ದಕ್ಷಿಣ ಕನ್ನಡದಲ್ಲಿ ಏಕಬಳಕೆ ಪ್ಲಾಸ್ಟಿಕ್‌ ನಿಷೇಧವೆಂಬ ‘ಬೀದಿ ನಾಟಕ’!

| Published : Oct 17 2024, 12:04 AM IST / Updated: Oct 17 2024, 12:05 AM IST

ದಕ್ಷಿಣ ಕನ್ನಡದಲ್ಲಿ ಏಕಬಳಕೆ ಪ್ಲಾಸ್ಟಿಕ್‌ ನಿಷೇಧವೆಂಬ ‘ಬೀದಿ ನಾಟಕ’!
Share this Article
  • FB
  • TW
  • Linkdin
  • Email

ಸಾರಾಂಶ

ಸ್ಮಾರ್ಟ್‌ ಸಿಟಿ ಮಂಗಳೂರಿನಲ್ಲಿ ಪ್ಲಾಸ್ಟಿಕ್‌ ಫ್ಲೆಕ್ಸ್‌, ಬ್ಯಾನರ್‌ ಬಳಸದಂತೆ ಮಹಾನಗರ ಪಾಲಿಕೆ ಆಡಳಿತ ಸುತ್ತೋಲೆ ಹೊರಡಿಸಿದ್ದರೂ ಅದೂ ಕೂಡ ಜಾರಿಯಾಗುತ್ತಿಲ್ಲ. ಜನಪ್ರತಿನಿಧಿಗಳೇ ಪ್ಲಾಸ್ಟಿಕ್‌ ಫ್ಲೆಕ್ಸ್‌, ಬ್ಯಾನರ್‌ ಹಾಕುತ್ತಿರುವುದು ಇನ್ನೊಂದು ಚೋದ್ಯದ ಸಂಗತಿ.

ಸಂದೀಪ್‌ ವಾಗ್ಲೆ

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡದ ಯಾವ ಅಂಗಡಿ, ಮಾರ್ಕೆಟ್‌, ಗೂಡಂಗಡಿಗಾದರೂ ಹೋಗಿ ಪ್ಲಾಸ್ಟಿಕ್‌ ಕೈಚೀಲ ಕೇಳಿದರೆ ‘ಇಲ್ಲ’ ಎನ್ನುವ ಉತ್ತರವೇ ಸಿಗಲ್ಲ!

ಏಕಬಳಕೆ ಪ್ಲಾಸ್ಟಿಕ್‌ ತ್ಯಾಜ್ಯದಿಂದ ಉಂಟಾಗುವ ಆರೋಗ್ಯ, ಪರಿಸರ ಅಪಾಯಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರವು 2022ರ ಜು.1ರಿಂದ ಅನ್ವಯಿಸುವಂತೆ ದೇಶಾದ್ಯಂತ ಏಕಬಳಕೆ ಪ್ಲಾಸ್ಟಿಕ್‌ ಉತ್ಪಾದನೆ ಹಾಗೂ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಅಧಿಸೂಚನೆ ಹೊರಡಿಸಿದೆ. ಆದರೆ ದಕ್ಷಿಣ ಕನ್ನಡದಲ್ಲಿ ಇದರ ಒಂದಂಶದ ಅನುಷ್ಠಾನವೂ ಆಗುತ್ತಿಲ್ಲ.

2022ರಲ್ಲಿ ಅಧಿಸೂಚನೆ ಹೊರಡಿಸಿದಾಗ ಅಧಿಕಾರಿಗಳು ಜಿಲ್ಲಾದ್ಯಂತ ಅಂಗಡಿ, ಮಾರುಕಟ್ಟೆಗಳಿಗೆ ರೈಡ್‌ ಮಾಡಿ ಪ್ಲಾಸ್ಟಿಕ್‌ ವಸ್ತುಗಳನ್ನು ವಶಪಡಿಸಿ, ದಂಡ ಹಾಕಿ ಪ್ರಚಾರ ಗಿಟ್ಟಿಸಿಕೊಂಡಿದ್ದರು. ಮಂಗಳೂರು ಮೇಯರ್‌ ಕೂಡ ಕಟ್ಟುನಿಟ್ಟಿನ ಆದೇಶ ಮಾಡಿದ್ದರು. ಮೂರ್ನಾಲ್ಕು ತಿಂಗಳ ಕಾಲ ಇಂಥ ಪ್ಲಾಸ್ಟಿಕ್‌ ವಸ್ತುಗಳು ಕೊಂಚ ಹತೋಟಿಗೆ ಬಂದಿದ್ದವು. ನಂತರ ಅದೇ ರಾಗ, ಅದೇ ತಾಳ. ಈಗಂತೂ ಎಲ್ಲೆಂದರಲ್ಲಿ ಬಳಸಿ ಬಿಸಾಡಿದ ಪ್ಲಾಸ್ಟಿಕ್‌ ತ್ಯಾಜ್ಯ ಕಣ್ಣಿಗೆ ರಾಚುತ್ತಿದೆ.

