ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು ಸುರತ್ಕಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (ಎನ್‌ಐಟಿಕೆ) ಇಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ತುರ್ತು ಸಹಾಯ, ಪ್ರತಿಕ್ರಿಯೆ ಮತ್ತು ಸಂವಹನ ಕೇಂದ್ರ (ಸರ್ಚ್) ಕಾರ್ಯಾರಂಭ ಮಾಡಿದೆ.
ಎನ್‌ಐಟಿಕೆ ಸುರತ್ಕಲ್‌ನಲ್ಲಿರುವ ಸೆಂಟರ್ ಫಾರ್ ಸಿಸ್ಟಮ್ ಡಿಸೈನ್ ನೇತೃತ್ವದಲ್ಲಿ ಈ ತುರ್ತು ರಕ್ಷಣೆಯ ಕರೆ ಸಹಿತ ನೆರವನ್ನು ನೀಡಲು ಸಾಧ್ಯವಾಗುವಂತೆ ಅಭಿವೃದ್ಧಿ ಪಡಿಸಲಾಗಿದೆ. ಇದು ಕರಾವಳಿ ಪ್ರದೇಶಗಳಿಗೆ ಅನುಗುಣವಾಗಿ ತುರ್ತು ಪರಿಸ್ಥಿತಿಗಳ ಸಂದರ್ಭ ಆಪತ್ಕಾಲಿನ ನೆರವಿನ ಬಗ್ಗೆ ಮಾಹಿತಿ ನೀಡಲು ಸಾಧ್ಯವಾಗಲಿದೆ.ವಿಶೇಷವೆಂದರೆ ಯಾವುದೇ ದೊಡ್ಡ ಮಟ್ಟದ ಅನಾಹುತ ಸಂಭವಿಸಿದಾಗ ಆಯಾ ಪ್ರದೇಶಕ್ಕೆ ಈ ಉಪಕರಣ, ಕ್ಯಾಬೀನ್ ಸಹಿತ ತೆರಳಿ ಆಪಾಯದಲ್ಲಿರುವವರನ್ನು ಸಂಪರ್ಕಿಸಿ ರಕ್ಷಣೆಗೆ ಬೇಕಾದ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ. ಇಲ್ಲಿ ಒಂದು ರೆಸ್ಕ್ಯೂಬೋಟ್, ಕಯಾಕಿಂಗ್, ಡ್ರೋಣ್, ತುರ್ತು ಔಷಧಿ ಕೊಂಡೊಯ್ಯಬಲ್ಲ ಸಣ್ಣ ಪ್ರಮಾಣದ ಡ್ರೋಣ್ , ಹೈರೆಸಲ್ಯೂಷನ್ ಕೆಮರಾ ಮತ್ತಿತರ ವ್ಯವಸ್ಥೆ ಹೊಂದಿದೆ.
ಅತ್ಯಾಧುನಿಕ ರೇಡಿಯೋ ತರಂಗಾಂತರ ಹಾಗೂ ಈ ತಂತ್ರಜ್ಞಾನ ವಿಶ್ವದ ಯಾವುದೇ ಮೂಲೆಯಲ್ಲಿ ಅಪಾಯವಾದಾಗ ಗುರುತಿಸಿ ರಕ್ಷಣೆಯ ಕ್ರಮ ಸಾಧ್ಯವಾಗಲಿದೆ. ಸ್ವಾಯತ್ತ ವೈಮಾನಿಕ, ಸಾಗರ ವಾಹನಗಳನ್ನು ಸಂಯೋಜಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ.ಇದು ಸ್ವಾಯತ್ತ ಸಾಗರ ನೌಕೆಗಳು, ವೈಮಾನಿಕ ವಾಹನಗಳು ಮತ್ತು ಹವ್ಯಾಸಿ ರೇಡಿಯೊ ಕೇಂದ್ರಗಳನ್ನು ಏಕಕಾಲದಲ್ಲಿ ಸಂಯೋಜಿಸುವ ಮೂಲಕ ವಿಪತ್ತು ನಿರ್ವಹಣೆ, ತುರ್ತು ಪ್ರತಿಕ್ರಿಯೆ ಮತ್ತು ಸಂವಹನ ವ್ಯವಸ್ಥೆಗಳಿಗೆ ಕ್ರಾಂತಿಕಾರಿ ವಿಧಾನವಾಗಿ ಪರಿಣಮಿಸಿದೆ. ಸದ್ಯಕ್ಕೆ ಹವ್ಯಾಸಿ ರೇಡಿಯೋ ಕಾರ್ಯಾಚರಣೆಗಳನ್ನು ಮಂಗಳೂರು ಹವ್ಯಾಸಿ ರೇಡಿಯೋ ಕ್ಲಬ್ ಸಹಕಾರದೊಂದಿಗೆ ತುರ್ತು ಸಂದರ್ಭಗಳಲ್ಲಿ ಪರಿಣಾಮಕಾರಿ ಸಂವಹನವನ್ನು ಸಾಧಿಸುವ ಮಾಧ್ಯಮವನ್ನು ಕಲ್ಪಿಸಲಾಗಿದೆ.
