ದೇಶಕ್ಕೆ ಮಾದರಿ, ಚಾರಿತ್ರಿಕ ದಾಖಲೆಯಾಗಲಿದೆ ‘ರಜತ ಸಂಭ್ರಮ-2025’: ರಾಜೇಂದ್ರ ಕುಮಾರ್‌

| Published : May 10 2025, 01:07 AM IST

ದೇಶಕ್ಕೆ ಮಾದರಿ, ಚಾರಿತ್ರಿಕ ದಾಖಲೆಯಾಗಲಿದೆ ‘ರಜತ ಸಂಭ್ರಮ-2025’: ರಾಜೇಂದ್ರ ಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಡಲತಡಿಯ ಮಂಗಳೂರು ನಗರದ ಬಂಗ್ರಕೂಳೂರಿನ ಗೋಲ್ಡ್‌ಫಿಂಚ್‌ ಸಿಟಿ ಮೈದಾನ ಮೇ 10 ರಂದು ಐತಿಹಾಸಿಕ ಸಮಾವೇಶವನ್ನು ಸಾಕ್ಷೀಕರಿಸಲು ಸಜ್ಜಾಗಿದೆ. ಕರಾವಳಿಯ ಸಹಕಾರಿ ಕ್ಷೇತ್ರವನ್ನು ಮೂರು ದಶಕದಿಂದ ಯಶಸ್ವಿಯಾಗಿ ಮುನ್ನಡೆಸಿ ದೇಶದಲ್ಲೇ ಗುರುತಿಸಿಕೊಂಡ ಅದ್ವಿತೀಯ ಸಾಧಕ ಡಾ.ಎಂ.ಎನ್‌.ರಾಜೇಂದ್ರಕುಮಾರ್‌ ಸಂದರ್ಶನ ಇಲ್ಲಿದೆ.

(ಕಡಲತಡಿಯ ಮಂಗಳೂರು ನಗರದ ಬಂಗ್ರಕೂಳೂರಿನ ಗೋಲ್ಡ್‌ಫಿಂಚ್‌ ಸಿಟಿ ಮೈದಾನ ಮೇ 10 ರಂದು ಐತಿಹಾಸಿಕ ಸಮಾವೇಶವನ್ನು ಸಾಕ್ಷೀಕರಿಸಲು ಸಜ್ಜಾಗಿದೆ. ಕರಾವಳಿಯ ಸಹಕಾರಿ ಕ್ಷೇತ್ರವನ್ನು ಮೂರು ದಶಕದಿಂದ ಯಶಸ್ವಿಯಾಗಿ ಮುನ್ನಡೆಸಿ ದೇಶದಲ್ಲೇ ಗುರುತಿಸಿಕೊಂಡ ಅದ್ವಿತೀಯ ಸಾಧಕ ಡಾ.ಎಂ.ಎನ್‌.ರಾಜೇಂದ್ರಕುಮಾರ್‌ ಅವರು ಕಟ್ಟಿ ಬೆಳೆಸಿದ ನವೋದಯ ಸ್ವ ಸಹಾಯ ಗುಂಪುಗಳ ‘ರಜತ ಸಂಭ್ರಮ’ ಅದ್ದೂರಿಯಾಗಿ ಗೋಲ್ಡ್‌ಫಿಂಚ್‌ ಸಿಟಿ ಮೈದಾನದಲ್ಲಿ ನಡೆಯಲಿದೆ. ಕರ್ನಾಟಕದ ರಾಜ್ಯಪಾಲರು, ಮುಖ್ಯಮಂತ್ರಿ, ಮಹಾರಾಷ್ಟ್ರದ ಮುಖ್ಯಮಂತ್ರಿ ಸಹಿತ ಗಣ್ಯಾತಿಗಣ್ಯರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾವೇಶಕ್ಕೆ ಸಿದ್ಧತೆಗಳು ಅಂತಿಮ ಹಂತದಲ್ಲಿದೆ. ನವೋದಯ ಗ್ರಾಮ ವಿಕಾಸ ಚಾರಿಟೆಬಲ್‌ ಟ್ರಸ್ಟ್‌ನ ಸಂಸ್ಥಾಪಕ ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌ ಅವರು ‘ಕನ್ನಡಪ್ರಭ’ಕ್ಕೆ ನೀಡಿದ ವಿಶೇಷ ಸಂದರ್ಶನ ಇಲ್ಲಿದೆ.)

