ಜೂ.30 ರಿಂದ ಜು. 29 ರವರೆಗೆ ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಮತದಾರರ ವಿವರ ಪರಿಶೀಲಿಸಲಿದ್ದಾರೆ

ಕನಕಗಿರಿ: ಪ್ರಜಾಪ್ರಭುತ್ವ ಇನ್ನಷ್ಟು ಗಟ್ಟಿಗೊಳಿಸಲು ಹಾಗೂ ಪಾರದರ್ಶಕ ಮತಪಟ್ಟಿ ಸಿದ್ದಪಡಿಸುವುದಕ್ಕಾಗಿ ಭಾರತ ಚುನಾವಣಾ ಆಯೋಗ ದೇಶ ವ್ಯಾಪಿ ವಿಶೇಷ ಸಮಗ್ರ ಪರಿಷ್ಕರಣೆ ಅಭಿಯಾನ ನಡೆಸುತ್ತಿದ್ದು, ಸಾರ್ವಜನಿಕರು ಪರಿಷ್ಕರಣೆಗೆ ಸಹಕರಿಸಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ಟಿ. ಕೃಷ್ಣಮೂರ್ತಿ ಹೇಳಿದರು.

ಪಟ್ಟಣದಲ್ಲಿ ಜಿಲ್ಲಾಡಳಿತ, ಜಿಪಂ ಕೊಪ್ಪಳ ಹಾಗೂ ತಾಲೂಕು ಸ್ವೀಪ್ ಸಮಿತಿ ಕನಕಗಿರಿ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಜಾಗೃತಿ ಜಾಥಾ ಹಾಗೂ ಮತದಾರರಿಗೆ ಗಣತಿ ನೋಂದಣಿ ಅರ್ಜಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು.

ಅರ್ಹ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವುದು ಹಾಗೂ ಮರಣ ಹೊಂದಿರುವವರು, ಸ್ಥಳಾಂತರಗೊಂಡವರು, ನಕಲು ಹೆಸರು, ಮತ್ತು ಇತರ ಅನರ್ಹ ಮತದಾರರನ್ನು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವುದು ಇದರ ಉದ್ದೇಶವಾಗಿದೆ. ಜೂ.30 ರಿಂದ ಜು. 29 ರವರೆಗೆ ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಮತದಾರರ ವಿವರ ಪರಿಶೀಲಿಸಲಿದ್ದಾರೆ. ಮತದಾರರು ಬಿಎಲ್ಒಗಳು ನೀಡಿದ ಎಸ್ಐಆರ್ ಅರ್ಜಿ ಭರ್ತಿ ಮಾಡಿ ಸಲ್ಲಿಸಬೇಕು ಎಂದರು.

ಇದಕ್ಕೂ ಮುನ್ನ ಪಟ್ಟಣದ ಸಪಪೂ ಕಾಲೇಜಿನ ಸಭಾಂಗಣದಲ್ಲಿ ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ 2026ರ ಕುರಿತು ಬಿಎಲ್ಒ, ಬಿಎಲ್ಇ ಹಾಗೂ ಮೇಲ್ವಿಚಾರಕರಿಗೆ ಎಸ್ಐಆರ್ ಪ್ರಾಥಮಿಕ ತರಬೇತಿ ನೀಡಲಾಯಿತು. ನಂತರ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಬೈಕ್ ಜಾಥಾ ನಡೆಸಿ ಜಾಗೃತಿ ಮೂಡಿಸಲಾಯಿತು.

ಈ ವೇಳೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ. ರಾಜಶೇಖರ, ತಹಶೀಲ್ದಾರ್ ಚಂದ್ರಶೇಖರ, ಪಪಂ ಮುಖ್ಯಾಧಿಕಾರಿ ಲಕ್ಷ್ಮಣ್ ಕಟ್ಟಿಮನಿ ಸೇರಿದಂತೆ ಬೂತ್ ಮಟ್ಟದ ಅಧಿಕಾರಿ, ಬಿಜೆಪಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.