ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ವಿಧಾನಸಭೆ ಒಳಗೆ ಆರ್‌ಎಸ್‌ಎಸ್ ಗೀತೆ ಹಾಡಿರುವುದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವೈಯಕ್ತಿಕ ವಿಚಾರ. ಅದಕ್ಕೆ ವಿರೋಧ ಮಾಡುವವರು ಮಾಡಲಿ. ಪಕ್ಷದೊಳಗೆ ಚರ್ಚೆ ಮಾಡಿ ನಾಯಕರು ಒಂದು ನಿರ್ಧಾರಕ್ಕೆ ಬರುತ್ತಾರೆ ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರಶ್ನೆಯೊಂದಿಗೆ ಪ್ರತಿಕ್ರಿಯಿಸಿದ ಅವರು, ಡಿ.ಕೆ.ಶಿವಕುಮಾರ್ ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಹಾಡು ಹೇಳಿದಾಕ್ಷಣ ಸಿದ್ಧಾಂತ ಒಪ್ಪುತ್ತೇವೆ ಎಂದಲ್ಲ. ಸಣ್ಣ ವಯಸಿನವರಿದ್ದಾಗ ಆರ್‌ಎಸ್ ಎಸ್‌ಗೆ ಹೋಗುತ್ತಿದ್ದೆ ಎಂದಿದ್ದಾರೆ. ಅದರಲ್ಲಿ ತಪ್ಪೇನಿದೆ. ವಿರೋಧ ಮಾಡುವವರು ಮಾಡಿಕೊಳ್ಳಲಿ ಎಂದು ನೇರವಾಗಿ ಹೇಳಿದರು.
ಧರ್ಮಸ್ಥಳ ಎಲ್ಲರಿಗೂ ಸೇರಿದ್ದು. ಕಾಂಗ್ರೆಸ್‌ನವರೂ ಕೂಡ ಧರ್ಮಸ್ಥಳ ಯಾತ್ರೆಗೆ ಹೋಗಿದ್ದೇವೆ. 2023ರ ವರೆಗೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಸೌಜನ್ಯ ಸಾವು ಬಿಜೆಪಿ ಅಧಿಕಾರ ಅವಧಿಯಲ್ಲಿ ನಡೆದಿತ್ತು. ಈಗ ಸೌಜನ್ಯ ಪ್ರಕರಣವನ್ನು ತನಿಖೆ ಮಾಡಿ ಎಂದವರೇ ಬಿಜೆಪಿಯವರು ಎಂದರು.ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಕುಟುಂಬದವರೇ ತನಿಖೆಯನ್ನು ಸ್ವಾಗತಿಸಿದ್ದಾರೆ. ಇಲ್ಲಿ ಮಂಜುನಾಥಸ್ವಾಮಿ ಅಥವಾ ಹಿಂದೂ ಧರ್ಮ ಸರಿಯಲ್ಲ ಎಂದು ಹೇಳುತ್ತಿಲ್ಲ. ಒಬ್ಬ ತಲೆ ಬುರುಡೆ ಹಿಡಿದುಕೊಂಡು ಬಂದು ದೂರು ಕೊಟ್ಟಾಗ ತನಿಖೆ ಮಾಡಲೇಬೇಕು. ಅದರಂತೆ ತನಿಖೆ ನಡೆದಿದೆ. ಅನಾಮಿಕನ ಬಗ್ಗೆಯೂ ತನಿಖೆ ನಡೆದಿದ್ದು, ಕಾನೂನು ಪಾರದರ್ಶಕವಾಗಿದೆ. ಇದರ ನಡುವೆ ಲಕ್ಷಾಂತರ ಜನರನ್ನು ಕರೆದುಕೊಂಡು ಹೋಗಿ ಧರ್ಮಸ್ಥಳದಲ್ಲಿ ಡ್ರಾಮಾ ಮಾಡೋಕೆ ನಮಗೂ ಗೊತ್ತಿದೆ ಎಂದು ಧರ್ಮಸ್ಥಳ ವಿಚಾರ ಕುರಿತಂತೆ ಪ್ರತಿಕ್ರಿಯೆ ನೀಡಿದರು.
