ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘದ ವತಿಯಿಂದ ತಾಲೂಕಿನ ಪಣ್ಯದಹುಂಡಿ ಬಳಿ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘದ ವತಿಯಿಂದ ತಾಲೂಕಿನ ಪಣ್ಯದಹುಂಡಿ ಬಳಿ ಪ್ರತಿಭಟನೆ ನಡೆಯಿತು.

ಪಣ್ಯದಹುಂಡಿ ಬಳಿಯ ವಿದ್ಯುತ್ ಪ್ರಸರಣ ಕೇಂದ್ರದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಪ್ರತಿಭಟನೆ ನಡೆಸಿದರು. ಸೆಸ್ಕ್ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪಣ್ಯದಹುಂಡಿ, ಹೆಗ್ಗೋಠಾರ, ಮುತ್ತಿಗೆ ಸೇರಿದಂತೆ ಈ ಭಾಗದ ಹಲವು ಗ್ರಾಮಗಳ ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಇದರಿಂದಾಗಿ ನೀರಿಲ್ಲದೇ ಕೃಷಿ ಚಟುವಟಿಕೆಗೆ ತೊಡಕಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸ್ಥಳಕ್ಕಾಗಮಿಸಿದ ಸೆಸ್ಕ್ ಎಂಡಿ ಸೋಮಶೇಖರ್, ಇಇ ಪ್ರದೀಪ್ ರೈತರ ಅಹವಾಲು ಆಲಿಸಿ ಫೆ.೧೨ ರಿಂದ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಯಿತು.

ಪ್ರತಿಭಟನೆಯಲ್ಲಿ ರೈತ ಸಂಘದ ಹೊನ್ನೂರು ಪ್ರಕಾಶ್, ನಟರಾಜು, , ಮಂಜು, ಪ್ರಕಾಶ್, ನಿಜಗುಣ, ರಾಜು, ಚೇತನ್, ಮಲ್ಲೇಶ್, ವೆಂಕಟೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.