ಕ್ಷೇತ್ರದ ಅಭಿವೃದ್ಧಿಗೆ ಹಗಲು-ಇರುಳು ಪ್ರಾಮಾಣಿಕ ಯತ್ನ: ಶಾಸಕ ಎಂ.ಚಂದ್ರಪ್ಪ

| Published : Jul 09 2025, 12:17 AM IST / Updated: Jul 09 2025, 12:18 AM IST

ಕ್ಷೇತ್ರದ ಅಭಿವೃದ್ಧಿಗೆ ಹಗಲು-ಇರುಳು ಪ್ರಾಮಾಣಿಕ ಯತ್ನ: ಶಾಸಕ ಎಂ.ಚಂದ್ರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಜಾತಿ ರಾಜಕಾರಣ ಮಾಡಲು ಬಂದಿಲ್ಲ. ನೀತಿ ನಿಯತ್ತಿನಿಂದ ಕ್ಷೇತ್ರದ ಅಭಿವೃದ್ದಿಗೆ ಹಗಲು-ರಾತ್ರಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ನನಗಿಂತ ಹಿಂದೆ 29 ಶಾಸಕರು ಬಂದು ಹೋಗಿದ್ದಾರೆ. ಅವರೆಲ್ಲಾ ಏನು ಮಾಡಿದರು. ಐದು ವರ್ಷ ಸಚಿವರಾಗಿದ್ದವರಿಂದ ಯಾವ ಅಭಿವೃದ್ದಿಯಾಗಿಲ್ಲ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ಜಾತಿ ರಾಜಕಾರಣ ಮಾಡಲು ಬಂದಿಲ್ಲ. ನೀತಿ ನಿಯತ್ತಿನಿಂದ ಕ್ಷೇತ್ರದ ಅಭಿವೃದ್ದಿಗೆ ಹಗಲು-ರಾತ್ರಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ನನಗಿಂತ ಹಿಂದೆ 29 ಶಾಸಕರು ಬಂದು ಹೋಗಿದ್ದಾರೆ. ಅವರೆಲ್ಲಾ ಏನು ಮಾಡಿದರು. ಐದು ವರ್ಷ ಸಚಿವರಾಗಿದ್ದವರಿಂದ ಯಾವ ಅಭಿವೃದ್ದಿಯಾಗಿಲ್ಲ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.

ತಾಲ್ಲೂಕಿನ ಹಿರಿಯೂರು ಗ್ರಾಮದಲ್ಲಿ 1.75 ಕೋಟಿ ರು. ವೆಚ್ಚದಲ್ಲಿ ಕೆರೆ ಅಭಿವೃದ್ದಿ ಕಾಮಗಾರಿ ಮತ್ತು ನೂತನ ಸಿ.ಸಿ.ರಸ್ತೆ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.

ನೂರು ವರ್ಷಗಳ ಕಾಲ ಬೋರ್‍ವೆಲ್‍ಗಳಲ್ಲಿ ನೀರು ಬತ್ತುವುದಿಲ್ಲ. ಕೆರೆ ಕಟ್ಟೆಗಳು ತುಂಬಿರುತ್ತವೆ. 493 ಹಳ್ಳಿಗಳಲ್ಲಿಯೂ ಸಿ.ಸಿ.ರಸ್ತೆ ಮಾಡಿಸಿದ್ದೇನೆ. ಸಾಸಲು ಸರ್ಕಲ್‍ನಿಂದ ಹಿರೇಬೆನ್ನೂರು ಸರ್ಕಲ್‍ವರೆಗೆ ರಸ್ತೆಗೆ ನೂರು ಕೋಟಿ ರೂ.ಗಳನ್ನು ನೀಡಿದ್ದೇನೆ. ರಾಜ್ಯದಲ್ಲಿ ನಮ್ಮ ಸರ್ಕಾರವಿಲ್ಲ. ನಾನು ಮಂತ್ರಿಯಲ್ಲ. ಆರ್ಡಿನರ್ ಎಂ.ಎಲ್.ಎ. ನಿಮ್ಮ ಮನೆ ಮಗನಾಗಿ ಕಷ್ಟ ಪಟ್ಟು ಕೆಲಸ ಮಾಡುತ್ತಿದ್ದೇನೆ. ಎಲ್ಲಿಯೂ ಗದ್ದಲ ಗಲಾಟೆಗೆ ಅವಕಾಶ ಕೊಟ್ಟಿಲ್ಲ. ಅಟ್ರಾಸಿಟಿ ಕೇಸು ದಾಖಲಾಗಲು ಬಿಟ್ಟಿಲ್ಲ. ಜಾತಿಗಿಂತ ನೀತಿ ಮುಖ್ಯ. ಎಲ್ಲರೂ ನನ್ನವರೆಂದು ತಿಳಿದು ಕೆಲಸ ಮಾಡುತ್ತಿದ್ದೇನೆ. ರೈತರ ತೋಟಗಳು ಒಣಗಬಾರದೆಂದು ತಾಲ್ಲೂಕಿನಲ್ಲಿ ಹದಿನೇಳು ಕಡೆ ವಿದ್ಯುತ್ ಪವರ್ ಸ್ಟೇಷನ್ ಕಟ್ಟಿಸಿದ್ದೇನೆ ಎಂದು ಹೇಳಿದರು.

