11ರಂದು ಮಾಧ್ಯಮಿಕ ಶಾಲಾ ನೌಕರರ ಸಂಘದ ಬೆಳ್ಳಿಹಬ್ಬ

| Published : May 08 2025, 12:34 AM IST

11ರಂದು ಮಾಧ್ಯಮಿಕ ಶಾಲಾ ನೌಕರರ ಸಂಘದ ಬೆಳ್ಳಿಹಬ್ಬ
Share this Article
  • FB
  • TW
  • Linkdin
  • Email

ಸಾರಾಂಶ

ಹುಕ್ಕೇರಿ ಮಾಧ್ಯಮಿಕ ಶಾಲಾ ನೌಕರರ ಪತ್ತಿನ ಸಹಕಾರಿ ಸಂಘದ ಬೆಳ್ಳಿಹಬ್ಬ ಮಹೋತ್ಸವದ ಸಮಾರಂಭವನ್ನು ಮೇ 11ರಂದು ಆಯೋಜಿಸಲಾಗಿದೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಶಿಕ್ಷಕ ಸಮುದಾಯದ ಆರ್ಥಿಕ ಬೆನ್ನೆಲುಬಾಗಿ ನಿಂತಿರುವ ಹುಕ್ಕೇರಿ ಮಾಧ್ಯಮಿಕ ಶಾಲಾ ನೌಕರರ ಪತ್ತಿನ ಸಹಕಾರಿ ಸಂಘದ ಬೆಳ್ಳಿಹಬ್ಬ ಮಹೋತ್ಸವದ ಸಮಾರಂಭವನ್ನು ಮೇ 11ರಂದು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಎಸ್.ಐ.ಸಂಬಾಳ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದ ಈ ಭಾಗದಲ್ಲಿ ಸಂಸ್ಥೆಯು ಶಿಕ್ಷಕರ ಜೀವನಾಡಿಯಾಗಿ ಸೇವೆ ಸಲ್ಲಿಸುತ್ತಿದೆ. ಇದರೊಂದಿಗೆ ಮಾಧ್ಯಮಿಕ ಶಾಲಾ ನೌಕರರ ಸರ್ವಾಂಗೀಣ ಆರ್ಥಿಕ ಪ್ರಗತಿಗೆ ಸದಾಕಾಲ ಶ್ರಮಿಸುತ್ತಿದೆ. ಇದುವರೆಗೆ ಸಂಸ್ಥೆಗೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಪರಂಪರೆ ಮುಂದುವರೆಸಲಾಗಿದೆ ಎಂದರು.

ಮೇ 11ರಂದು ಬೆಳಗ್ಗೆ 10.30ಕ್ಕೆ ರವದಿ ಫಾರ್ಮಹೌಸ್‌ನಲ್ಲಿ ಸಂಸ್ಥೆಯ 25ನೇ ವರ್ಷದ ಬೆಳ್ಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ಇದೇ ವೇಳೆ ಸಂಸ್ಥೆಯ ಮೇಲಂತಸ್ತಿನ ಕಟ್ಟಡ ಉದ್ಘಾಟಿಸಲಾಗುವುದು. ನಿಡಸೋಸಿ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವಿರಕ್ತಮಠದ ಶಿವಬಸವ ಸ್ವಾಮೀಜಿ, ಉಳ್ಳಾಗಡ್ಡಿ ಖಾನಾಪುರ ಬ್ರಹನ್ಮಠದ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಕ್ಯಾರಗುಡ್ ಅವುಜಿಕರ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಹೇಳಿದರು.

ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಟ್ಟಡ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಶಾಸಕ ನಿಖಿಲ್ ಕತ್ತಿ ಅಧ್ಯಕ್ಷತೆ ವಹಿಸುವರು. ತಾಲೂಕು ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಇಲಾಖೆ ಹಿರಿಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಭಾಗವಹಿಸುವರು ಎಂದರು.

