ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅಡ್ಡ ಪರಿಣಾಮ : ನೀರು ನಿಲ್ಲುವ ಸಮಸ್ಯೆ ಪರಿಹಾರಕ್ಕೆ ಮನವಿ

| Published : Aug 06 2024, 12:46 AM IST / Updated: Aug 06 2024, 10:25 AM IST

ಸಾರಾಂಶ

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಖಾಸಗಿಯವರಿಗೆ ಸೇರಿದ ಜಾಗವಿದ್ದು, ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂದರ್ಭ ಹೆದ್ದಾರಿಯ ಚರಂಡಿ ಈ ಪ್ರದೇಶಕ್ಕಿಂತ ಮೇಲ್ಮಟ್ಟದಲ್ಲಿ ಇರುವುದರಿಂದ ಮಳೆಗಾಲದಲ್ಲಿ ಈ ಜಾಗದಲ್ಲಿ ನೀರು ತುಂಬಿ ಕೆರೆಯಂತಾಗಿದ್ದು, ಗ್ರಾಮದಲ್ಲಿ ಅನಾರೋಗ್ಯಕರ ಸ್ಥಿತಿಗೆ ಕಾರಣವಾಗಿದೆ.

 ಉಪ್ಪಿನಂಗಡಿ :  ಹೆದ್ದಾರಿ ಅಗಲೀಕರಣ ಕಾಮಗಾರಿಯ ಅಡ್ಡ ಪರಿಣಾಮವೆಂಬಂತೆ ನೆಕ್ಕಿಲಾಡಿಯ ಖಾಸಗಿ ಜಾಗವೊಂದರಲ್ಲಿ ತ್ಯಾಜ್ಯ ನೀರು ನಿಲ್ಲುತ್ತಿದ್ದು, ಇದರಿಂದ ಪರಿಸರದಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. 

ಆದ್ದರಿಂದ ಆ ಗುಂಡಿ ಪ್ರದೇಶವನ್ನು ಮುಚ್ಚಿಸಲು ಗ್ರಾ.ಪಂ. ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು 34 ನೆಕ್ಕಿಲಾಡಿ ಗ್ರಾಮ ಪಂಚಾಯಿತಿಗೆ ಗ್ರಾಮಸ್ಥರು ಮನವಿ ನೀಡಿದ್ದಾರೆ.

ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಖಾಸಗಿಯವರಿಗೆ ಸೇರಿದ ಜಾಗವಿದ್ದು, ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂದರ್ಭ ಹೆದ್ದಾರಿಯ ಚರಂಡಿ ಈ ಪ್ರದೇಶಕ್ಕಿಂತ ಮೇಲ್ಮಟ್ಟದಲ್ಲಿ ಇರುವುದರಿಂದ ಮಳೆಗಾಲದಲ್ಲಿ ಈ ಜಾಗದಲ್ಲಿ ನೀರು ತುಂಬಿ ಕೆರೆಯಂತಾಗಿದ್ದು, ಗ್ರಾಮದಲ್ಲಿ ಅನಾರೋಗ್ಯಕರ ಸ್ಥಿತಿಗೆ ಕಾರಣವಾಗಿದೆ. 

ನಮ್ಮ ಮನವಿಯ ಮೇರೆಗೆ ಚತುಷ್ಪಥ ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರ ಸಂಸ್ಥೆಯವರು ಅಲ್ಲಿನ ಚರಂಡಿಯನ್ನು ಇನ್ನಷ್ಟು ತಗ್ಗಿಸಿದ್ದು, ಮೋರಿಯನ್ನು ಹಾಕಿಸಿಕೊಟ್ಟಿದ್ದಾರೆ. ಇದರಿಂದ ಈಗ ಸಾಕಷ್ಟು ನೀರು ಹರಿದು ಹೋಗುತ್ತಿದ್ದರೂ, ಒಂದಷ್ಟು ಪ್ರಮಾಣದಲ್ಲಿ ನೀರು ನಿಲ್ಲುತ್ತಿದೆ. ಇನ್ನು ಇಲ್ಲಿ ಚರಂಡಿಯನ್ನು ತಗ್ಗಿಸಲು ಸಾಧ್ಯವಿಲ್ಲ. 

ಯಾಕೆಂದರೆ ಇದರಿಂದ ಸಂಪರ್ಕ ಪಡೆಯುವ ರಾಷ್ಟ್ರೀಯ ಹೆದ್ದಾರಿಯ ಅಡಿಯಲ್ಲಿ ಹೆದ್ದಾರಿಗೆ ಅಡ್ಡವಾಗಿ ಹಾಕಲಾಗಿರುವ ಮೋರಿ ಮೇಲ್ಮಟ್ಟದಲ್ಲಿ ಬರುತ್ತದೆ. ಇದರಿಂದಾಗಿ ಈ ಗುಂಡಿ ಪ್ರದೇಶಕ್ಕೆ ಮಣ್ಣು ತುಂಬಿಸುವುದೇ ಈ ಸಮಸ್ಯೆ ಪರಿಹಾರಕ್ಕಿರುವ ಏಕೈಕ ಮಾರ್ಗ. ಆದ್ದರಿಂದ ಈ ಬಗ್ಗೆ ಗ್ರಾ.ಪಂ. ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

 ಗ್ರಾ.ಪಂ. ಅಧ್ಯಕ್ಷೆ ಸುಜಾತ ರೈ ಅವರಿಗೆ ಮನವಿ ನೀಡಿದ ನಿಯೋಗದಲ್ಲಿ 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್, ಬೂತ್ ಅಧ್ಯಕ್ಷರಾದ ಅಬ್ದುಲ್ ಖಾದರ್, ಇಸಾಕ್, ಗ್ರಾ.ಪಂ. ಮಾಜಿ ಅಧ್ಯಕ್ಷ ಅಸ್ಕರ್ ಅಲಿ, ಕಾಂಗ್ರೆಸ್ ಪ್ರಮುಖರಾದ ಪ್ರಹ್ಲಾದ್ ಬೆಳ್ಳಿಪ್ಪಾಡಿ, ಜಯಶೀಲ ಶೆಟ್ಟಿ, ಶರೀಕ್ ಅರಪ್ಫಾ, ರಿಜ್ವಾನ್, ಹರೀಶ್, ಅಣ್ಣು ಮತ್ತಿತರರು ಉಪಸ್ಥಿತರಿದ್ದರು.