ಪ್ರಶ್ನೆ- ನವೋದಯ ಸ್ವಸಹಾಯ ಗುಂಪುಗಳನ್ನು ರಚಿಸುವ ಆಲೋಚನೆ ಹೇಗೆ ಬಂತು?

ಉತ್ತರ- ದಶಕಗಳ ಹಿಂದೆ ಮಹಿಳೆಯರು ಸಾರ್ವಜನಿಕ ಸಮಾರಂಭಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಿರಲಿಲ್ಲ. ಅವರಿಗೆ ಹೆಚ್ಚಿನ ಆರ್ಥಿಕ ಸಂಪಾದನೆಯೂ ಇರಲಿಲ್ಲ. ಗ್ರಾಮೀಣ ಪ್ರದೇಶದ ಬಡ ಕುಟುಂಬಗಳ ಮಹಿಳೆಯರ ಸಂಘಟನೆ ಹಾಗೂ ಆರ್ಥಿಕ ಸಬಲೀಕರಣಕ್ಕಾಗಿ ಏನಾದರೂ ಮಾಡಬೇಕು ಎಂದು ಯೋಚಿಸಿದೆ. ಆಗ ಮನಸ್ಸಿನಲ್ಲಿ ಮೂಡಿ ಬಂದ ಕಲ್ಪನೆಯೇ ನವೋದಯ ಸ್ವ ಸಹಾಯ ಗುಂಪುಗಳ ರಚನೆ. ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಸುರಾಲ್‌ನಲ್ಲಿ 2000 ಇಸವಿಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ನವೋದಯ ಸ್ವ ಸಹಾಯ ಗುಂಪುಗಳಿಗೆ ಚಾಲನೆ ನೀಡಿದರು. ಆಗ ಸಹಕಾರ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್‌ ಅವರು ಸಮಾರಂಭದಲ್ಲಿ ಭಾಗವಹಿಸಿದ್ದರು. ಪ್ರಶ್ನೆ-ನವೋದಯ ಸ್ವಸಹಾಯ ಗುಂಪು ಸ್ಥಾಪನೆಗೆ ಮೂಲ ಪ್ರೇರಣೆ ಏನು?

ಉತ್ತರ-ಸ್ವಸಹಾಯ ಸಂಘ ಎಂದಾಗ ತಕ್ಷಣ ನೆನಪಾಗುವ ಹೆಸರು ಬಾಂಗ್ಲಾದೇಶದ ಆರ್ಥಿಕ ತಜ್ಞ ಮೊಹಮ್ಮದ್‌ ಯೂನಸ್‌. ಮಹಿಳಾ ಸಬಲೀಕರಣ ಉದ್ದೇಶದಿಂದ ಆರಂಭಿಸಿದ ಗ್ರಾಮೀಣ ಬ್ಯಾಂಕ್‌ ಬಾಂಗ್ಲಾ ದೇಶದಲ್ಲಿ ಅರ್ಥಕ್ರಾಂತಿಯನ್ನೇ ಮಾಡಿದೆ. ಯೂನಸ್‌ ಅವರ ಯೋಜನೆಯಾದ ಗ್ರಾಮೀಣ ಬ್ಯಾಂಕ್‌ ಹೆಮ್ಮೆರವಾಗಿ ಬೆಳೆದಿದೆ. ಇದು ಬಾಂಗ್ಲಾ ಮಹಿಳೆಯರು ಆರ್ಥಿಕವಾಗಿ ಸ್ವಾಭಿಮಾನದಿಂದ ಬದುಕಲು ಹೊಸ ಪಥವನ್ನು ತೋರಿಸಿದೆ. ಈ ಚಿಂತನೆಯ ಮೂಲವನ್ನು ಇರಿಸಿಕೊಂಡು ಸ್ವಸಹಾಯ ಸಂಘ ಆರಂಭಿಸಲು ನಬಾರ್ಡ್‌ ಯೋಜನೆ ಹಾಕಿಕೊಂಡಿತು. ನಬಾರ್ಡ್‌ ಚಿಂತನೆಯಂತೆ ಸ್ಥಾಪನೆಯಾದ ನವೋದಯ ಸ್ವಸಹಾಯ ಸಂಘ ಈಗ ಹೆಮ್ಮೆರವಾಗಿ ಬೆಳೆದಿದೆ. ಇದೀಗ ನವೋದಯ ಸ್ವಸಹಾಯ ಸಂಘ ರಜತ ಸಂಭ್ರಮವನ್ನು ವರ್ಷಾಚರಣೆಯಲ್ಲಿದೆ.

