ಕುಶಾಲನಗರ: ಹಳೆಯ ಚಿತ್ರಗೀತೆಗಳ ಗಾಯನ ಸ್ಪರ್ಧೆ ಕಾರ್ಯಕ್ರಮ

| Published : Sep 30 2024, 01:25 AM IST / Updated: Sep 30 2024, 01:26 AM IST

ಸಾರಾಂಶ

ಪೊಲೀಸ್‌ ಅಧಿಕಾರಿ, ಸಿಬ್ಬಂದಿಗೆ ಜಾನಪದ ಭಾವಗೀತೆ, ಹಳೆಯ ಚಿತ್ರಗೀತೆಗಳ ಗಾಯನ ಸ್ಪರ್ಧೆ ಕಾರ್ಯಕ್ರಮ ನಡೆಯಿತು. 40ಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿ ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕನ್ನಡ ಸಾಹಿತ್ಯ ಪರಿಷತ್ ಜೊತೆಗೆ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಪೊಲೀಸ್ ಇಲಾಖೆ ಸಿಬ್ಬಂದಿ ಪ್ರತಿಭೆಯನ್ನು ಹೊರ ತರುವ ಪ್ರಯತ್ನ ಮಾಡಲಾಗಿದೆ ಎಂದು ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ತಿಳಿಸಿದ್ದಾರೆ.

ಅವರು ಕುಶಾಲನಗರ ಕಲಾಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ನಡೆದ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಜಾನಪದ ಭಾವಗೀತೆ ಮತ್ತು ಹಳೆಯ ಚಿತ್ರಗೀತೆಗಳ ಗಾಯನ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇದೊಂದು ಪ್ರಥಮ ಹಂತದ ಕಾರ್ಯಕ್ರಮವಾಗಿದ್ದು ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜೊತೆಗೆ ಜಿಲ್ಲಾ ಪೊಲೀಸ್ ಇಲಾಖೆ ಕೈಜೋಡಿಸಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರಾದ ಎಂ ಪಿ ಕೇಶವ ಕಾಮತ್ ಮಾತನಾಡಿ, ಇದೊಂದು ವಿನೂತನ, ವಿಭಿನ್ನ ಹಾಗೂ ವಿಶಿಷ್ಟ ರೀತಿಯ ಕಾರ್ಯಕ್ರಮವಾಗಿದೆ.

ಪೊಲೀಸ್ ಇಲಾಖೆಯ ಅಧಿಕಾರಿ ಸಿಬ್ಬಂದಿಗಳ ಗುಪ್ತ ಪ್ರತಿಭೆಗಳನ್ನು ಹೊರ ತರುವ ಪ್ರಯತ್ನವಾಗಿದೆ ಎಂದು ಹೇಳಿದರು.

ಜಿಲ್ಲೆಯ ಪೊಲೀಸ್ ಅಧಿಕಾರಿ, ಮತ್ತು ಸಿಬ್ಬಂದಿ ಪರಿಷತ್ತಿನ ಸದಸ್ಯತ್ವ ಹೊಂದುವಂತೆ ಅವರು ಕರೆ ನೀಡಿದರು.

ಪೊಲೀಸ್ ಇಲಾಖೆ ಮೂಲಕ ಆಂತರಿಕ ರಕ್ಷಣೆ ನಿರಂತರ ನಡೆಯುತ್ತಿದೆ.

ದಿನನಿತ್ಯದ ಒತ್ತಡದ ಕೆಲಸ ನಡುವೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಕೆಲಸದ ಒತ್ತಡಗಳನ್ನು ಮರೆಯಲು ಸಾಧ್ಯ ಎಂದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಈ ಹಿಂದೆ 2 ಸಾವಿರ ಸದಸ್ಯರನ್ನು ಹೊಂದಿದ್ದು ಇದೀಗ ಸದಸ್ಯತ್ವ ಸಂಖ್ಯೆ 3 ಸಾವಿರಕ್ಕೆ ಏರಿರುವುದಾಗಿ ಕಾಮತ್ ಮಾಹಿತಿ ನೀಡಿದರು.

ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ಕೆ ಎಸ್ ನಾಗೇಶ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ, ಉದ್ಯಮಿ ಅಶ್ವಿನಿ ಪುರುಷೋತ್ತಮ ರೈ, ಶುಂಠಿ ವ್ಯಾಪಾರಿ ಹೆಚ್ ಎನ್ ರಾಜಶೇಖರ್ ಉಪಸ್ಥಿತರಿದ್ದರು.

ಕುಶಾಲನಗರ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಎಸ್ ನಾಗರಾಜ್, ಟಿ ವಿ ಶೈಲಾ, ಖಜಾಂಚಿ ಕೆ ವಿ ಉಮೇಶ್ ಮತ್ತು ಸದಸ್ಯರು ಇದ್ದರು.

ಗಾಯನ ಸ್ಪರ್ಧೆಯಲ್ಲಿ 40ಕ್ಕೂ ಅಧಿಕ ಮಂದಿ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.