2000ರಲ್ಲಿ ಸ್ಥಾಪನೆಯಾದ ಸಂಘವು ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹2.50 ಕೋಟಿ ಶೇರು ಬಂಡವಾಳ ಹೊಂದಿದೆ. ₹91 ಲಕ್ಷ ನಿಧಿಗಳಿದ್ದು ₹23 ಲಕ್ಷ ರಿಕರಿಂಗ್ ಠೇವುಗಳಿವೆ. ₹60 ಲಕ್ಷ ಮುದ್ದತಿ ಠೇವುಗಳಿದ್ದು ₹4.24 ಕೋಟಿ ದುಡಿಯುವ ಬಂಡವಾಳವಿದೆ. ₹6.17 ಕೋಟಿ ವಾರ್ಷಿಕ ವ್ಯವಹಾರ ಹೊಂದಿದೆ. ಸಾಲದ ಮಿತಿಯನ್ನು ₹9 ಲಕ್ಷಕ್ಕೆ ಏರಿಕೆ ಮಾಡಲಾಗಿದೆ ಎಂದರು.

ಸಂಸ್ಥೆಯ ಅಧ್ಯಕ್ಷ ಸಿ.ಎಂ.ದರಬಾರೆ ಮಾತನಾಡಿ, ಅನುದಾನಿತ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಶಾಲೆಯ ಬೋಧಕ-ಬೋಧಕೇತರ ಆರ್ಥಿಕ ಅನುಕೂಲಕ್ಕಾಗಿ ಜನ್ಮ ತಳೆದ ಈ ಸಂಸ್ಥೆಯು ಇಂದು ಹೆಮ್ಮರವಾಗಿ ಬೆಳೆದಿದೆ. ನೌಕರರ ವೈದ್ಯಕೀಯ ವೆಚ್ಚ, ಮಕ್ಕಳ ಮದುವೆ, ಶಿಕ್ಷಣಕ್ಕಾಗಿ ಸುದೀರ್ಫ ಅವಧಿಯವರೆಗೆ ಸಂಸ್ಥೆಯು ಸೇವೆ ಸಲ್ಲಿಸುತ್ತಿದೆ. ಸಂಪೂರ್ಣ ಗಣಕೀಕರಣ ಸೇರಿದಂತೆ ಆಧುನಿಕ ಸೌಲಭ್ಯಗಳನ್ನು ಅಳವಡಿಸಲಾಗಿದೆ ಎಂದರು.

ಸಂಘದ ಉಪಾಧ್ಯಕ್ಷ ಜಿ.ಎಚ್.ಮುತಾಲಿಕ, ನಿರ್ದೇಶಕರಾದ ಎಸ್.ಜೆ.ಕುಪ್ಪಾನಟ್ಟಿ, ಎಸ್.ಸಿ.ಮಾನಗಾಂವಿ, ಆರ್.ಬಿ.ನೂಲಿ, ಎಸ್.ಡಿ.ಬಾಗೇವಾಡಿ, ಆರ್.ಎ.ಬಡಿಗೇರ, ಬಿ.ಎಸ್.ನಾಗನೂರಿ, ಜೆ.ಎನ್.ಪಾಟೀಲ, ಎನ್.ಬಿ.ಕುಲಕರ್ಣಿ, ಸಲಹಾ ಸಮಿತಿಯ ಪಿ.ಎಸ್.ಹತ್ತಿ, ಬಿ.ಕೆ.ಯರಗಟ್ಟಿ, ಸಹ ಕಾರ್ಯದರ್ಶಿ ಲಕ್ಷ್ಮೀ ಮಠಪತಿ, ಕಾರ್ಯದರ್ಶಿ ಎಸ್.ಬಿ.ಅಡಿವೆಪ್ಪನಮಠ ಮತ್ತಿತರರು ಉಪಸ್ಥಿತರಿದ್ದರು.