ಬೆಳ್ಳಿ ಬಾಗಿಲು ನಿರ್ಮಾಣ ಕಾರ್ಯ ಗುಣಮಟ್ಟದಾಗಿರಲಿ: ಶಾಸಕ ನೇಮರಾಜ ನಾಯ್ಕ್

| Published : Dec 22 2024, 01:33 AM IST

ಸಾರಾಂಶ

ಕೊಟ್ಟೂರೇಶ್ವರ ಹಿರೇಮಠದ ಮುಂಬಾಗಿಲಿಗೆ ಬೆಳ್ಳಿ ಕವಚ ಅಳವಡಿಸುವ ಕಾಮಗಾರಿ ಗುಣಮಟ್ಟದಲ್ಲಿ ನಡೆಯಬೇಕು.

ಕೊಟ್ಟೂರು: ಕೊಟ್ಟೂರೇಶ್ವರ ಹಿರೇಮಠದ ಮುಂಬಾಗಿಲಿಗೆ ಬೆಳ್ಳಿ ಕವಚ ಅಳವಡಿಸುವ ಕಾಮಗಾರಿ ಗುಣಮಟ್ಟದಲ್ಲಿ ನಡೆಯಬೇಕು ಎಂದು ಶಾಸಕ ಕೆ.ನೇಮರಾಜ ನಾಯ್ಕ್ ಹೇಳಿದರು.

ಶನಿವಾರ ಸ್ವಾಮೀಯ ದೇವಸ್ಥಾನದ ಮುಂಭಾಗದಲ್ಲಿ ₹1.08 ಕೋಟಿ ವೆಚ್ಚದ ಬೆಳ್ಳಿ ಬಾಗಿಲು ನಿರ್ಮಾಣ ಕಾಮಗಾರಿ, ದೇವಸ್ಥಾನದ ಬಲ ಭಾಗದಲ್ಲಿ ನೆರಳು ಸೌಲಭ್ಯ ಕಲ್ಪಿಸಲು ₹1 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲು ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

2025 ರ ಫೆಬ್ರವರಿಯಲ್ಲಿ ನಡೆಯುವ ಮಹಾ ರಥೋತ್ಸವದ ವೇಳೆಗೆ ಈ ಕಾಮಗಾರಿ ಅರ್ಥಪೂರ್ಣವಾಗಿ ಮುಗಿಯಬೇಕು. ದೇವಸ್ಥಾನದ ಈ ಎಲ್ಲ ಕಾಮಗಾರಿಗಳು ಯಾವುದೇ ಹಂತದಲ್ಲಿ ಕಳಪೆಯಾಗದಂತೆ ಸಂಬಂಧ ಪಟ್ಟವರು ಗಮನ ಹರಿಸಬೇಕು. ಕಾಮಗಾರಿ ಯಾವುದೇ ಹಂತದಲ್ಲಿ ನಿಗದಿತ ಅವಧಿಯೊಳಗೆ ಮುಗಿಯಬೇಕು. ಯಾವುದೇ ತೊಂದರೆ ಉಂಟಾಗದಂತೆ ಅಧಿಕಾರಿಗಳು ಗಮನ ಹರಿಸಬೇಕು ಎಂದರು.

ಶ್ರೀಸ್ವಾಮಿಯ ರಥೋತ್ಸವ ಜರುಗುವ ತೇರು ಬಯಲು ಪ್ರದೇಶದಲ್ಲಿ ₹1.08 ಕೋಟಿ ವೆಚ್ಚದಲ್ಲಿ ಸಿಸಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ರಥೋತ್ಸವಕ್ಕೆ ಯಾವುದೇ ತೊಂದರೆ ಬಾರದಂತೆ ಆಧುನಿಕ ತಂತ್ರಾಜ್ಞಾನ ಬಳಸಿ ಅತ್ಯುತ್ತಮ ರಸ್ತೆ ನಿರ್ಮಿಸಬೇಕು. ಸಿಸಿ ರಸ್ತೆ ಮತ್ತು ನೆರಳು ಕಲ್ಪಿಸುವ ಕಾಮಗಾರಿಯನ್ನು ಜಿಲ್ಲಾ ನಿರ್ಮಿತಿ ಕೇಂದ್ರದಿಂದ ನಿರ್ವಹಿಸಲಿದೆ ಎಂದು ಅವರು ಹೇಳಿದರು.

ದೇವಸ್ಥಾನಕ್ಕೆ ಸೇರಿದ ಇಟ್ಟಿಗಿ ರಸ್ತೆಯಲ್ಲಿನ ನಿವೇಶನದಲ್ಲಿ ಸಮುದಾಯ ಭವನವನ್ನು ಭಕ್ತರ ಅನುಕೂಲಕ್ಕಾಗಿ ನಿರ್ಮಿಸಲು ಈಗಾಗಲೇ ಯೋಜನೆ ರೂಪಿಸಿದ್ದು ಇದಕ್ಕೆ ₹60 ಲಕ್ಷ ಯೋಜನೆ ಸಿದ್ಧವಿದೆ ಎಂದರು.

ದೇವಸ್ಥಾನದಲ್ಲಿ ಕುಡಿಯುವ ನೀರಿಗೆ ಹೆಚ್ಚಿನ ತೊಂದರೆ ಆಗದಂತೆ 5000 ಲೀಟರ್ ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ ಯಂತ್ರ ಅಳವಡಿಸಿಕೊಳ್ಳುವಂತೆ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿಗೆ ಶಾಸಕರು ಸೂಚಿಸಿದರು.

ಜಿಪಂ ಮಾಜಿ ಸದಸ್ಯ ಎಂ.ಎಂ. ಹರ್ಷವರ್ಧನ್, ಪಪಂ ಅಧ್ಯಕ್ಷೆ ಬದ್ದಿ ರಮೇಶ್, ಸದಸ್ಯರಾದ ಮರಬದ ಕೊಟ್ರೇಶ್, ಬಾವಿಕಟ್ಟಿ ಶಿವಾನಂದ, ಮಾಜಿ ಸದಸ್ಯ ಬದ್ದಿ ದುರುಗೇಶ್, ಫಕ್ಕೀರಪ್ಪ, ಎಂ.ಎಂ.ಜೆ. ಶೋಬಿತ್, ಬೂದಿ ಶಿವಕುಮಾರ್, ಕರಿಬಸವನಗೌಡ, ಬೆಲೆಗೌಡರ ಸೋಮಶೇಖರಗೌಡ, ಬದ್ದಿ ಮರಿಸ್ವಾಮಿ, ತಹಶೀಲ್ದಾರ್ ಅಮರೇಶ್, ಪಪಂ ಮುಖ್ಯಾಧಿಕಾರಿ ನಸರುಲ್ಲಾ, ತಾಪಂ ಎಡಿ ವಿಜಯಕುಮಾರ್, ಧಾರ್ಮಿಕ ದತ್ತಿ ಸಿ.ಒ. ಹನುಂತಪ್ಪ, ಧರ್ಮಕರ್ತ ಎಂ.ಕೆ. ಶೇಖರಯ್ಯ, ಆಯಾಗಾರ ಬಳಗದ ಪ್ರೇಮಾನಂದಗೌಡ, ನಾಗರಾಜಗೌಡ, ಗುರುಸಿದ್ದನಗೌಡ, ರುದ್ರಮ್ಮ ಜೋಗತಿ ಇದ್ದರು.