ಸಮುದ್ರ ಮಾಲಿನ್ಯದ ಮೇಲೆ ನಿಗಾ:ವಿಪತ್ತು ಪ್ರತಿಕ್ರಿಯೆಗಾಗಿ ವಿನ್ಯಾಸಗೊಳಿಸಿದ್ದರೂ ಈ ಕೇಂದ್ರವು ಇನ್ನಿತರ ಕ್ಷೇತ್ರಗಳಲ್ಲಿಯೂ ಕಾರ್ಯ ನಿರ್ವಹಿಸಲಿದೆ. ವಿಶೇಷವಾಗಿ ಈ ಭಾಗದ ನೀರು ಮತ್ತು ಗಾಳಿಯ ಗುಣಮಟ್ಟವನ್ನು ಮೇಲ್ವಿಚಾರಣೆ, ಕಡಲ್ಕೊರೆತದ ಮಾದರಿಗಳನ್ನು ವಿಶ್ಲೇಷಿಸುವುದು ಮತ್ತು ಕಡಲ ತೀರದ ಮ್ಯಾಂಗ್ರೋವ್‌ಗಳ ಬೆಳವಣಿಗೆಯನ್ನು ಪರಿಶೀಲಿಸುವಲ್ಲಿಯೂ ಸಹಕಾರಿಯಾಗಲಿದೆ.
ಕರಾವಳಿ ನಿಯಂತ್ರಣ ವಲಯದ ಉನ್ನತಾಧಿಕಾರಿಗಳು ಕೂಡ ಈ ಕೇಂದ್ರದಲ್ಲಿನ ಅತ್ಯಾಧುನಿಕ ಯಂತ್ರಗಳ ಸಹಾಯದಿಂದ ಕಡಲ್ಕೊರೆತದ ಆಧ್ಯಯನ ನಡೆಸಲಿದ್ದಾರೆ. ವೃತ್ತಿಪರರು, ಆಡಳಿತಗಾರರು, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು ಮತ್ತು ಹವ್ಯಾಸಿ ರೇಡಿಯೋ ಉತ್ಸಾಹಿಗಳನ್ನು ಒಳಗೊಂಡಂತೆ ಅನೇಕ ಮಂದಿಗೆ ಸರ್ಚ್ ಉಪಯುಕ್ತವಾಗಿದೆ. ಮುಂದಿನ ದಿನಗಳಲ್ಲಿ ಈ ತುರ್ತು ಕೇಂದ್ರ ಸರ್ಕಾರಿ ಮಟ್ಟದಲ್ಲಿ ಇರುವ ತುರ್ತು ರಕ್ಷಣಾ ವ್ಯವಸ್ಥೆಯೊಂದಿಗೆ ತುರ್ತು ನೆರವು, ಜಲಮಾಲಿನ್ಯ ತಡೆ, ಹವಾಮಾನ ವೈಪರಿತ್ಯ, ಕಾಡು ಪ್ರಾಣಿಗಳ ಉಪಟಳ ತಡೆ, ಡೇಟಾ ಸಂಗ್ರಹ ಮತ್ತಿತರ ಕ್ಷೇತ್ರದಲ್ಲಿ ಜತೆಗೂಡಿ ಕೆಲಸ ಮಾಡಲು ಸಾಧ್ಯವಾಗಲಿದೆ.ಸರ್ಚ್ ಕೇಂದ್ರದ ಮುಖ್ಯಸ್ಥ ಮತ್ತು ಟ್ರಾನ್ಸ್‌ಡಿಸಿಪ್ಲಿನರಿ ಆರ್ ಅಂಡ್ ಡಿ ಪ್ರಭಾರಿ ಪ್ರೊ. ಡಾ. ಪೃಥ್ವಿರಾಜ್ ಅವರು ಸರ್ಚ್ ಪರಿಕಲ್ಪನೆ ಮತ್ತು ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರೊ. ಕೆ. ವಿ. ಗಂಗಾಧರನ್, ಡಾ. ಮೋಹಿತ್ ಪಿ ತಾಹಿಲಿಯಾನಿ, ಮತ್ತು ಡಾ. ಶ್ರೀವಲ್ಸಾ ಕೊಲತಾಯರ್ ಸೇರಿದಂತೆ ಇತರ ಪ್ರಮುಖ ಅಧ್ಯಾಪಕರು ಸರ್ಚ್ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ. ಎನ್‌ಐಟಿಕೆ ಹಳೆ ವಿದ್ಯಾರ್ಥಿಗಳು ಸರ್ಚ್ ಕೇಂದ್ರ ನಿರ್ಮಾಣಕ್ಕೆ ಆರ್ಥಿಕ ದೇಣಿಗೆ ನೀಡಿದ್ದಾರೆ.
;Resize=(128,128))
;Resize=(128,128))
;Resize=(128,128))