ಸತ್ತಿರುವ ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಎಸ್ಐಟಿ ರಚನೆ ಆಗಿದೆ. ಮಾಸ್ಕ್ ಮ್ಯಾನ್ ತನಿಖೆಯೂ ನಡೆಯುತ್ತಿದೆ. ಈಗ ನಾವು ಧರ್ಮಸ್ಥಳ ಯಾತ್ರೆ ಮಾಡುತ್ತೇವೆ ಅಂತ ಸುಳ್ಳು ಹೇಳಬೇಕಾ ಅಥವಾ ಡ್ರಾಮಾ ಮಾಡಬೇಕಾ. ಇದೆಲ್ಲವನ್ನು ಮಂಜುನಾಥ ಸ್ವಾಮಿ ಒಪ್ಪುವುದಿಲ್ಲ. ಅಣ್ಣಪ್ಪನ ಶಾಪ ಬಿಜೆಪಿಯವರಿಗೆ ತಟ್ಟದೇ ಬಿಡದು ಎಂದು ನೇರವಾಗಿ ಹೇಳಿದರು.ಬಿಜೆಪಿ ಈ ರೀತಿ ಡ್ರಾಮಾ ಮಾಡಿ ಐದು ವರ್ಷಕ್ಕೆ ಒಂದು ಸಾರಿ ಸೋಲುತ್ತಿದೆ. ದೇವರ ಬಗ್ಗೆ ಭಕ್ತಿ ಇದ್ದಿದ್ದರೆ 25 ವರ್ಷ ಅಧಿಕಾರದಲ್ಲಿ ಇರಬೇಕಿತ್ತು. ಧರ್ಮಸ್ಥಳದ ವಿಚಾರವನ್ನು ಬಿಜೆಪಿಯವರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ದೇವಸ್ಥಾನವನ್ನು ತೋರಿಸಿ ವೋಟ್ ಕೇಳುವವರು ಅವರೇ. ಅದೇ ದೇವರ ಶಾಪದಿಂದ ಸೋಲೋದು ಅವರೇ. ಶ್ರೀ ಮಂಜುನಾಥ ಸ್ವಾಮಿಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದೇವೆ ಎಂದು ಬಿಜೆಪಿ ನೇರವಾಗಿ ಹೇಳಲಿ. ಈ ಡ್ರಾಮ ಎಲ್ಲ ಜನರ ಎದುರು ನಡೆಯುವುದಿಲ್ಲ. ಧರ್ಮಸ್ಥಳದ ಬಗ್ಗೆ ಯಾವ ಪಕ್ಷವೂ ರಾಜಕಾರಣ ಮಾಡಬಾರದು ಎಂದರು.
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ವಿರೋಧ ವ್ಯಕ್ತವಾಗಿರುವ ಬಗ್ಗೆ ಕೇಳಿದಾಗ, ವಿರೋಧ ಮಾಡುವವರು ಟೈಮ್ ವೇಸ್ಟ್ ಗಿರಾಕಿಗಳು. ಅಬ್ದುಲ್ ಕಲಾಂ ಈ ದೇಶದ ರಾಷ್ಟ್ರಪತಿ ಆಗಬಹುದು, ನಿಸಾರ್ ಅಹಮದ್ ದಸರಾ ಉದ್ಘಾಟಿಸಬಹುದು, ರಾಜ್ಯದ ಕೋಟ್ಯಂತರ ಪರವಾಗಿರುವ ಮಹಿಳೆಯನ್ನು ವಿರೋಧ ಮಾಡುತ್ತಾರೆ ಎಂದರೆ ಮಹಿಳೆಯರಿಗೆ ಬಿಜೆಪಿಯವರು ಅಪಮಾನ ಮಾಡಿದಂತೆ ಎಂದು ದೂಷಿಸಿದರು.ಬಿಜೆಪಿ ಅವರ ಅಜೆಂಡ ಏನಿದ್ದರೂ ದೇವಸ್ಥಾನ, ಮುಸ್ಲಿಂ, ಪಾಕಿಸ್ತಾನ, ಅಮೆರಿಕ ಅಷ್ಟೇ. ಬಿಜೆಪಿಯವರನ್ನು ಚಾಮುಂಡೇಶ್ವರಿ ತಾಯಿಯು ಒಪ್ಪುವುದಿಲ್ಲ. ಭಾರತ ಸರ್ವ ಧರ್ಮದ ನೆಲೆ. ನಾವು ಸರ್ವಧರ್ಮಗಳ ಪರ ಇದ್ದೇವೆ. ಬಾನು ಮುಷ್ತಾಕ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ದಸರಾ ಉದ್ಘಾಟನೆಗೆ ಆಹ್ವಾನಿಸಿ ಅವರನ್ನು ಗೌರವಿಸುತ್ತೇವೆ ಎಂದು ಹೇಳಿದರು.