ಪ್ರಶ್ನೆ- ರಜತ ಸಂಭ್ರಮದ ಈ ಸಂದರ್ಭ ನವೋದಯ ಸ್ವಸಹಾಯ ಗುಂಪುಗಳ ಸಾಧನೆ ಬಗ್ಗೆ ಏನನ್ನಿಸುತ್ತಿದೆ?

ಉತ್ತರ-ನನಗೆ ನೂರಕ್ಕೆ ನೂರು ತೃಪ್ತಿ ಇದೆ. ನನ್ನ ಆಶಯ ಈಡೇರಿದೆ. ಜಾತಿ, ಮತಗಳನ್ನು ಪರಿಗಣಿಸದೆ ಎಲ್ಲ ವರ್ಗದವರೂ ಸಮಾನರು ಎಂಬ ಧ್ಯೇಯದೊಂದಿಗೆ ಹಳ್ಳಿ ಹಳ್ಳಿಗಳಲ್ಲಿ ನವೋದಯ ಸ್ವ ಸಹಾಯ ಗುಂಪುಗಳು ರಚನೆಯಾಗಿವೆ. ಗ್ರಾಮೀಣ ಪ್ರದೇಶದ ಚಿತ್ರಣವೇ ಬದಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಗೆ ನವೋದಯದ ಕಾರ್ಯವ್ಯಾಪ್ತಿ ವಿಸ್ತರಿಸಿ ಉತ್ತಮ ಪ್ರಗತಿ ಕಂಡಿದೆ. 5 ಲಕ್ಷಕ್ಕೂ ಅಧಿಕ ಸದಸ್ಯರಿದ್ದಾರೆ. ನವೋದಯ ಸ್ವಸಹಾಯ ಗುಂಪುಗಳು ಮಹಿಳೆಯರಿಗೆ ಆರ್ಥಿಕ ಶಕ್ತಿಯ ಜತೆಗೆ ಸಾಮಾಜಿಕ ಬದ್ಧತೆಗೂ ಕಾರಣವಾಗಿದೆ. ರೈತರ ಆತ್ಮಹತ್ಯೆಯಂತಹ ಪ್ರಕರಣವನ್ನು ಕಡಿಮೆ ಮಾಡಿದೆ. ಸಂಘವು ಸದಸ್ಯರ ಬದುಕಿನಲ್ಲಿ ಶಿಸ್ತು ಮೂಡಿಸಿದೆ. ಪ್ರಶ್ನೆ- ನವೋದಯ ಸ್ವಸಹಾಯ ಗುಂಪುಗಳು ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಹೇಗೆ ಸಹಕಾರಿಯಾಗಿವೆ ? ಉತ್ತರ-ನವೋದಯ ಸ್ವಸಹಾಯ ಗುಂಪುಗಳ ಉಳಿತಾಯ, ಸಾಲ ಸಹಿತ ಎಲ್ಲ ಆರ್ಥಿಕ ಚಟುವಟಿಕೆ ಆಯಾ ಗ್ರಾಮದ ಸಹಕಾರಿ ಸಂಘಗಳ ಮೂಲಕ ನಡೆಯುತ್ತದೆ. ಲಕ್ಷಾಂತರ ಮಹಿಳೆಯರು ಗುಂಪುಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಸ್ವಂತ ಗಳಿಕೆಯಿಂದ ಉಳಿತಾಯ ಮಾಡಿ, ಸಹಕಾರಿ ಸಂಘಗಳಿಂದ ಸಾಲ ಪಡೆದು ಸಾಮೂಹಿಕವಾಗಿ ಅಥವಾ ಸ್ವಂತ ಆದಾಯ ತರುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶೇ.ನೂರರಷ್ಟು ಸಾಲ ಮರು ಪಾವತಿ ಮಾಡುವ ಮೂಲಕ ಗುಂಪಿನ ಸದಸ್ಯರು ಪ್ರಾಮಾಣಿಕತೆ ಮೆರೆಯುತ್ತಿದ್ದಾರೆ. ಉಳಿತಾಯದ ಮಹತ್ವವನ್ನು ಅವರು ಕಲಿತಿದ್ದಾರೆ. ಸ್ವಸಹಾಯ ಗುಂಪುಗಳು ಸಶಕ್ತವಾಗಿ ಬೆಳೆದಿರುವುದು ಸಹಕಾರ ಸಂಘಗಳ ಬೆಳವಣಿಗೆಗೂ ಪೂರಕವಾಗಿದೆ.ಪ್ರಶ್ನೆ-ಮಹಿಳೆಯರ ಸಬಲೀಕರಣದಲ್ಲಿ ಸ್ವಸಹಾಯ ಸಂಘಗಳ ಪಾತ್ರ ಏನು?

