ಸಾರಾಂಶ
ವಿವಿಧ ಕಾಮಗಾರಿ ವೀಕ್ಷಣೆ । ಶೀಘ್ರ ಪೂರ್ಣಗೊಳಿಸಲು ಸೂಚನೆ
ಕನ್ನಡಪ್ರಭ ವಾರ್ತೆ ಚಾಮರಾಜನಗರಪಶು ಸಂಗೋಪನೆ, ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಪ್ರಾಧಿಕಾರದ ವತಿಯಿಂದ ನಡೆಯಲಿರುವ ಉಚಿತ ಸಾಮೂಹಿಕ ವಿವಾಹ ಸಿದ್ದತೆ ಹಾಗೂ ಬೆಟ್ಟದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ದೀಪದ ಒಡ್ಡುವಿನಲ್ಲಿ ಇರುವ ಮಲೆ ಮಹದೇಶ್ವರರ ಪ್ರತಿಮೆ ಕೆಳಭಾಗದಲ್ಲಿ ನಿರ್ಮಿಸಲಾಗುತ್ತಿರುವ ಮಲೆ ಮಹದೇಶ್ವರರ ಪವಾಡ, ಕಥಾ ಸಂಗತಿಗಳನ್ನು ವಿವರಿಸುವ ಚಿತ್ರ ನಿರ್ಮಾಣ ಕಾಮಗಾರಿಯನ್ನು ಸಚಿವರು ವೀಕ್ಷಿಸಿದರು.ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪ್ರತಿಮೆ ಸ್ಥಳಕ್ಕೆ ತೆರಳುವ ರಸ್ತೆ ಕಾಮಗಾರಿಯನ್ನು ಸಹ ಶೀಘ್ರ ಪೂರ್ಣಗೊಳಿಸಲು ನಿರ್ದೇಶನ ನೀಡಿದರು.
ಭಕ್ತಾದಿಗಳು ತಂಗಲು ನಿಮಾಣ ಮಾಡಲಾಗುತ್ತಿರುವ 512 ವಸತಿ ಗೃಹಗಳ ಕಾಮಗಾರಿ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಅಗತ್ಯ ಸೂಚನೆಗಳನ್ನು ನೀಡಿ ತ್ವರಿತವಾಗಿ ಕೆಲಸ ಮುಗಿಸುವಂತೆ ತಿಳಿಸಿದರು. ನಿರ್ಮಾಣ ಹಂತದಲ್ಲಿರುವ ಕ್ಯೂಲೈನ್ ಕಾಮಗಾರಿ ವೀಕ್ಷಿಸಿ ಸೂಕ್ತ ನಿರ್ದೇಶನ ನೀಡಿದರು. ಸೋಲಾರ್ ಪ್ಲಾಂಟ್, ಒಳಚರಂಡಿ ಕೆಲಸಗಳನ್ನು ಪರಿಶೀಲಿಸಿದರು.ಬಳಿಕ ನಾಗಮಲೆ ಭವನದಲ್ಲಿ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವರು ಪ್ರಾಧಿಕಾರದ ವತಿಯಿಂದ ಭಕ್ತಾದಿಗಳಿಗೆ ಕೈಗೊಳ್ಳಲಾಗಿರುವ ಕಾಮಗಾರಿ ನಿರ್ವಹಣೆಗೆ ವಿಳಂಬ ಮಾಡಬಾರದು. ಕಾಲಮಿತಿಯೊಳಗೆ ಎಲ್ಲಾ ಕೆಲಸಗಳು ಪೂರೈಸಬೇಕು. ಭಕ್ತಾದಿಗಳಿಗೆ ಸಮರ್ಪಕವಾಗಿ ಮೂಲಸೌಕರ್ಯ ತಲುಪಿಸಬೇಕೆಂದು ತಿಳಿಸಿದರು.
ಆ.21ರಂದು ಪ್ರಾಧಿಕಾರದ ವತಿಯಿಂದ ನಡೆಸಲಾಗುತ್ತಿರುವ ಉಚಿತ ಸಾಮೂಹಿಕ ವಿವಾಹಕ್ಕೆ ನೋಂದಣಿಯಾಗಿರುವ ಬಗ್ಗೆ ವಿವರ ಪಡೆದ ಜಿಲ್ಲಾ ಉಸ್ತುವಾರಿ ಸಚಿವರು ಅಚ್ಚುಕಟ್ಟಾಗಿ ಸಾಮೂಹಿಕ ವಿವಾಹ ಮಹೋತ್ಸವ ನೆರವೇರಬೇಕು. ಇದಕ್ಕಾಗಿ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಸಾಲೂರು ಮಠದ ಶ್ರೀ ಶಾಂತ ಮಲ್ಲಿಕಾರ್ಜುನಸ್ವಾಮಿ, ಶಾಸಕರಾದ ಎಂ.ಆರ್.ಮಂಜುನಾಥ್, ಎ.ಆರ್.ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ. ಕವಿತ, ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಇತರ ಅಧಿಕಾರಿಗಳು ಇದ್ದರು.