ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ಇಲ್ಲಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬಲದಂಡೆ ಮತ್ತು ಎಡದಂಡೆ ಭಾಗಗಳ ನೀರೆತ್ತುವ ಘಟಕಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದ್ದು, ಬರೋಬರಿ ₹117 ಕೋಟಿ ವಿದ್ಯುತ್‌ ಬಿಲ್‌ ಬಾಕಿ ಇದೆ.

ಬರದ ನಾಡಿನ ರೈತರ ಜೀವನಾಡಿಯಾಗಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕೆರೆ ತುಂಬಿಸುವ ಯೋಜನೆ, ಮಾಲ್ವಿ ಜಲಾಶಯಕ್ಕೆ ನೀರೆತ್ತುವ ಘಟಕ, ಕೂಡ್ಲಿಗಿ ಕೆರೆ ತುಂಬಿಸುವ ಯೋಜನೆ, ಜತೆಗೆ ಎಡ ಮತ್ತು ಬಲ ದಂಡೆಯ ಭಾಗಗಳ ಕಾಲುವೆಗಳಿಗೆ ನೀರು ಹರಿಸುವ ಉದ್ದೇಶದಿಂದ ಎರಡೂ ಭಾಗಗಳ ಮೋಟಾರ್‌ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಆಗಷ್ಟ್‌-2023ರಿಂದ ಏಪ್ರಿಲ್‌-2026ರ ವರೆಗೂ ವಿದ್ಯುತ್‌ ಬಿಲ್‌ ಬಾಕಿ ಇದೆ.

ಬಲದಂಡೆ ₹87 ಕೋಟಿ ಬಾಕಿ

ಯೋಜನೆಯ ಬಲದಂಡೆ ಭಾಗದಲ್ಲಿನ ಕಲಿಕೇರಿ ಘಟಕ ₹378407854, ತುರ್ಚಿಹಾಳು ಘಟಕ ₹127549932, ರಾಜವಾಳ ಘಟಕ ₹89425726, ಗೂಜನೂರು ಘಟಕ ₹70326328, ಶಾಕಾರ ಘಟಕ ₹14691067, ಮಾಗಳ ಘಟಕ ₹89640182, ಹುಗಲೂರು ಘಟಕ ₹8538984, ಮಾಲ್ವಿ ಘಟಕ ₹59356316, ಪಾಲಯ್ಯನಕೋಟೆ ಘಟಕ ₹11453052, ರಾಜವಾಳ ಘಟಕ ₹24935089 ಸೇರಿದಂತೆ ಒಟ್ಟು ₹874324530 ಬಾಕಿ ಇದೆ.


ಎಡದಂಡೆ ₹29 ಕೋಟಿ ಬಾಕಿ

ಯೋಜನೆಯ ಎಡದಂಡೆ ಭಾಗದಲ್ಲಿರುವ ಮುಂಡರಗಿ, ಗದಗ, ಕಲಿಕೇರಿ, ಹಿರೇವಡ್ಡಟ್ಟಿ, ವಿರೂಪಾಪುರ, ಮುಷ್ಠಿಕೊಪ್ಪ ಹಾಗೂ ಡಂಬಳ ನೀರೆತ್ತುವ ಘಟಕಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿದ್ದು, ಒಟ್ಟು ₹296541277 ಕೋಟಿ ಸೇರಿದಂತೆ ಒಟ್ಟಾರೆ ₹1170865807 ವಿದ್ಯುತ್‌ ಬಾಕಿ ಇದೆ. ಬಿಲ್‌ ಪಾವತಿ ಮಾಡಲು ರಾಜ್ಯ ಸರ್ಕಾರ ಕರ್ನಾಟಕ ನೀರಾವರಿ ನಿಗಮ (ಕೆಎನ್‌ಎನ್‌ಎಲ್‌)ಕ್ಕೆ ಹಣ ಬಿಡುಗಡೆ ಮಾಡಬೇಕಿದೆ.

ಸಿಂಗಟಾಲೂರು ಏತ ನೀರಾವರಿ ಯೋಜನೆಯು 2012ರಲ್ಲೇ ಲೋಕಾರ್ಪಣೆಗೊಂಡಿದೆ. ಅಲ್ಲಿಂದ ಈ ವರೆಗೂ ಕಾಲುವೆ, ಕೆರೆಗಳಿಗೆ ನೀರು ಹರಿಸುತ್ತಿದ್ದಾರೆ, ಆದರೆ, ಸರ್ಕಾರ ಈ ವರೆಗೂ ಅಧಿಕೃತ ನೀರಾವರಿ ಪ್ರದೇಶವೆಂದು ಘೋಷಣೆ ಮಾಡಿಲ್ಲ. ನೀರು ಬಳಕೆದಾರರ ಸಂಘ ರಚನೆ ಇಲ್ಲ, ತೆರಿಗೆ ನಿಗಧಿ ಪಡಿಸಿಲ್ಲ. ಇದರಿಂದ ಕಾಲುವೆಗಳು, ಪೈಪ್‌ಲೈನ್‌ ಹಾಗೂ ಇನ್ನಿತರ ಕಾಮಗಾರಿಗಳಿಗೆ ಸರ್ಕಾರ ಸಕಾಲದಲ್ಲಿ ಅನುದಾನ ನೀಡುತ್ತಿಲ್ಲ. ಇದೇ ರೀತಿಯಲ್ಲೆ ವಿದ್ಯುತ್‌ ಬಿಲ್‌ ಬಾಕಿ ಉಳಿದುಕೊಂಡಿದೆ.

ಈಗಾಗಲೇ ಜೆಸ್ಕಾಂ ಮತ್ತು ಹೆಸ್ಕಾಂ ಅಧಿಕಾರಿಗಳು, ಸಿಂಗಟಾಲೂರು ಏತ ನೀರಾವರಿ ಯೋಜನೆಯ, ಪೂರ್ಣ ವಿದ್ಯುತ್‌ ಬಿಲ್‌ ಪಾವತಿ ಮಾಡಲು ವಿಳಂಬ ಮಾಡಿದ, ಕಡ್ಡಾಯವಾಗಿ ವಿದ್ಯುತ್‌ ಕಡಿತ ಮಾಡುತ್ತೇವೆ ಎಂದು ಅಂತಿಮ ಎಚ್ಚರಿಕೆ ನೀಡಿದ್ದಾರೆ.

ಯೋಜನೆಯ ಮೋಟಾರ್‌ಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿದ್ದು, ಆಗಸ್ಟ್ 2023ರಿಂದ ಏಪ್ರಿಲ್‌ 2026ರ ವರೆಗೂ ಬಲದಂಡೆ ಭಾಗದ ₹87 ಕೋಟಿ ಬಾಕಿ ಇದೆ. ಜೆಸ್ಕಾಂ ಮತ್ತು ಹೆಸ್ಕಾಂ ಇಲಾಖೆ ಅಧಿಕಾರಿಗಳು ಪತ್ರ ಬರೆದಿದ್ದಾರೆ ಎಂದು ಸಿಂಗಟಾಲೂರು ಏತ ನೀರಾವರಿ ಯೋಜನೆ ಇಇ ಶಿವಮೂರ್ತಿ ಹೇಳಿದರು.