ಸಾರಾಂಶ
ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳ2012ರ ನವೆಂಬರ್‌ನಲ್ಲಿ ಸಿಂಗಟಾಲೂರು ಏತನೀರಾವರಿ ಯೋಜನೆ ಲೋಕಾರ್ಪಣೆಯಾಗಿದೆ. ದುರಂತ ಎಂದರೆ 11 ವರ್ಷ ಗತಿಸಿದರೂ ಇದುವರೆಗೂ ಎಡಭಾಗದಲ್ಲಿ ಭೂಮಿಗೆ ಹನಿ ನೀರು ಕೊಡಲು ಆಗುತ್ತಿಲ್ಲ.
ಇದು ಅಚ್ಚರಿಯಾದರೂ ಸತ್ಯ. ಏತನೀರಾವರಿಗಾಗಿ ಜಲಾಶಯವನ್ನೇ ನಿರ್ಮಾಣ ಮಾಡಿರುವ ರಾಜ್ಯ ಸರ್ಕಾರಕ್ಕೆ ರೈತರ ಭೂಮಿಗೆ ನೀರು ಪೂರೈಕೆ ಮಾಡಲು ಆಗಿಲ್ಲ.ಏನಿದು ಸಮಸ್ಯೆ?1992ರಲ್ಲಿಯೇ ಸಿಂಗಟಾಲೂರು ಏತನೀರಾವರಿ ಯೋಜನೆಗೆ ಡಿಪಿಆರ್ ಸಿದ್ಧ ಮಾಡಲಾಯಿತು. ಆದರೆ, ಆಗ ಕಾರ್ಯಗತವಾಗಲಿಲ್ಲ. ನಂತರ ಹೇಗೋ ಆಗೊಮ್ಮೆ, ಈಗೊಮ್ಮೆ ಸರ್ಕಾರದ ಇಚ್ಛಾಶಕ್ತಿಯಿಂದ 30 ವರ್ಷಗಳ ಬಳಿಕ ಯೋಜನೆ ಪೂರ್ಣಗೊಂಡು 2012ರ ನವೆಂಬರ್‌ನಲ್ಲಿ ಲೋಕಾರ್ಪಣೆಗೊಂಡಿತು. ಬಲಭಾಗದಲ್ಲಿ ಸುಮಾರು 48 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಯಿತು. ಆದರೆ, ಎಡಭಾಗದಲ್ಲಿ ಮಾತ್ರ ನೀರಾವರಿ ಇವತ್ತಿಗೂ ಆಗುತ್ತಿಲ್ಲ.ಬಲಭಾಗದಲ್ಲಿ ಹೂವಿನಹಡಗಲಿ ವ್ಯಾಪ್ತಿಯಲ್ಲಿ ಅತ್ಯುತ್ತಮವಾಗಿ ನೀರಾವರಿಯಾಗಿದೆ. ರೈತರು ಖುಷಿಯಾಗಿದ್ದಾರೆ. ಆದರೆ, ಇದೇ ಯೋಜನೆಯ ಎಡಭಾಗದಲ್ಲಿ ಸುಮಾರು 2.20 ಲಕ್ಷ ಎಕರೆ ಪ್ರದೇಶಕ್ಕೆ ನೀರು ಪೂರೈಕೆ ಮಾಡುವ ಕಾರ್ಯ ಇನ್ನು ನಡೆದಿಲ್ಲ.ಬದಲಾದ ನಿಲುವು:ಆರಂಭದಲ್ಲಿ ಕಾಲುವೆ ನೀರಾವರಿ ಯೋಜನೆ ಕೈಬಿಟ್ಟು ಹನಿ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲಾಯಿತು. ಆನಂತರ ತುಂತುರು ಹನಿ ನೀರಾವರಿ ಯೋಜನೆಗೆ ಮುಂದಾಯಿತು. ಆದರೆ, ಅದ್ಯಾವುದೂ ಇಲ್ಲಿವರೆಗೆ ನಡೆದಿಲ್ಲ.ಇದರಲ್ಲಿ ಮುಂಡರಗಿ ತಾಲೂಕು ವ್ಯಾಪ್ತಿ ಸೇರಿದಂತೆ ಯಲಬುರ್ಗಾ ತಾಲೂಕಿನ ಕೆಲವೊಂದು ಹಳ್ಳಿಗಳನ್ನು ಒಳಗೊಂಡು 71 ಸಾವಿರ ಎಕರೆ ಪ್ರದೇಶಕ್ಕೆ ಹನಿ ನೀರಾವರಿ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಮೊದಲ ಹಂತದ ಯೋಜನೆ ಇನ್ನೇನು ಪೂರ್ಣಗೊಂಡು ರೈತರ ಭೂಮಿಗೆ ನೀರು ತಲುಪಲಿದೆ. ಆದರೆ, ಇದು ಸಹ ವಾಸ್ತವದಲ್ಲಿ ಯಶಸ್ವಿಯ ಲಕ್ಷಣಗಳು ಕಾಣುತ್ತಿಲ್ಲ ಎನ್ನುತ್ತಾರೆ ರೈತರು.
