ಪೊಲೀಸ್ ಪೇದೆಗಳಿಂದ ನ್ಯಾಯಕ್ಕಾಗಿ ಆಗ್ರಹಿಸಿ ಮೌನ ಪ್ರತಿಭಟನೆ

| Published : May 12 2024, 01:15 AM IST / Updated: May 12 2024, 09:46 AM IST

ಪೊಲೀಸ್ ಪೇದೆಗಳಿಂದ ನ್ಯಾಯಕ್ಕಾಗಿ ಆಗ್ರಹಿಸಿ ಮೌನ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ತಮ್ಮದಲ್ಲದ ತಪ್ಪಿಗೆ ನಮಗೇಕೆ ಶಿಕ್ಷೆ? ಎಂದು ಪ್ರಶ್ನಿಸಿದ್ದಲ್ಲದೇ ತಮ್ಮನ್ನು ಕುಟುಂಬ ಸಮೇತ ಶೂಟ್ ಮಾಡಿಬಿಡಿ, ಇಲ್ಲಿಯೇ ಸತ್ತು ಹೋಗುತ್ತೇವೆಂದು ಅಳಲು ತೋಡಿಕೊಂಡರು.

 ಚಿಕ್ಕಬಳ್ಳಾಪುರ :  ತಮಗಾದ ಅನ್ಯಾಯವನ್ನು ಸರಿಪಡಿಸಿ ನ್ಯಾಯ ದೊರಕಿಸಿ ಕೊಡುವಂತೆ ಆಗ್ರಹಿಸಿ ಇಬ್ಬರು ಪೊಲೀಸ್ ಪೇದೆಗಳು ಶನಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ಕುಟುಂಬ ಸಮೇತ ಮೌನ ಪ್ರತಿಭಟನೆ ನಡೆಸಿದರು.

ಜಿಲ್ಲೆಯ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ಪೇದೆ ಅಶೋಕ್ ಮತ್ತು ಚೇಳೂರು ಪೊಲೀಸ್ ಠಾಣೆಯ ಮುಖ್ಯಪೇದೆ ನರಸಿಂಹಮೂರ್ತಿ ಇಬ್ಬರೂ ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಪ್ರತಿಭಟನೆ ನಡೆಸಿದರು.

ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ರವರು ನಮ್ಮದಲ್ಲದ ತಪ್ಪಿಗೆ ನಮ್ಮನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ. ನಮಗೆ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಕಿರುಕುಳ ಮತ್ತು ಆನ್ಯಾಯವಾಗಿದೆ. ಅಮಾನತುಗೊಳಿಸಿ ಆರು ತಿಂಗಳು ಕಳೆದಿವೆ. ಅಮಾನತು ಆದೇಶ ಹಿಂಪಡೆದಿಲ್ಲ. ನಮಗೆ ನ್ಯಾಯ ಒದಗಿಸಬೇಕು. ನಮ್ಮ ಮೇಲಿನ ಆರೋಪದ ಬಗ್ಗೆ‌ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಎಸ್‌ಪಿ ಡಿ.ಎಲ್.ನಾಗೇಶ್ ವಿರುದ್ಧ ಪೊಲೀಸ್ ಪೇದೆಗಳು ಆಕ್ರೋಶ ವ್ಯಕ್ತಪಡಿಸಿದರು.

ತಮ್ಮದಲ್ಲದ ತಪ್ಪಿಗೆ ನಮಗೇಕೆ ಶಿಕ್ಷೆ? ಎಂದು ಪ್ರಶ್ನಿಸಿದ್ದಲ್ಲದೇ ತಮ್ಮನ್ನು ಕುಟುಂಬ ಸಮೇತ ಶೂಟ್ ಮಾಡಿಬಿಡಿ, ಇಲ್ಲಿಯೇ ಸತ್ತು ಹೋಗುತ್ತೇವೆಂದು ಅಳಲು ತೋಡಿಕೊಂಡರು.