ಉತ್ತರ-ನವೋದಯ ಸ್ವಸಹಾಯ ಸಂಘವು ಮಹಿಳಾ ಸಬಲೀಕರಣ, ಸ್ವಾಯತ್ತತೆ, ಆತ್ಮವಿಶ್ವಾಸ ಮತ್ತು ಸ್ನಾವಲಂಬನೆಯ ಪ್ರತೀಕವಾಗಿದೆ. ಮಹಿಳೆಯಲ್ಲಿ ಆರ್ಥಿಕ ಸ್ವಾತಂತ್ರ್ಯ, ಶಿಕ್ಷಣ ಮತ್ತು ಸ್ವಾಭಿಮಾನವನ್ನು ಹೆಚ್ಚಿಸಿದೆ. ಇದು ಮಹಿಳಾ ಸಬಲೀಕರಣಕ್ಕೆ ಹೊಸ ಭಾಷ್ಯ ಬರೆದಿದೆ. ಬಲಿಷ್ಠ ಹಾಗೂ ಸಮತೋಲಿತ ಸಮಾಜ ನಿರ್ಮಿಸಲು ಸಾಧ್ಯ ಎಂಬುದನ್ನು ನವೋಯದ ಸ್ವಸಹಾಯ ಸಂಘ ತೋರಿಸಿಕೊಟ್ಟಿದೆ.

ಪ್ರಶ್ನೆ-ನವೋದಯ ಸ್ವಸಹಾಯ ಸಂಘ ತನ್ನ ಸದಸ್ಯರಲ್ಲಿ ಆತ್ಮವಿಶ್ವಾಸ ಹೇಗೆ ಮೂಡಿಸಿದೆ?

