ಸಿದ್ದರಾಮಯ್ಯ ಸರ್ಕಾರದಲ್ಲಿ‌ ನಕ್ಸಲರು ಕಾಡುಬಿಟ್ಟು ನಾಡಿಗೆ ಬಂದಿದ್ದಾರೆ. ಅವರಿಗೆ ಕೆಂಪು ರತ್ನಗಂಬಳಿ ಹಾಸಿ ಸ್ವಾಗತಿಸುತ್ತಿದ್ದಾರೆ. ಧರ್ಮಸ್ಥಳ ವಿಚಾರವಾಗಿ ಸಿಎಂ ಮತಾಂಧರು, ನಗರ ನಕ್ಸಲರು ಹಾಗೂ ಟಿಪ್ಪು ಪ್ರೇರಿತ ಗ್ಯಾಂಗ್‌ಗೆ ಬೆಂಬಲ ನೀಡುತ್ತಿದ್ದಾರೆ. 

 ಹುಬ್ಬಳ್ಳಿ : ಸಿದ್ದರಾಮಯ್ಯ ಸರ್ಕಾರದಲ್ಲಿ‌ ನಕ್ಸಲರು ಕಾಡುಬಿಟ್ಟು ನಾಡಿಗೆ ಬಂದಿದ್ದಾರೆ. ಅವರಿಗೆ ಕೆಂಪು ರತ್ನಗಂಬಳಿ ಹಾಸಿ ಸ್ವಾಗತಿಸುತ್ತಿದ್ದಾರೆ. ಧರ್ಮಸ್ಥಳ ವಿಚಾರವಾಗಿ ಸಿಎಂ ಮತಾಂಧರು, ನಗರ ನಕ್ಸಲರು ಹಾಗೂ ಟಿಪ್ಪು ಪ್ರೇರಿತ ಗ್ಯಾಂಗ್‌ಗೆ ಬೆಂಬಲ ನೀಡುತ್ತಿದ್ದಾರೆ. ಇದರಲ್ಲಿ ಅವರದೇ ನೇರವಾದ ಕೈವಾಡವಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ ಗಂಭೀರ ಆರೋಪ ಮಾಡಿದರು.

ತಾಲೂಕಿನ ವರೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೌಜನ್ಯ ಪ್ರಕರಣದ ತನಿಖೆ ಬಗ್ಗೆ ನಮ್ಮ ಯಾರ ವಿರೋಧವೂ ಇಲ್ಲ. ಈಗಾಗಲೇ ಸಿಬಿಐ ತನಿಖೆ ಆಗಿದೆ. ಆದರೆ, ಕಮ್ಯುನಿಸ್ಟರು, ಮತಾಂಧರು ಸಿಟಿಯಲ್ಲಿದ್ದು, ಹಿಂದೂ ದೇವಸ್ಥಾನಗಳ ಅವಹೇಳನ ಮಾಡುವ ಕೆಲಸ ಮಾಡುತ್ತಿದ್ದಾರೆ. ಸಮೀರ್ ಎಂಬಾತ ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತನಾಗಿದ್ದು, ಅಂಥವರಿಂದ ಸಿಎಂ ಕಚೇರಿ ಸುತ್ತುವರಿದಿದೆ. ರಾಜ್ಯದಲ್ಲಿ ಪದೇ ಪದೇ ಹಿಂದೂ ಧರ್ಮಕ್ಕೆ ಅವಮಾನ ಮಾಡುವ ಕೆಲಸ ಆಗುತ್ತಿದೆ. ಜೆಸಿಬಿಯನ್ನು ಧರ್ಮಸ್ಥಳ ಹೆಬ್ಬಾಗಿಲಿಗೆ ನುಗ್ಗಿಸುತ್ತೇವೆ ಎನ್ನುತ್ತಿದ್ದಾರೆ. ರಾಜ್ಯದಲ್ಲಿ ಹಿಂದೂ ದೇವಾಲಯಗಳಿಗೆ ಅವಮಾನ ಮತ್ತು ಹಿಂದೂ ಕ್ಷೇತ್ರಗಳ ಅಪವಿತ್ರ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಇದರ ಹಿಂದೆ ದೊಡ್ಡ ಷಂಡ್ಯಂತ್ರ ಇದೆ ಎಂದು ಡಿಕೆಶಿ ಹೇಳುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಬಾಯಲ್ಲಿ ಈ ಬಗ್ಗೆ ಒಂದೂ ಮಾತು ಬಂದಿಲ್ಲ. ಡಿ.ಕೆ. ಶಿವಕುಮಾರ್ ಇದನ್ನೆಲ್ಲ ನಿಭಾಯಿಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲೇ ಒಡಕಿದೆ. ಅಲ್ಲಿ ಹಿಂದೂ ಪರ ಮತ್ತು ವಿರೋಧಿ ಗ್ಯಾಂಗ್ ಇದೆ ಎಂದು ಕುಟುಕಿದರು.

