ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸಾಮೂಹಿಕ ವಿವಾಹಗಳಲ್ಲಿ ವ್ಯಕ್ತಿಯ ಪ್ರತಿಷ್ಠೆ ವಿಜೃಂಭಿಸುವ ಬದಲು ಸರಳತೆ ಗೋಚರವಾಗುತ್ತದೆ ಎಂದು ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.ನಗರದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಸೋಮವಾರ ನಡೆದ 35ನೇ ವರ್ಷದ 5ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಕಾರ‍್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಉಳ್ಳವರದು ಹಾಗೂ ಬಡವರೂ ಮದುವೆ ಮಾಡಿಕೊಳ್ಳುತ್ತಾರೆ. ಕೆಲವರದು ಅರಮನೆಯಲ್ಲಿ, ಮತ್ತೆ ಕೆಲವರದು ವಿಮಾನ ಮೊದಲಾಗಿ ಮದುವೆಯಾಗುತ್ತದೆ. ಆದರೆ ಸರಳ ಸಾಮೂಹಿಕ ವಿವಾಹವಾದರೆ ಅದು ಆದರ್ಶದ ಮದುವೆ ಅನಿಸಿಕೊಳ್ಳುತ್ತದೆ ಎಂದರು.
ಶ್ರೀಮಂತರ ಮದುವೆಗಳಲ್ಲಿ ಪ್ರತಿಷ್ಠೆ ಎದ್ದುಕಾಣುತ್ತದೆ. ಸಾಮೂಹಿಕ ಮದುವೆಗಳು ನಡೆದರೆ ಪೋಷಕರಿಗೆ ಸಾಲ ಮಾಡಲು ಅವಕಾಶವಿರುವುದಿಲ್ಲ. ಶ್ರೀಮಠವು ಯಾವುದೇ ಜಾತಿಗೆ ಸೀಮಿತವಾಗಿಲ್ಲ. ಶಾಂತವೀರ ಶ್ರೀಗಳ ಗದ್ದುಗೆ ಇರುವ ಜಾಗದಲ್ಲಿ ವಿವಾಹಗಳು ನೆರವೇರುತ್ತಿವೆ. ಗುರುಗಳ ಆಶೀರ್ವಾದ ವಧು-ವರರ ಮೇಲೆ ಸದಾ ಇರುತ್ತದೆ. ಉತ್ತಮ ಬದುಕು ಕಟ್ಟಿಕೊಳ್ಳುವಂತೆ ಮನವಿ ಮಾಡಿದರು.ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಮಾತನಾಡಿ, ಜೀವನ ಎಂದರೆ ಒಬ್ಬರಿಗೊಬ್ಬರು ಕುಸ್ತಿ ಆಡುವುದಲ್ಲ. ಪರಸ್ಪರ ಹೊಂದಾಣಿಕೆ ಹಾಗೂ ಸಂಯಮದಿಂದ ನಡೆದುಕೊಳ್ಳುವುದಾಗಿದೆ. ಗಂಡ ಹೆಂಡತಿ ವಿದ್ಯಾವಂತರಿರುತ್ತಾರೆ. ಪ್ರತಿಷ್ಠೆ ಅಹಂಕಾರದಿಂದ ಎಷ್ಟೋ ಸಂಸಾರ ಮುರಿದುಬೀಳುವ ಘಟನೆಗಳು ಕಣ್ಣೆದೆರುಗಿವೆ. ಸತಿ-ಪತಿ, ಕುಟುಂಬದ ಸದಸ್ಯರ ನಡುವೆ ಪ್ರೀತಿ ಇರಬೇಕು ಇಲ್ಲವಾದರೆ ಮನಸ್ತಾಪಗಳಿಂದ ವಿಚ್ಛೇದನಕ್ಕೆ ದಾರಿಯಾಗುತ್ತದೆ ಎಂದರು.
ಅನೇಕ ವಿದ್ಯಾವಂತರ ಜೀವನ ಅಧೋಗತಿಗೆ ಹೋಗುತ್ತಿದೆ. ಇಬ್ಬರ ಮಧ್ಯೆ ಅನುಮಾನ ಅಪನಂಬಿಕೆ ಮೂಡಬಾರದು. ಅವಕ್ಕೆ ಔಷಧಿ ಇಲ್ಲ. ಹಾಗಾಗಿ ಸಂಸಾರ ಸುಸೂತ್ರವಾಗಿ ನಡೆಯಬೇಕಾದರೆ ಅಂಥವುಗಳಿಗೆ ಅವಕಾಶ ಮಾಡಿಕೊಡಬಾರದು. ನಮ್ಮದು ಬಸವತತ್ವ ಮಠ. ಆ ತತ್ವಗಳ ಆಧಾರದ ಮೇಲೆ ಇಲ್ಲಿ ವಿವಾಹಗಳು ನೆರವೇರುತ್ತಿವೆ ಎಂದರು.ನಿಪ್ಪಾಣಿಯ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಬಸವಣ್ಣನವರು ಹೇಳಿದಂತೆ ಇವನಾರವ ಇವನಾರವ ಎಂದೆನಿಸದೆ ಎಲ್ಲರನ್ನು ತಮ್ಮವರಂತೆ ಕಾಣಬೇಕಿದೆ. ಯಾವುದೇ ಜಾತಿ ಮತ, ಪಂಥ ತಾರತಮ್ಯ ಇಲ್ಲದೆ ಅಂದು ಸಾಮೂಹಿಕ ವಿವಾಹ ಮಾಡುತ್ತಿದ್ದರು. ಅದೇ ಪರಂಪರೆಯನ್ನು ಶ್ರೀಮಠವು ಮುಂದುವರೆಸಿಕೊಂಡು ಬಂದಿದೆ. ನವ ವಧು-ವರರು ಪರಸ್ಪರ ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಅನ್ಯೋನ್ಯ ಜೀವನ ನಡೆಸಬೇಕು. ತಂದೆ-ತಾಯಿ, ಅತ್ತೆ-ಮಾವನ ಜತೆ ಹೊಂದಾಣಿಕೆ ಮನೋಭಾವ ಇರಬೇಕು. ಇಲ್ಲದೇ ಹೋದರೆ ಸಂಸಾರದ ಬದುಕು ಗಾಳಿಗೆ ಸಿಕ್ಕ ದೀಪದಂತಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ 19 ಜೋಡಿ ವಧೂವರರು ದಾಪಂತ್ಯಕ್ಕೆ ಅಡಿ ಇಟ್ಟರು. ಜಮುರಾ ಕಲಾವಿದರಾದ ಉಮೇಶ್ ಪತ್ತಾರ್ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಚಿನ್ಮಯಾನಂದ ಸ್ವಾಗತಿಸಿದರು. ಟಿ.ಪಿ ಜ್ಞಾನಮೂರ್ತಿ ನಿರೂಪಿಸಿದರು.