ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯವಿದ್ಯಾರ್ಥಿಗಳ ಭವಿಷ್ಯದ ಹಿತ ದೃಷ್ಟಿಯಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಪಡಿಸದೆ ಮುಂದುವರೆಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಸಹಿ ಸಂಗ್ರಹ ಅಭಿಯಾನ ಆರಂಭಿಸಲಾಗಿದೆ ಎಂದು ಮೈಸೂರು ವಿಶ್ವ ವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಈ.ಸಿ.ನಿಂಗರಾಜ್‌ಗೌಡ ಹಾಗೂ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಪ್ರೊ.ಜಿ.ಸಿ.ರಾಜಣ್ಣ ತಿಳಿಸಿದ್ದಾರೆ.
ಕಳೆದ ಚುನಾವಣೆಯ ನಂತರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಸರ್ಕಾರ ಕೇವಲ ರಾಜಕೀಯ ಧೋರಣೆಯನ್ನು ಮುಂದಿಟ್ಟುಕೊಂಡು ರಾಷ್ಟ್ರೀಯ ಶಿಕ್ಷಣ ನೀತಿ ವಿರುದ್ಧವಾಗಿ ನಿಲುವು ತೆಗೆದುಕೊಂಡಿದೆ. ರಾಜ್ಯ ಶಿಕ್ಷಣ ನೀತಿ ರಚನೆಗೆ ಸಮಿತಿಯೊಂದನ್ನು ರಚಿಸಿದೆ. ಆದರೆ, ಸಮಿತಿ ರಚನೆ, ಅದರ ಉದ್ದೇಶ ಹಾಗೂ ಅದು ಮಾಹಿತಿ ಸಂಗ್ರಹಿಸುತ್ತಿರುವ ವಿಧಾನ ಕುರಿತು ಶಿಕ್ಷಣ ಕ್ಷೇತ್ರದಲ್ಲಿ ಭಾರೀ ಅಸಮಾಧಾನ ಸೃಷ್ಠಿಸಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕನ್ನಡ ಹಾಗೂ ಕನ್ನಡ ಸಂಸ್ಕೃತಿಯ ಪರಿಚಯ ಮಕ್ಕಳಿಗೆ ಎನ್‌ಇಪಿ ಅಳವಡಿಕೆಯಿಂದ ಸಾಧ್ಯವಿಲ್ಲ ಎಂಬ ಕಾರಣ ನೀಡಿ ಸರ್ಕಾರ ರಾಜ್ಯ ಶಿಕ್ಷಣ ನೀತಿ ಸಿದ್ಧಪಡಿಸಲು ರಚಿಸಿದ ಸಮಿತಿ ರಚನೆ ಕುರಿತು ಶಿಕ್ಷಣ ಕ್ಷೇತ್ರದವರಲ್ಲಿ ಅಸಹನೆಯಿದೆ. ಕನ್ನಡದವರಲ್ಲದವರು ಚುಕ್ಕಾಣಿ ಹಿಡಿದಿರುವ ಹಾಗೂ ಕನ್ನಡದವರಲ್ಲದವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಒಳಗೊಂಡಿರುವ ಸಮಿತಿ ಕನ್ನಡದ ಮಕ್ಕಳಿಗೆ ಯಾವ ರೀತಿಯ ನ್ಯಾಯ ಒದಗಿಸೀತು. ಈ ಮಣ್ಣಿನ ಸಂಸ್ಕೃತಿ ಕುರಿತು ಅಧ್ಯಯನ ಮಾಡಿ ಓದಿ, ಕೇಳಿ, ತಿಳಿದು ರಾಜ್ಯ ಶಿಕ್ಷಣ ನೀತಿಯನ್ನು ಸಿದ್ಧ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.