ಧರ್ಮಸ್ಥಳ ವಿಚಾರವಾಗಿ ತನಿಖೆ ನಡೆಸುವಂತೆ ಪೊಲೀಸರೇ ಕೋರ್ಟ್‌ಗೆ ಅರ್ಜಿ ಹಾಕಿದ್ದಾರೆ. ಎಲ್ಲ ಪ್ರಕರಣಗಳಿಗೂ ಪೊಲೀಸರು ಇದೇ ರೀತಿ ಮಾಡುತ್ತಾರಾ? ಪ್ರತಿದಿನ 10-20 ಅಡಿ ಅಗೆಯುವ ಬದಲು ಒಂದೇ ಸಲ ನೂರು ಅಡಿ ಅಗೆದು ತನಿಖೆ ಒಂದು ಬಾರಿ ನೈಜ ಸಂಗತಿ ಹೊರಹಾಕಿಬಿಡಿ ಎಂದು ಆಗ್ರಹಿಸಿದರು.

ನಗರ ನಕ್ಸಲರ ಗ್ಯಾಂಗಿದೆ:

ಧರ್ಮಸ್ಥಳ ವಿಚಾರದಲ್ಲಿ ನಾವು ರಾಜಕಾರಣ ಮಾಡಿಲ್ಲ. ಈ ಪ್ರಕರಣದಲ್ಲಿ ರಾಜಕಾರಣ ಮಾಡಿದ್ದೇ ಕಾಂಗ್ರೆಸ್. ಇದರ ಹಿಂದೆ ದೊಡ್ಡ ಖತರ್ನಾಕ್‌ ಗ್ಯಾಂಗ್ ಇದೆ.‌ ದಂಡುಪಾಳ್ಯ ರೀತಿಯ ನಗರ ನಕ್ಸಲರ ಗ್ಯಾಂಗ್ ಇದರ ಹಿಂದಿದೆ. ಯ್ಯೂಟೂಬ್ ಚಾನಲ್ ಮಾಡಲು ಎಲ್ಲಿಂದ ಹಣ ಬರುತ್ತಿದೆ. ಈ ಬಗ್ಗೆ ಎನ್‌ಐಎ ತನಿಖೆ ಆಗಬೇಕು ಎಂದು ಪಟ್ಟುಹಿಡಿದರು.

ಹಿಂದೂ ಧರ್ಮ ಬಿಜೆಪಿ ಸ್ವತ್ತಲ್ಲ ಅನ್ನುವ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರವಾಗಿ, ಮೊದಲು ಅದು ನಿಮ್ಮ ಸ್ವತ್ತಾ ಹೇಳಿ. ಮಸೀದಿ ಬಗ್ಗೆ ಈ ರೀತಿ ಆರೋಪ ಬಂದಿದ್ದರೆ ನೀವು ತನಿಖೆಗೆ ಕೊಡುತ್ತಿದ್ದೀರಾ ಎಂಬುದನ್ನು ಎದೆ ಮುಟ್ಟಿಕೊಂಡು ಹೇಳಿ. ಎಂದು ಆರ್‌.ಅಶೋಕ್‌ ಸವಾಲು ಹಾಕಿದರು.