ಉತ್ತರ-ಸಂಘದ ಸದಸ್ಯರಿಗೆ ಆರ್ಥಿಕ ಸವಲತ್ತು ಒದಗಿಸುವ ಜೊತೆಗೆ ಅವರಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನವನ್ನು ಟ್ರಸ್ಟ್‌ ನಿರಂತರವಾಗಿ ನೀಡುತ್ತಾ ಬರುತ್ತಿದೆ. ಸಂಘದ ಸದಸ್ಯರು ತಯಾರಿಸಿದ ಉತ್ಪನ್ನಗಳಿಗೆ ಯೋಗ್ಯ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ರಾಜ್ಯ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸುತ್ತಿದೆ. ಕುಂದಾಪುರದಲ್ಲಿ ಕುಂದೋತ್ಸವ, ನವಕುಂದೋತ್ಸವ ಮತ್ತು ಕುಡ್ಲೋತ್ಸವ ಹೆಸರಲ್ಲಿ ಸ್ವಸಹಾಯ ಗುಂಪುಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ಬೃಹತ್‌ ಮೇಳವನ್ನು ಯಶಸ್ವಿಯಾಗಿ ಸಂಘಟಿಸಿದೆ. ಸ್ವಸಹಾಯ ಸಂಘದ ಸದಸ್ಯರು ಸ್ವಂತಿಕೆಯಿಂದ ಬದುಕಲು ಟ್ರಸ್ಟ್‌ ಕಾರ್ಯಯೋಜನೆ ರೂಪಿಸಿದೆ. ಸಂಘಗಳ ಆರ್ಥಿಕ ಸ್ಥಿರತೆಯ ಜೊತೆಗೆ ಗ್ರಾಮ ಭಾರತದ ಕಲ್ಪನೆಯನ್ನು ಸ್ವಸಹಾಯ ಸಂಘಗಳ ಮೂಲಕ ಟ್ರಸ್ಟ್‌ ಸಾಕಾರಗೊಳಿಸುತ್ತಿದೆ.

ಪ್ರಶ್ನೆ- ನವೋದಯ ಚಾರಿಟೆಬಲ್‌ ಟ್ರಸ್ಟ್‌ಗೆ ಸರ್ಕಾರದಿಂದ ರೀತಿಯ ಪ್ರೋತ್ಸಾಹ ದೊರೆತಿದೆ.?