ಕಾನೂನು ಉಲ್ಲಂಘಿಸಿದವರಿಗೆ ಭಾರೀ ದಂಡ ಹಾಗೂ ಶಿಕ್ಷೆಯ ಪ್ರಸ್ತಾಪವೂ ಇದೆ. ಯಾವುದೂ ಕೂಡ ಇಲ್ಲಿ ಜಾರಿಯಾಗುತ್ತಿಲ್ಲ.ವಾರ್ಡ್‌ ತಂಡಗಳು ಎಲ್ಲೋಯ್ತು?: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಏಕಬಳಕೆ ಪ್ಲಾಸ್ಟಿಕ್‌ ನಿಷೇಧ 2022ಕ್ಕಿಂತ ಮೊದಲೇ ಇತ್ತು, ಆದರೆ ಅನುಷ್ಠಾನ ಮಾತ್ರ ಆಗುತ್ತಿರಲಿಲ್ಲ ಎನ್ನುವುದು ಬೇರೆ ವಿಚಾರ. 2022ರಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ ಬಳಿಕ ನಗರದ ಎಲ್ಲ 60 ವಾರ್ಡ್‌ಗಳಲ್ಲಿ ಕಾರ್ಯಾಚರಣೆ ನಡೆಸಲು ಪ್ರತಿ 6 ವಾರ್ಡ್‌ಗಳಿಗೊಂದು ತಂಡ ರಚನೆ ಮಾಡಲಾಗಿತ್ತು. ಈ ತಂಡಗಳು ಕೆಲವು ದಿನ ಕಾರ್ಯಾಚರಣೆ ನಡೆಸಿದವು. ನಂತರ ನಾಪತ್ತೆಯಾಗಿಬಿಟ್ಟಿವೆ!

ಅಧಿಸೂಚನೆ ಹೊರಡಿಸಿದ ಬಳಿಕ ಏಕಬಳಕೆ ಪ್ಲಾಸ್ಟಿಕ್‌ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಧರ್ಮಸ್ಥಳ ಮತ್ತು ಮಂಗಳೂರು ನಗರವನ್ನು ಆಯ್ಕೆ ಮಾಡಲಾಗಿತ್ತು. ಎಷ್ಟು ಕಟ್ಟುನಿಟ್ಟಾಗಿ ಜಾರಿಯಾಗಿದೆ ಎನ್ನುವುದನ್ನು ನೋಡಲು ಭೂತಕನ್ನಡಿ ಬೇಕಾಗಿಯೇ ಇಲ್ಲ!

ಯಾವೆಲ್ಲ ಪ್ಲಾಸ್ಟಿಕ್‌ ಬಳಕೆ ನಿಷೇಧ?: ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌, ಬ್ಯಾನರ್‌, ಬಂಟಿಂಗ್ಸ್‌, ಫ್ಲೆಕ್ಸ್‌, ಪ್ಲೇಟ್‌ಗಳು, ಧ್ವಜ, ಕಪ್‌, ಸ್ಪೂನ್‌, ಲೋಟ, ಫೋರ್ಕ್‌, ಟೇಬಲ್‌ ಮೇಲೆ ಹರಡುವ ಪ್ಲಾಸ್ಟಿಕ್‌ ಹಾಳೆ, ಕ್ಯಾಂಡಿ, ಐಸ್‌ಕ್ರೀಮ್‌ ಸ್ಟಿಕ್‌ಗಳು ಇತ್ಯಾದಿ 20ರಷ್ಟು ವಸ್ತುಗಳನ್ನು ನಿಷೇಧಿಸಿ ಪಟ್ಟಿ ಮಾಡಲಾಗಿದೆ.