ಹನಿ ನೀರು ಬಂದಿಲ್ಲ:ಆದರೆ, ಕೊಪ್ಪಳ ತಾಲೂಕಿಗೆ ಇದುವರೆಗೂ ಹನಿ ನೀರು ರೈತರ ಭೂಮಿಗೆ ತಲುಪಿಲ್ಲ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಅದು ಜಾರಿಯಾಗುತ್ತಿಲ್ಲ.ಕೊಪ್ಪಳ, ಯಲಬುರ್ಗಾ ತಾಲೂಕಿನ ಸುಮಾರು 1.25 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿಯಾಗುವ ಯೋಜನೆ 11 ವರ್ಷಗಳಿಂದಲೂ ಕುಂಟುತ್ತಾ, ತೆವಳುತ್ತಾ ಸಾಗುತ್ತಿದೆ.ಇಷ್ಟು ವರ್ಷಗಳ ಕಾಲ ಹನಿ ನೀರಾವರಿ, ತುಂತುರು ನೀರಾವರಿ ಎಂದು ಕಾಲ ಕಳೆದ ಹಿಂದಿನ ಸರ್ಕಾರ ಅಧಿಕಾರದ ಕೊನೆಯ ಅವಧಿಯಲ್ಲಿ ಮಧ್ಯಪ್ರದೇಶ ಮಾದರಿ ಯೋಜನೆಗೆ ಅಸ್ತು ಎಂದು ಟೆಂಡರ್ ಕರೆಯಿತು. ಟೆಂಡರ್‌ಗೆ ಯಾರೊಬ್ಬರೂ ಮುಂದೆ ಬಾರದೇ ಇರುವುದರಿಂದ ಯೋಜನೆ ನನೆಗುದಿಗೆ ಬಿದ್ದಿದೆ. ಈಗಿನ ಸರ್ಕಾರ ಇದ್ಯಾವುದನ್ನು ತಿರುಗಿಯೂ ನೋಡುತ್ತಿಲ್ಲ.ಸಿಂಗಟಾಲೂರು ಏತನೀರಾವರಿಗಾಗಿ ಕೃಷ್ಣಾ ನ್ಯಾಯಾಧಿಕರಣದ ಮೊದಲ ತೀರ್ಪಿನಲ್ಲಿ 18.55 ಟಿಎಂಸಿ ನೀರು ಬಳಕೆಗೆ ಅವಕಾಶವಿತ್ತು. ಆದರೆ, ಕೃಷ್ಣಾ ನ್ಯಾಯಾಧಿಕರಣದ ಎರಡನೇ ಮತ್ತು ಅಂತಿಮ ತೀರ್ಪಿನಲ್ಲಿ 16 ಟಿಎಂಸಿ ಬಳಕೆಗೆ ಅವಕಾಶ ನೀಡಲಾಗಿದೆ.ಯೋಜನೆ ಪೂರ್ಣಗೊಂಡಿದ್ದು, ಬಲಭಾಗದಲ್ಲಿ ಈಗಾಗಲೇ ವಾರ್ಷಿಕ ಸುಮಾರು 3 ಟಿಎಂಸಿ ನೀರು ಬಳಕೆಯ ಮೂಲಕ 48 ಸಾವಿರ ಎಕರೆ ಪ್ರದೇಶದಲ್ಲಿ ನೀರಾವರಿ ಮಾಡಲಾಗುತ್ತದೆ. ಆದರೆ, ಎಡ ಭಾಗದಲ್ಲಿ ವಾರ್ಷಿಕ 13 ಟಿಎಂಸಿ ಬಳಕೆ ಮಾಡಿಕೊಳ್ಳಲು ಅವಕಾಶ ಇದ್ದರೂ ಹನಿ ನೀರು ಬಳಕೆಯಾಗುತ್ತಿಲ್ಲ. ಇದನ್ನು ಲೆಕ್ಕಹಾಕಿದರೆ 10-12 ವರ್ಷಗಳಿಂದ ಸುಮಾರು 150 ಟಿಎಂಸಿ ನೀರು ಪೋಲಾದಂತಾಗಿದೆ.5700 ಕೋಟಿ ಯೋಜನೆ:ಸಿಂಗಟಾಲೂರು ಏತನೀರಾವರಿ ಯೋಜನೆ 1992ರಲ್ಲಿ ಕೇವಲ ₹62 ಕೋಟಿಗೆ ಸಿದ್ಧಗೊಂಡಿತ್ತು. ಕ್ರಮೇಣ ಹೆಚ್ಚುತ್ತಾ ಈಗ ₹5700 ಕೋಟಿ ಯೋಜನೆಯಾಗಿ ಮಾರ್ಪಟ್ಟಿದೆ. ಇದುವರೆಗೂ ₹3600 ಕೋಟಿ ಬಳಕೆಯಾಗಿದೆ.ಲೋಕಾರ್ಪಣೆಗೊಂಡು 11 ವರ್ಷವಾದರೂ ಎಡಭಾಗಕ್ಕೆ ಹನಿ ನೀರು ಕೊಡಲು ಆಗುತ್ತಿಲ್ಲ ಎಂದರೆ ಏನರ್ಥ? ಸರ್ಕಾರಕ್ಕೆ ನಾಚಿಕೆಯಾಗಬೇಕು.- ವೈ.ಎನ್. ಗೌಡರ, ಹೋರಾಟಗಾರನಮ್ಮ ದುರಂತವೇ ಸರಿ. ಸಿಂಗಟಾಲೂರು ಏತನೀರಾವರಿ ಯೋಜನೆಗಾಗಿ ಹೋರಾಟ ಮಾಡಿದ್ದೇ ನಮ್ಮ ಭಾಗದವರು. ಆದರೂ ಇದುವರೆಗೂ ಕೊಪ್ಪಳ ತಾಲೂಕಿಗೆ ಹನಿ ನೀರು ಬಂದಿಲ್ಲ.- ಶರಣಪ್ಪ ಜಡಿ, ಹೋರಾಟಗಾರ