ಉತ್ತರ-ನವೋದಯ ಗ್ರಾಮ ವಿಕಾಸ ಚಾರಿಟೆಬಲ್‌ ಟ್ರಸ್ಟ್‌ಗೆ ನಾವು ಸರ್ಕಾರದಿಂದ ಯಾವುದೇ ನೆರವು ಪಡೆದಿಲ್ಲ. ಆದರೆ ನಮ್ಮ ಎಲ್ಲ ಒಳ್ಳೆಯ ಕೆಲಸಗಳನ್ನು ಸರ್ಕಾರ ಬೆಂಬಲಿಸಿದೆ. ಕೆಲವು ಸಚಿವರು ಅವರ ಜಿಲ್ಲೆಯಲ್ಲೂ ನವೋದಯ ಸ್ವಸಹಾಯ ಗುಂಪುಗಳ ರಚಿಸುವಂತೆ ಆಹ್ವಾನಿಸುತ್ತಿದ್ದಾರೆ. ರಜತ ಸಂಭ್ರಮ ಸಮಾರಂಭವನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ರಾಜ್ಯಪಾಲರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಹಿತ ಹಲವು ಸಚಿವರು ಭಾಗವಹಿಸುತ್ತಿದ್ದಾರೆ. ನವೋದಯ ಸ್ವಸಹಾಯ ಗುಂಪುಗಳ ಚಟುವಟಿಕೆ ವೀಕ್ಷಿಸುವ ಸಲುವಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಪ್ರಶ್ನೆ-ನವೋದಯ ಸಮಾವೇಶದಲ್ಲಿ ಮಹಿಳೆಯರು ಸಮವಸ್ತ್ರದಲ್ಲಿ ಭಾಗವಹಿಸುವ ಈ ಯೋಚನೆ ಯಾಕಾಗಿ ?ಉತ್ತರ-ನವೋದಯ ಸ್ವಸಹಾಯ ಗುಂಪುಗಳಲ್ಲಿ ಜಾತಿ, ಮತ, ಧರ್ಮದ ಬೇಧ ಇಲ್ಲ. ಬಡವ-ಶ್ರೀಮಂತ ಎನ್ನುವ ತಾರತಮ್ಯವೂ ಇಲ್ಲ. ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರು ಎನ್ನುವ ಭಾವನೆ ಮೂಡಿಸುವ ಸಲುವಾಗಿ ಸಮವಸ್ತ್ರ ವಿತರಿಸಿದ್ದೇವೆ. ಸುಮಾರು 1.5 ಲಕ್ಷಕ್ಕೂ ಅಧಿಕ ಮಹಿಳೆಯರು ನೀಲಿ ಬಣ್ಣದ ಸೀರೆ ಧರಿಸಿ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ. ದೇಶದಲ್ಲಿ ನೂರಾರು ಸಮಾವೇಶ ನಡೆದಿರಬಹುದು. ಆದರೆ 1.5 ಲಕ್ಷಕ್ಕೂ ಅಧಿಕ ಮಹಿಳೆಯರು ಸಮವಸ್ತ್ರ ಧರಿಸಿ ಭಾಗವಹಿಸಿದ ಸಮಾವೇಶ ಎಲ್ಲಿಯೂ ನಡೆದಿಲ್ಲ ಎನ್ನುವುದು ನನ್ನ ಭಾವನೆ. ಹಾಗಾಗಿ ನವೋದಯ ಸ್ವ ಸಹಾಯ ಗುಂಪುಗಳ ರಜತ ಸಂಭ್ರಮ ದೇಶಕ್ಕೆ ಮಾದರಿಯಾಗಲಿದೆ. ಚಾರಿತ್ರಿಕ ಸಮಾವೇಶವಾಗಲಿದೆ.ಪ್ರಶ್ನೆ- ಸಹಕಾರಿ ಕ್ಷೇತ್ರದಲ್ಲಿ ಇಷ್ಟೊಂದು ಸುದೀರ್ಘ ಕಾಲ ಯಶಸ್ಸು ಹೇಗೆ ಸಾಧ್ಯವಾಯಿತು ?

ಉತ್ತರ-ಸಹಕಾರಿ ಕ್ಷೇತ್ರದಲ್ಲಿ ಸೇವೆ ಮಾಡಲು ಕರಾವಳಿಯ ಜನತೆ ಅವಕಾಶ ನೀಡಿದ್ದಾರೆ. ಅವರ ವಿಶ್ವಾಸಕ್ಕೆ ಬದ್ಧನಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಬೇರೆ ಜಿಲ್ಲೆಗಳಲ್ಲ ಸಹಕಾರ ಕ್ಷೇತ್ರದಲ್ಲಿ ರಾಜಕೀಯ ನುಸುಳಿದೆ. ನಮ್ಮಲ್ಲಿ ರಾಜಕೀಯ ರಹಿತವಾಗಿ ಸಹಕಾರಿ ಕ್ಷೇತ್ರ ಮುನ್ನಡೆದಿದೆ. ಜಾತಿ ರಾಜಕೀಯವೂ ನಮ್ಮಲ್ಲಿ ನಡೆಯುವುದಿಲ್ಲ. 30 ವರ್ಷದಿಂದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುವ ಅವಕಾಶ ದೊರೆತಿದೆ. ಸಾಕಷ್ಟು ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಎಸ್‌ಸಿಡಿಸಿಸಿ ಬ್ಯಾಂಕ್‌ ಇಂದು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎನ್ನುವ ಹೆಮ್ಮೆ ನನಗಿದೆ.

ಪ್ರಶ್ನೆ-ನವೋದಯದ ಸಾಧನೆಗೆ ದೊರೆತ ಮನ್ನಣೆ ಹೇಗಿದೆ ?

