂದಾಯಿಸಬೇಕು. ಸ್ಪರ್ಧೆಯ ವಿಜೇತರಿಗೆ ಪ್ರಥಮ ಬಹುಮಾನವಾಗಿ ₹1 ಲಕ್ಷ, ದ್ವಿತೀಯ ₹80 ಸಾವಿರ ಹಾಗೂ ತೃತೀಯ ಬಹುಮಾನವಾಗಿ ₹70 ಸಾವಿರ ನೀಡಲಾಗುವುದು. 10 ತಂಡಗಳಿಗೆ ತಲಾ ₹ 9 ಸಾವಿರ ಸಮಾಧಾನಕರ ಬಹುಮಾನ ನೀಡಲಾಗುವುದು. 16 ವರ್ಷದ ಒಳಗಿನ ಬಾಲಕ, ಬಾಲಕಿಯರ ತಂಡಕ್ಕೆ ₹10 ಸಾವಿರ ಪ್ರತಿಭಾ ಪುರಸ್ಕಾರ ಹಾಗೂ ಮಹಿಳಾ ಭಜನಾ ತಂಡಕ್ಕೆ ₹10 ಸಾವಿರ ಬಹುಮಾನ ನೀಡಲಾಗುವುದು ಎಂದರು.

ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂದರೆ ₹300 ಪ್ರವೇಶ ಶುಲ್ಕ ನಿಗದಿಗೊಳಿಸಲಾಗಿದೆ. ಕಳೆದ 8 ವರ್ಷಗಳಿಂದ ನಡೆಯುತ್ತಿರುವ ಈ ಭಜನಾ ಸ್ಪರ್ಧೆಯಲ್ಲಿ ಪ್ರತಿ ವರ್ಷವೂ ರಾಜ್ಯದ ಪ್ರತಿಯೊಂದು ಜಿಲ್ಲೆಗಳಿಂದ ಭಜನಾ ತಂಡಗಳು ಪಾಲ್ಗೊಳ್ಳುತ್ತವೆ. ಈ ಬಾರಿಯ ಸ್ಪರ್ಧೆಯಲ್ಲಿ 300ಕ್ಕೂ ಅಧಿಕ ಭಜನಾ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.

ಇಬ್ಬರು ಉತ್ತಮ ಹಾಡುಗಾರರಿಗೆ ತಲಾ ₹ 3,000, ಉತ್ತಮ ಹಾರ್ಮೋನಿಯಂ ವಾದಕರಿಗೆ ತಲಾ ₹ 3 ಸಾವಿರ, ಉತ್ತಮ ತಬಲಾ ವಾದಕರಿಗೆ ₹ 3 ಸಾವಿರ, ಉತ್ತಮ ತಾಳ ಹಾಗೂ ಧಮಡಿ ವಾದಕರಿಗೆ ತಲಾ ₹ 3 ಸಾವಿರ ಬಹುಮಾನ ನೀಲಾಗುವುದು ಎಂದು ತಿಳಿಸಿದರು.

ಭಜನಾ ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಂದು ತಂಡದವರಿಗೆ ಮೂರು ಪದ ಹಾಡುವ ಅವಕಾಶವಿದ್ದು, 18 ನಿಮಿಷದಲ್ಲಿ ಹಾಡಬೇಕು. ಪ್ರತಿ ತಂಡ 2 ಪದ್ಯಗಳನ್ನು ಕೈವಲ್ಯ ಸಾಹಿತ್ಯದ ಮೇಲೆ ಕಡ್ಡಾಯವಾಗಿ ಹಾಡಬೇಕು. ಪ್ರತಿ ತಂಡದವರು ಮೂರನೇ ಪದ್ಯವನ್ನು ಜ. ಸಿದ್ಧಾರೂಢರ ಮೇಲಿನ ಪದ್ಯ, ದಾಸರ ಪದ್ಯ, ಶಿಶುನಾಳ ಶರೀಫರ ಪದ್ಯ ಹಾಗೂ ವಚನ ಸಾಹಿತ್ಯ ಇವುಗಳಲ್ಲಿ ಯಾವುದಾದರೊಂದು ಹಾಡಬಹುದು. ಇಲ್ಲವೇ ಮೂರೂ ಪದ್ಯಗಳನ್ನು ಕೈವಲ್ಯ ಸಾಹಿತ್ಯದ ಮೇಲೆ ಹಾಡಬಹುದು. ಜಾನಪದ ಹಾಗೂ ಸಿನಿಮಾ ಶೈಲಿಯಲ್ಲಿ ಹಾಡುವವರಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.ಸ್ಪರ್ಧೆಯಲ್ಲಿ ಭಾಗವಹಿಸುವ ತಂಡದ ಕಲಾವಿದರ ಸಂಖ್ಯೆ 6ಕ್ಕಿಂತ ಕಡಿಮೆ ಇರಬಾರದು ಮತ್ತು 10ಕ್ಕಿಂತ ಹೆಚ್ಚಿರಬಾರದು. ಒಂದು ತಂಡದಲ್ಲಿ ಭಾಗವಹಿಸಿದ ಕಲಾವಿದರಿಗೆ ಮತ್ತೊಂದು ತಂಡದಲ್ಲಿ ಹಾಡಲು ಅವಕಾಶವಿಲ್ಲ. ಆದರೆ ತಬಲಾ ವಾದಕರಿಗೆ ಮಾತ್ರ ಕೇವಲ 2 ತಂಡಗಳಲ್ಲಿ ತಬಲಾ ಸಾಥ್ ನೀಡಲು ಅವಕಾಶ ನೀಡಲಾಗುವುದು. ಪ್ರತಿ ದಿನ 25 ತಂಡಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿದ್ದು ಏ. 13ರಂದು ಪ್ರಥಮ ಸುತ್ತು ಹಾಗೂ ಇದರಲ್ಲಿ ಆಯ್ಕೆಯಾದ ತಂಡಗಳಿಗೆ ಏ. 14ರಂದು ನಡೆಯುವ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ 9880169881, 8095882033ಗೆ ಸಂಪರ್ಕಿಸಬಹುದು ಎಂದರು.ಈ ವೇಳೆ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟರ, ಉಪಾಧ್ಯಕ್ಷ ಉದಯಕುಮಾರ ನಾಯ್ಕ, ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಧರ್ಮದರ್ಶಿಗಳಾದ ಬಾಳು ಮಗಜಿಕೊಂಡಿ, ವಿನಾಯಕ ಘೋಡ್ಕೆ, ಗೀತಾ ಕಲಬುರ್ಗಿ ಸೇರಿದಂತೆ ಹಲವರಿದ್ದರು.