ಉತ್ಪಾದನೆ ಮೇಲೆ ಹಿಡಿತ ಇಲ್ಲ: “ಪ್ಲಾಸ್ಟಿಕ್‌ ನಿಷೇಧ ಮಾಡುವುದು ನಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದೇ. ಆದರೆ ಉತ್ಪಾದನೆ ಹಂತದಲ್ಲೇ ಅದನ್ನು ಮೊದಲು ಜಾರಿ ಮಾಡಿ. ಉತ್ಪಾದನೆಯೇ ಆಗದಿದ್ದರೆ ಮಾರುಕಟ್ಟೆಗೆ ಪ್ಲಾಸ್ಟಿಕ್‌ ವಸ್ತುಗಳ ಬರುವುದಾದರೂ ಹೇಗೆ? ಎಲ್ಲ ವ್ಯಾಪಾರಿಗಳು ಈಗ ಬಳಕೆ ಮಾಡುತ್ತಿದ್ದಾರೆ. ಉಳಿದ ವ್ಯಾಪಾರಿಗಳು ಪ್ಲಾಸ್ಟಿಕ್‌ ಬ್ಯಾಗ್‌ಗಳನ್ನು ಗ್ರಾಹಕರಿಗೆ ನೀಡುವಾಗ ನಾವು ನೀಡದಿದ್ದರೆ ಗ್ರಾಹಕರು ನಮ್ಮ ಅಂಗಡಿಗೆ ಬರಲ್ಲ” ಎನ್ನುತ್ತಾರೆ ಮಂಗಳೂರಿನ ಅಂಗಡಿ ವ್ಯಾಪಾರಿ ಗಣೇಶ್‌.

ಈ ಕುರಿತು ಮಾಲಿನ್ಯ ನಿಯಂತ್ರಣಾಧಿಕಾರಿಯನ್ನು ಸಂಪರ್ಕಿಸಿದಾಗ, ಏಕಬಳಕೆ ಪ್ಲಾಸ್ಟಿಕ್‌ ಉತ್ಪಾದನೆಯ ಕುರಿತಾದ ಅಂಕಿ ಅಂಶಗಳೇ ಇಲ್ಲ ಎಂದು ಹಾರಿಕೆ ಉತ್ತರ ನೀಡಿದ್ದಾರೆ.ಪ್ಲಾಸ್ಟಿಕ್‌ ಬ್ಯಾನರ್‌, ಫ್ಲೆಕ್ಸ್‌ನ ಸ್ಮಾರ್ಟ್‌ ಸಿಟಿ

ಸ್ಮಾರ್ಟ್‌ ಸಿಟಿ ಮಂಗಳೂರಿನಲ್ಲಿ ಪ್ಲಾಸ್ಟಿಕ್‌ ಫ್ಲೆಕ್ಸ್‌, ಬ್ಯಾನರ್‌ ಬಳಸದಂತೆ ಮಹಾನಗರ ಪಾಲಿಕೆ ಆಡಳಿತ ಸುತ್ತೋಲೆ ಹೊರಡಿಸಿದ್ದರೂ ಅದೂ ಕೂಡ ಜಾರಿಯಾಗುತ್ತಿಲ್ಲ. ಜನಪ್ರತಿನಿಧಿಗಳೇ ಪ್ಲಾಸ್ಟಿಕ್‌ ಫ್ಲೆಕ್ಸ್‌, ಬ್ಯಾನರ್‌ ಹಾಕುತ್ತಿರುವುದು ಇನ್ನೊಂದು ಚೋದ್ಯದ ಸಂಗತಿ. ಈ ವರ್ಷ ನಡೆದ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಪ್ಲಾಸ್ಟಿಕ್‌ ಧ್ವಜಗಳು ಎಗ್ಗಿಲ್ಲದೆ ಮಾರಾಟವಾಗುತ್ತಿದ್ದವು. ಆಡಳಿತ ನಡೆಸುವವರು ಇದ್ಯಾವುದೂ ತಮಗೆ ಸಂಬಂಧವಿಲ್ಲ ಎಂಬಂತಿದ್ದಾರೆ.