ಉತ್ತರ- ಸಮಾನ ಮನಸ್ಕರ ನೆರವಿನಲ್ಲಿ ಟ್ರಸ್ಟ್‌ನ ಉದ್ದೇಶಿತ ಕಾರ್ಯಸಾಧನೆಗಳು ಸಫಲತೆ ಕಂಡಿವೆ. ನವೋದಯ ಟ್ರಸ್ಟ್‌ ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿದೆ. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ ನಿಯೋಜಿಸಲಾದ ಅಧಿಕಾರಿಗಳು ಸಮೀಕ್ಷೆ ನಡೆಸಿ ನವೋದಯ ಸ್ವ ಸಹಾಯ ಸಂಘಗಳ ಉತ್ತಮ ಗುಣಮಟ್ಟದ ಕಾರ್ಯ ವೈಖರಿಯನ್ನು ಪ್ರಶಂಸಿಸಿದ್ದಾರೆ. 2007, 2008, 2009, 2013, 2014ರ ಸಾಲಿನಲ್ಲಿ ನಬಾರ್ಡ್‌ನಿಂದ ಕರ್ನಾಟಕ ರಾಜ್ಯದಲ್ಲಿ ಅತ್ಯುತ್ತಮ ‘ಸ್ವಯಂ ಸೇವಾ ಸಂಸ್ಥೆ’ ಎಂಬ ಪ್ರಥಮ ಪ್ರಶಸ್ತಿ ನವೋದಯ ಟ್ರಸ್ಟ್‌ಗೆ ಸ್ವಸಹಾಯ ಸಂಘಗಳ ನಿರ್ವಹಣೆಗೆ ಲಭಿಸಿದೆ. 2009-10ರ ಸಾಲಿನಲ್ಲಿ ಕಿರು ಹಣಕಾಸು - ಸ್ವಸಹಾಯ ಸಂಘದ ಮೂಲಕ ಮಹಿಳಾ ಸಬಲೀಕರಣಕ್ಕೆ ಪ್ರತಿಷ್ಠಿತ ‘ರೋಟರಿ ಇಂಡಿಯಾ ಅಂತಾರಾಷ್ಟ್ರೀಯ ಪ್ರಶಸ್ತಿ’ ಟ್ರಸ್ಟ್‌ಗೆ ಲಭಿಸಿದೆ. ಇದೆಲ್ಲವೂ ನಮಗೆ ಸಂತಸ ತಂದಿದೆ..........

ಪ್ರಶ್ನೆ- ನವೋದಯ ರಜತ ಸಂಭ್ರಮದ ಅಂಗವಾಗಿ ಏನಾದರೂ ಹೊಸ ಯೋಜನೆ ಇದೆಯಾ ?ಉತ್ತರ-ಒಬ್ಬರಿಗೊಬ್ಬರು ಸಹಾಯ ಮಾಡುವುದು. ಒಗ್ಗಟ್ಟಿನಲ್ಲಿ ಬಲವಿದೆ ಎಂದು ತೋರಿಸುವುದು ನವೋದಯದ ಉದ್ದೇಶ. ಸರ್ಕಾರದ ಯೋಜನೆಗಳ ಹೊರತಾಗಿಯೂ ಬಡವರು ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಿದೆ. ಈಗ ದ.ಕ., ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಧಾರವಾಡ , ಚಿಕ್ಕಮಗಳೂರು, ದಾವಣಗೆರೆ ಸಹಿತ ಕೆಲವು ಜಿಲ್ಲೆಗಳಲ್ಲಿ ಸ್ವಸಹಾಯ ಸಂಘದ ಗುಂಪುಗಳಿವೆ. ಉಳಿದ ಜಿಲ್ಲೆಗಳಿಂದಲೂ ಬೇಡಿಕೆ ಬಂದಿದೆ. ಇದರ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುವುದು.