ಖಾಲಿ ಠರಾವಿಗೆ ಸಹಿ; ಸಾಮಾನ್ಯ ಸಭೆಯಲ್ಲಿ ಗದ್ದಲ

| Published : Dec 22 2024, 01:32 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಖಾಲಿ ಠರಾವು ಪ್ರತಿಯಲ್ಲಿ ಸಹಿ ಮಾಡಿಸಿಕೊಂಡ ವಿಷಯಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ವಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಇದೇ ವಿಷಯಕ್ಕೆ ವಾಗ್ವಾದ ನಡೆದ ಪರಿಣಾಮ ಸಾಮಾನ್ಯ ಸಭೆಯನ್ನು ಮುಂದೂಡಿದ ಘಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ಖಾಲಿ ಠರಾವು ಪ್ರತಿಯಲ್ಲಿ ಸಹಿ ಮಾಡಿಸಿಕೊಂಡ ವಿಷಯಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ವಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಇದೇ ವಿಷಯಕ್ಕೆ ವಾಗ್ವಾದ ನಡೆದ ಪರಿಣಾಮ ಸಾಮಾನ್ಯ ಸಭೆಯನ್ನು ಮುಂದೂಡಿದ ಘಟನೆ ನಡೆಯಿತು.

ನಗರದ ಮಹಾನಗರ ಪಾಲಿಕೆ ಸಂಭಾಗಣದಲ್ಲಿ ಶನಿವಾರ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಖಾಲಿ ಠರಾವು ಪ್ರತಿಯ ಮೇಲೆ ಸಹಿ ಮಾಡಿಸಿಕೊಂಡಿರುವ ಸಭೆಯಲ್ಲಿ ಪ್ರಬಲವಾಗಿ ಪ್ರತಿಧ್ವನಿಸಿತು. ಇದರಿಂದ ಮೇಯರ್ ಮೆಹಜಬೀನ್ ಹೊರ್ತಿ ಸಾಮಾನ್ಯ ಸಭೆಯನ್ನು‌ ಮುಂದೂಡಿ ಮೊಟಕುಗೊಳಿಸಿದರು.ಇದು ವಿಪಕ್ಷ ಬಿಜೆಪಿ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದ್ದು, ಸಹಿ ಮಾಡುವಾಗ ಠರಾವಿನಲ್ಲಿ ವಿಷಯಗಳೇ ಇಲ್ಲದ್ದನ್ನು ಸದಸ್ಯರಾದ ರಾಜಶೇಖರ ಮಗಿಮಠ, ಶಿವರುದ್ರ ಬಾಗಲಕೋಟ ಗಮನಿಸಿ ಆ ಪ್ರತಿಯನ್ನು ಬಹಿರಂಗವಾಗಿಯೇ ಪ್ರದರ್ಶಿಸಿದರು. ಇದು ಗಂಭೀರವಾದ ಅಚಾತುರ್ಯವಾಗಿದ್ದು, ಖಾಲಿ ಠರಾವು ಎಂದರೆ ಹೇಗೆ ಎಂದು ಮೇಯರ್ ವೇದಿಕೆ ಮುಂದೆ ಬಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೇ, ಸಭೆಯಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಸದಸ್ಯರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದರೂ ಬಿಜೆಪಿ ಸದಸ್ಯರು ಪಟ್ಟು ಸಡಿಸಿಲಿಲ್ಲ. ನಾವೆಲ್ಲ ವಿಶ್ವಾಸದಿಂದ ಸಹಿ‌ ಮಾಡುತ್ತೇವೆ. ಅಚಾನಕ್ಕಾಗಿ ನಮ್ಮ ಕಣ್ಣಿಗೆ ಬೀಳದಿದ್ದರೆ ಹೇಗೆ? ಅದರಲ್ಲಿ ಏನು ಬೇಕಾದರೂ ಬರೆದುಕೊಂಡರೆ ಹೇಗೆ ಎಂದು ಪ್ರಶ್ನಿಸಿದರು. ಇದು ಪ್ರಕ್ರಿಯೆ ಅಲ್ಲ, ನಿಯಮ, ಇದು ಗಂಭೀರವಾದ ಸಮಸ್ಯೆ. ಈ ಎಲ್ಲ ಪ್ರಸಂಗಗಳಿಂದ ಸಾಕಷ್ಟು ಸಮಯ ವ್ಯರ್ಥವಾಗಿದ್ದು ಸಹ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.

ಆಗ ಕಾಂಗ್ರೆಸ್ ಸದಸ್ಯ ಅಶೋಕ ನ್ಯಾಮಗೌಡ ಮುಂತಾದವರು ಸಭೆ ಆರಂಭಿಸಿ ಎಂದು ಪಟ್ಟು ಹಿಡಿದರು. ಆಗ ಆರತಿ ಶಹಾಪೂರ ಮುಂತಾದವರು ಬಿಜೆಪಿ ಸದಸ್ಯರ ವಿರುದ್ಧ ಅಸಮಾಧಾನ ಹೊರಹಾಕಿ, ಈ ರೀತಿ ವೇದಿಕೆಗೆ ಧಾವಿಸಿ ಹೇಳುವುದು ಸರಿಯಲ್ಲ. ಮೇಯರ್ ಅವರಿಗೆ ಗೌರವ ಕೊಡಿ ಎಂದರು. ಈ ವೇಳೆ ಪರಸ್ಪರ ವಾಗ್ವಾದ ಜೋರಾದ ಹಿನ್ನೆಲೆಯಲ್ಲಿ ಮೇಯರ್ ಮೆಹಜಬೀನ್ ಹೊರ್ತಿ ಸಭೆಯನ್ನು‌ ಮುಂದೂಡಿದರು.

ಸಭೆಯೇ ಕಾನೂನು ಬಾಹಿರ:

ಸಾಮಾನ್ಯ ಸಭೆಯಲ್ಲಿ ಚರ್ಚಿಸಬೇಕಾದ ವಿಷಯ, ಕಳೆದ ಸಾಮಾನ್ಯ ಸಭೆಯಲ್ಲಿ ಸ್ವೀಕೃತವಾದ ಠರಾವು ಪ್ರತಿಯನ್ನು ಏಳು ದಿನಗಳ ಮುಂಚಿತವಾಗಿಯೇ ಒದಗಿಸುವುದು ನಿಯಮ. ಆದರೆ ಇಲ್ಲಿಯವರೆಗೂ ನಮಗೆ ಅದು ಸ್ವೀಕೃತವಾಗಿಲ್ಲ. ಪುರಸಭೆಯಲ್ಲೂ ಈ ರೀತಿ ವ್ಯವಸ್ಥೆ ಇಲ್ಲ ಎಂದು ಪಾಲಿಕೆ ಸದಸ್ಯ ರಾಜಶೇಖರ ಮಗಿಮಠ ಸಭೆಯ ಆರಂಭದಲ್ಲಿಯೇ ಅಸಮಾಧಾನ ವ್ಯಕ್ತಪಡಿಸಿದರು. ಈ ರೀತಿ ಸಭೆ ನಡೆಸುವುದೇ ಕಾನೂನು ಬಾಹಿರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಗ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಈ ವಿಳಂಬ ನೀತಿ ಅನುಸರಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.