ನಾಲ್ಕು ವರ್ಷಗಳ ಪದವಿ ಕಾರ್ಯಕ್ರಮ ವಿದ್ಯಾರ್ಥಿಯ ಇಚ್ಛೆಗೆ ಬಿಟ್ಟಿದ್ದು, ಸಂಶೋಧನೆಯಲ್ಲಿ ತೊಡಗುವ ಅಥವಾ ನೌಕರಿಗಾಗಿ ತನ್ನನ್ನು ತೀವ್ರಗತಿಯಲ್ಲಿ ಸಿದ್ಧಪಡಿಸಿಕೊಳ್ಳುವ, ಉನ್ನತ ವ್ಯಾಸಂಗಕ್ಕಾಗಿ ವಿದೇಶದ ಅಥವಾ ಭಾರತೀಯ ವಿಶ್ವ ವಿದ್ಯಾಲಯದಲ್ಲಿ ದಾಖಲಾಗ ಬಯಸುವ ವಿದ್ಯಾರ್ಥಿಗಳು ಈ ಆನರ್ಸ್ ಪದವಿಯನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬ ಸ್ಪಷ್ಟತೆಯನ್ನು ಎನ್‌ಇಪಿ ನೀಡಿದೆ. ಓಪನ್ ಎಲೆಕ್ಟಿವ್ ಮತ್ತು ಎಸ್‌ಇಸಿ ಆಯ್ಕೆಯು ಈಗಾಗಲೇ ಚಾಲ್ತಿಯಲ್ಲಿರುವ ಸಿಬಿಸಿಎಸ್‌ನ ಭಾಗವಾಗಿದ್ದು, ಈ ವ್ಯವಸ್ಥೆ ಒಂದು ದಶಕದ ಹಿಂದಿನಿಂದಲೇ ಚಾಲ್ತಿಯಲ್ಲಿದೆ. ಸ್ನಾತಕೊತ್ತರ ವಿಭಾಗದಲ್ಲಿ ಅಳವಡಿಕೆಯಾದ ಈ ಪದ್ಧತಿಯನ್ನು ಬದಲಾಗುತ್ತಿರುವ ಔದ್ಯೋಗಿಕ ಕ್ಷೇತ್ರಗಳಿಗೆ ಅನುಕೂಲವಾಗಿ ಪದವಿಯ ನಂತರದಲ್ಲಿಯೇ ಅನುಕೂಲವಾಗುವಂತೆ ಎನ್‌ಇಪಿ ಸಲಹೆ ಮಾಡಿದೆ. ಸಿಬಿಎಸ್‌ಸಿ ಪದ್ಧತಿಯನ್ನು ಕರ್ನಾಟಕ ೨೦೧೮ ರಿಂದಲೇ ಆಚರಣೆಗೆ ತಂದಾಗಿದೆ ಎಂದು ತಿಳಿಸಿದ್ದಾರೆ.ಬಹು ಶಿಸ್ತೀಯ ಕಲಿಕೆ ಭಾರತದ ಶಿಕ್ಷಣ ಪರಂಪರೆಯಲ್ಲಿ ಬಹಳ ಹಿಂದಿನಿಂದಲೇ ಚಾಲ್ತಿಯಲ್ಲಿದೆ. ನಳಂದ, ತಕ್ಷಶಿಲಾ, ವಿಕ್ರಮಶೀಲ ವಿಶ್ವ ವಿದ್ಯಾಲಯಗಳು ವಿಶ್ವದ ಎಲ್ಲ ಭಾಗಗಳಿಂದ ವಿದ್ಯಾರ್ಥಿಗಳನ್ನು ಈ ಕಾರಣಕ್ಕಾಗಿಯೇ ಆಕರ್ಷಿಸುತ್ತಿದ್ದವು. ಬಹುಶಿಸ್ತಿಯ ಕಲಿಕೆಯ ಅವಕಾಶವನ್ನು ಯುಜಿಸಿ ೨೦೧೫ ರಿಂದಲೇ ವಿದ್ಯಾರ್ಥಿಗಳಿಗೆ ಅಧಿಕೃತವಾಗಿ ಅವಕಾಶ ಕಲ್ಪಿಸಿದೆ. ಅಧ್ಯಯನಗಳ ಮೂಲಕ ಶಿಕ್ಷಣದಿಂದ ಕೌಟುಂಬಿಕ ಹಾಗೂ ಇನ್ನಿತರ ಕಾರಣಗಳನ್ನು ಮುಂದಿಟ್ಟು ಶಿಕ್ಷಣದಿಂದ ಹೊರ ಬರುವವರ ಸಂಖ್ಯೆ ಗ್ರಾಮೀಣ ವಿಭಾಗದವರು ಮತ್ತು ಹೆಣ್ಣು ಮಕ್ಕಳು ಹೆಚ್ಚಿದ್ದಾರೆ. ಇಂತಹ ವಿದ್ಯಾರ್ಥಿಗಳಿಗೆ ಮಲ್ಟಿಪಲ್ ಎಕ್ಸಿಟ್ ಮತ್ತು ಡಿಪ್ಲೋಮಾ ಪದವಿ ಸರ್ಟಿಫಿಕೇಟ್‌ಗಳು ಹೆಚ್ಚು ಅನುಕೂಲವಾಗುತ್ತದೆ. ವಿದ್ಯಾರ್ಥಿಗಳು ತಾವು ಶಿಕ್ಷಣವನ್ನು ನಿಗದಿತ ಸಮಯದೊಳಗೆ ಹಿಂತಿರುಗಿ ಬಂದು ಮುಂದುವರೆಸುವ ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ.