ಹಿರಿಯೂರಿನ ವಾಣಿವಿಲಾಸ ಸಾಗರದಿಂದ ನೀರು ತಂದು ಪ್ರತಿ ಮನೆ ಮನೆಗೂ ಶುದ್ದ ಕುಡಿಯುವ ನೀರು ಕೊಡಲು 367 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದ್ದೇನೆ. ಎಲ್ಲಿ ಏನು ಅಭಿವೃದ್ದಿ ಕೆಲಸಗಳನ್ನು ಮಾಡಿದರೆ ಜನರಿಗೆ ಒಳ್ಳೆಯದಾಗುತ್ತದೆಂಬ ಅರಿವಿಟ್ಟುಕೊಂಡಿದ್ದೇನೆ ಎಂದರು.

ಬಿಜೆಪಿ.ಮುಖಂಡ ಜಗದೀಶ್ ಮಾತನಾಡಿ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ಶಾಸಕರುಗಳಿಗೆ ಅನುದಾನ ತರಲು ಆಗುತ್ತಿಲ್ಲ. ಅಂತಹ ಕಷ್ಟದ ಪರಿಸ್ಥಿತಿಯಲ್ಲಿ ನಮ್ಮ ಶಾಸಕ ಡಾ.ಎಂ.ಚಂದ್ರಪ್ಪನವರು ಹೇಗೆ ಹಣ ತಂದು ಅಭಿವೃದ್ದಿಪಡಿಸುತ್ತಿದ್ದಾರೆ ಎನ್ನುವುದೇ ಆಶ್ಚರ್ಯ ಎಂದು ಹೇಳಿದರು.

ಹೊಳಲ್ಕೆರೆ ಬಿಜೆಪಿ.ಮಂಡಲ ಮಾಜಿ ಅಧ್ಯಕ್ಷ ಸಿದ್ದೇಶ್, ಐದು ವರ್ಷಗಳ ಕಾಲ ಸಮಾಜ ಕಲ್ಯಾಣ ಸಚಿವರಾಗಿದ್ದವರಿಂದ ಒಂದು ಗುಂಡಿ ಮುಚ್ಚಿಸಿ ರಸ್ತೆ ಮಾಡಿಸಲು ಆಗಲಿಲ್ಲ. ಸುಮ್ಮನೆ ಕಾಲ ಕಳೆದರು. ಅದೇ ಈಗಿನ ಶಾಸಕ ಡಾ.ಎಂ.ಚಂದ್ರಪ್ಪನವರು ಗುಡ್ಡವನ್ನು ಕಡಿದು ಸಮ ಮಾಡಿಸಿ ಶಾಲಾ-ಕಾಲೇಜು, ವಸತಿ ಶಾಲೆ, ಎ.ಪಿ.ಎಂ.ಸಿ.ಗಳನ್ನು ಕಟ್ಟಿಸಿದ್ದಾರೆ. ಅಧಿಕಾರ ಮುಖ್ಯವಲ್ಲ ಎನ್ನುವುದನ್ನು ಅರಿತು ಶಾಶ್ವತವಾಗಿ ನೆನಪಿನಲ್ಲಿ ಉಳಿಯುವಂತ ಅಭಿವೃದ್ದಿ ಕಾಮಗಾರಿಗಳನ್ನು ಮಾಡಿಸಿದ್ದಾರೆ ಎಂದರು.

ನಿವೃತ್ತ ಶಿಕ್ಷಕ ರೋಮಜ್ಜಪ್ಪ ಮಾತನಾಡಿ, ಜನರ ಮನದಲ್ಲಿ ಶಾಶ್ವತವಾಗಿ ಉಳಿಯುವಂತ ಅಭಿವೃದ್ದಿ ಕೆಲಸಗಳನ್ನು ತಾಲ್ಲೂಕಿನಾದ್ಯಂತ ಮಾಡಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯತ್ ಸದಸ್ಯರುಗಳಾದ ಕುಮಾರಣ್ಣ, ಚಂದ್ರಪ್ಪ, ಹನುಮಂತಪ್ಪ, ಮಹಾಲಿಂಗಪ್ಪ, ಪರಮೇಶ್, ನೀರಾವರಿ ಇಲಾಖೆ ಇಂಜಿನಿಯರ್ ನವೀನ್, ಗುತ್ತಿಗೆದಾರ ರಾಜಶೇಖರ್ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.