ಡಾ. ಅಂಬೇಡ್ಕರ್ ಭಾವಚಿತ್ರ ಹಿಡಿದು ಪತ್ನಿ ಮಕ್ಕಳೊಂದಿಗೆ ಧರಣಿ

ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ಪೇದೆ ಅಶೋಕ್ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಮತ್ತು ಚೇಳೂರು ಪೊಲೀಸ್ ಠಾಣೆಯ ಮುಖ್ಯಪೇದೆ ನರಸಿಂಹಮೂರ್ತಿ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಕಚೇರಿ ಮುಂಭಾಗದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

ಧರಣಿ ಕುಳಿತ ಪೊಲೀಸ್ ಪೇದೆಗಳ ಮನವೊಲಿಸಿ ಪ್ರತಿಭಟನೆ ನಿಲ್ಲಿಸಲು ಅಪರ ಪೋಲಿಸ್ ವರಿಷ್ಠಾಧಿಕಾರಿ ರಾಜಾ ಇಮಾಂ ಖಾಸೀಂ ಮತ್ತು ಚಿಕ್ಕಬಳ್ಳಾಪುರ ಡಿವೈಎಸ್ ಪಿ ಎಸ್.ಶಿವಕುಮಾರ್ ಸಾಕಷ್ಟು ಪ್ರಯತ್ನಿಸಿದರಾದರೂ ಪೊಲೀಸ್ ಪೇದೆಗಳು ಪಟ್ಟು ಬಿಡದೇ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ಸ್ಥಳಕ್ಕೆ ಬರ ಬೇಕೆಂದು ಪಟ್ಟು ಹಿಡಿದರು. ಎಸ್ ಪಿ ಯವರು ಇಲ್ಲದೇ ಇರುವುದರಿಂದ ತಮಗೆ ಮನವಿ ಪತ್ರ ನೀಡುವಂತೆ ಅಪರ ಪೊಲೀಸ್ ವರಿಷ್ಠಾಧಿಕಾರಿ ರಾಜಾ ಇಮಾಂ ಖಾಸೀಂ ಕೊನೆಗೂ ಯಶಸ್ವಿಯಾದರು.

ಮನವಿ ಪತ್ರ ಸ್ವೀಕರಿಸಿದ ಅಪರ ಪೋಲಿಸ್ ವರಿಷ್ಠಾಧಿಕಾರಿ ರಾಜಾ ಇಮಾಂ ಖಾಸೀಂರವರು ದೂರವಾಣಿ ಮೂಲಕ ಐಜಿಪಿ ರವಿಕಾಂತೇಗೌಡರನ್ನು ಸಂಪರ್ಕಿಸಿದರಲ್ಲದೇ, ಧರಣಿ ನಿರತ ಪೊಲೀಸ್ ಪೇದೆಗಳೊಂದಿಗೂ ಸಹ ಮಾತನಾಡಿಸಿದಾಗ ಧರಣಿ ಕೈ ಬಿಟ್ಟರು.

ತಮ್ಮ ವಿರುದ್ಧ ಪೊಲೀಸ್ ಪೇದೆಗಳು ಧರಣಿ ನಡೆಸುತ್ತಿರುವ ಕುರಿತು ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆಯಾಗಿದ್ದು, ಧರಣಿ ಮತ್ತು ಪ್ರತಿಭಟನೆ ಮಾಡಲು ಅವಕಾಶವಿಲ್ಲ, ಈ ಕಾನ್ಸ್ ಸ್ಟೇಬಲ್ ಗಳು ಧರಣಿ ಮಾಡುವುದು ಎಷ್ಟು ಸರಿ? ಅವರ ಅಹವಾಲುಗಳೇನಾದರೂ ಇದ್ದರೆ ಇಲಾಖೆಗೆ ಸಲ್ಲಿಸಲಿ ಅಥವಾ ನನ್ನ ಮೇಲಿನ ಅಧಿಕಾರಿಗಳಿಗೆ ನೀಡಲಿ, ನಿಯಮನುಸಾರ ಇಲಾಖೆ ಕ್ರಮ ತೆಗೆದುಕೊಳ್ಳುತ್ತದೆ, ಅದು ಬಿಟ್ಟು ಈ ರೀತಿ ಪ್ರತಿಭಟನೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.