ರಾಜಕಾರಣಕ್ಕಾಗಿ ಮಕ್ಕಳ ಭವಿಷ್ಯವನ್ನು ಬಲಿ ತೆಗೆದುಕೊಳ್ಳುವ ಆತುರದ ನಿರ್ಧಾರ ಸರಿಯಲ್ಲ. ಉನ್ನತ ಶಿಕ್ಷಣ ಕುರಿತ ನಿರ್ಣಯಗಳನ್ನು ಉನ್ನತ ಸಂಸ್ಥೆಗಳಾದ ಯುಜಿಸಿ ಹಾಗೂ ಏಐಸಿಟಿಇಗಳು ತೆಗೆದುಕೊಳ್ಳುತ್ತವೆಯಾದ್ದರಿಂದ, ಎಸ್‌ಇಪಿ ಸಮಿತಿ ಈ ಸಮಿತಿಗಳೊಂದಿಗೆ ಚರ್ಚಿಸಿದೆಯೇ ಎಂದು ಪ್ರಶ್ನಿಸಿದ್ದಾರೆ.ರಾಜ್ಯದ ಆಡಳಿತ ಸ್ವಾಮ್ಯದಲ್ಲಿ ಬರುವ ಶಾಲೆಗಳು ಮತ್ತು ಕಾಲೇಜುಗಳು ಮಾತ್ರ ರಾಜ್ಯ ಶಿಕ್ಷಣ ಸಮಿತಿ ಸಲಹೆಯ ವ್ಯಾಪ್ತಿಗೆ ಬರುವುದರಿಂದ ಮುಖ್ಯವಾಗಿ ಖಾಸಗಿ ಒಡೆತನದಲ್ಲಿರುವ ಶಾಲೆಗಳು, ವಿಶ್ವವಿದ್ಯಾಲಯಗಳು ಎನ್‌ಇಪಿ ಅನ್ವಯ ಶಿಕ್ಷಣ ನೀಡಿದಲ್ಲಿ ರಾಜ್ಯದ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಮುಂದಿನ ವರ್ಷಗಳಲ್ಲಿ ಕಡಿಮೆಯಾಗಬಹುದು. ಅಲ್ಲದೇ, ಖಾಸಗಿ ಶಾಲೆಗಳು ಕ್ರಮೇಣ ರಾಜ್ಯದ ಬೋರ್ಡ್‌ನಿಂದ ಹೊರಬಂದು ಕೇಂದ್ರದ ಬೋರ್ಡ್‌ಗಳನ್ನು ತಮ್ಮ ಶಾಲೆಗಳಲ್ಲಿ ಅಳವಡಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.
ಜಾಗತಿಕ ಮಟ್ಟಕ್ಕೆ ನಮ್ಮ ವಿದ್ಯಾರ್ಥಿಗಳನ್ನು ರೂಪಿಸಲು ಸನ್ನದ್ಧರಾಗಬೇಕಾದ ಸಂದರ್ಭದಲ್ಲಿ ಬದಲಾಗುತ್ತಿರುವ ಉದ್ಯೋಗ ಕ್ಷೇತ್ರದ ಅಗತ್ಯತೆಗೆ ಅನುಗುಣವಾಗಿ ಶಿಕ್ಷಣವನ್ನು ರೂಪಿಸಬೇಕಾದ ಅಗತ್ಯವಿರುವ ಹಿನ್ನೆಲೆಯಲ್ಲಿ ಕೇವಲ ರಾಜಕಾರಣವನ್ನು ಮುಂದಿಟ್ಟುಕೊಂಡು ರಾಷ್ಟ್ರೀಯ ಶಿಕ್ಷಣ ನೀತಿ ರ ವಿರುದ್ಧ ನಿರ್ಣಯತೆಗೆದುಕೊಂಡಿದು ದುರಂತದ ವಿಷಯ ಎಂದಿದ್ದಾರೆ.