ಸಾರಾಂಶ
ಹಗರಿಬೊಮ್ಮನಹಳ್ಳಿ ಪಟ್ಟಣದ ಎಪಿಎಂಸಿ ರಸ್ತೆಯಲ್ಲಿನ ಕಾರೊಂದರ ಬಳಿ ಮಂಗಳವಾರ ಬೆಳಗ್ಗೆ ಕರಡಿ ಪ್ರತ್ಯಕ್ಷವಾಗಿದ್ದು, ಪಟ್ಟಣದ ಜನತೆ ಆತಂಕಗೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿ
ಪಟ್ಟಣದ ಎಪಿಎಂಸಿ ರಸ್ತೆಯಲ್ಲಿನ ಕಾರೊಂದರ ಬಳಿ ಮಂಗಳವಾರ ಬೆಳಗ್ಗೆ ಕರಡಿ ಪ್ರತ್ಯಕ್ಷವಾಗಿದ್ದು, ಪಟ್ಟಣದ ಜನತೆ ಆತಂಕಗೊಂಡಿದ್ದಾರೆ.ಕರಡಿ ಇದಕ್ಕೂ ಮೊದಲು ಕೆವಿಒಆರ್ ಕಾಲೋನಿಯ ದಾದಾಪೀರ್ ಇವರ ಕಾರಿನ ಬಳಿ ಪತ್ತೆಯಾಗಿದೆ. ಕರಡಿ ಪ್ರತ್ಯಕ್ಷವಾಗಿರುವುದನ್ನು ಮೊದಲ ಬಾರಿಗೆ ಕಂಡ ಬಾಲಕನೊಬ್ಬ ದಿಗಿಲುಗೊಂಡು ಕೂಗಿಕೊಳ್ಳುತ್ತಿದ್ದಂತೆ ಓಣಿಯ ಜನ ಜಮಾವಣೆಗೊಂಡರು. ಕಟ್ಟಿಗೆ ಹಿಡಿದು ಬೆನ್ನಟ್ಟಲು ಬರುವ ಮುನ್ನವೇ ಕರಡಿ ಕ್ಷಣಾರ್ಧದಲ್ಲೆ ಕಣ್ಮರೆಯಾಗಿತ್ತು. ಇದಕ್ಕೂ ಮುನ್ನ ಪಟ್ಟಣದ ಎಪಿಎಂಸಿ ಮುಂಭಾಗದದ ಮೂಲಕ ಕೊಟ್ಟೂರು ಪ್ರಮುಖ ರಸ್ತೆಯಲ್ಲಿ ರಾಜಾರೋಷವಾಗಿ ಸಂಚರಿಸುತ್ತಿದ್ದ ದೃಶ್ಯ ಪುರಸಭೆ ಸದಸ್ಯ ದಾದಾಪೀರ್ ಇವರ ಅಂಗಡಿಯಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಹಿಂದೆ ಪಟ್ಟಣದ ಪ್ರಸಿದ್ಧಿ ಶಾಲೆ ಬಳಿಯ ಖಾಲಿ ನಿವೇಶನದಲ್ಲಿ ಪತ್ತೆಯಾಗಿತ್ತು. ಇದೀಗ ಪ್ರಮುಖ ರಸ್ತೆಯಲ್ಲೆ ಸಂಚಾರ ಆರಂಭಿಸಿರುವುದು ಕಂಡು ಪಟ್ಟಣದ ನಾಗರೀಕರು ಚಿಂತೆಗೀಡಾಗಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಉಪವಲಯ ಅರಣ್ಯಾಧಿಕಾರಿ ಕರಿಬಸಪ್ಪ ಅಡವಿಹಳ್ಳಿ ಮಾತನಾಡಿ, ಕರಡಿ ಪತ್ತೆಹಚ್ಚಲು ಸತತ ೩ ದಿನಗಳ ವರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕಣ್ಗಾವಲಿರಿಸಲಾಗುವುದು. ಪಟ್ಟಣದ ಜನತೆ ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ತಿಳಿಸಿದರು.