ಹುಬ್ಬಳ್ಳಿ: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ (ಎಸ್‌ಐಆರ್‌) ಹೆಸರಿನಲ್ಲಿ ನೈಜ ಮತದಾರರ ಹೆಸರನ್ನು ಕೈಬಿಡುವ ಹುನ್ನಾರ ನಡೆಯುತ್ತಿದೆ. ಈ ಕುರಿತು ಪ್ರತಿಯೊಬ್ಬರೂ ಎಚ್ಚರಿಕೆ ವಹಿಸುವಂತೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ ಹೇಳಿದರು.

ಇಲ್ಲಿನ ಹಳೇಹುಬ್ಬಳ್ಳಿಯ ಡಾ. ಬಾಬು ಜಗಜೀವನರಾಮ್ ಸಮುದಾಯ ಭವನದಲ್ಲಿ ಹು-ಧಾ ಮಹಾನಗರ ಜಿಲ್ಲಾ ಹಾಗೂ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಆಶ್ರಯದಲ್ಲಿ ಗುರುವಾರ ಎಸ್.ಐ.ಆರ್. ಕುರಿತು ಹಮ್ಮಿಕೊಳ್ಳಲಾಗಿದ್ದ ಬೆಳಗಾವಿ ವಿಭಾಗ ಮಟ್ಟದ ಜನ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಎಸ್‌ಐಆರ್‌ ಹೆಸರಲ್ಲಿ ಬಿಜೆಪಿ ಮಾಡುತ್ತಿರುವ ಷಡ್ಯಂತ್ರ ಕುರಿತು ಜನರಲ್ಲಿ ಅರಿವು ಮೂಡಿಸಬೇಕಿದೆ. ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ಅರ್ಥಶಾಸ್ತ್ರಜ್ಞ ಪ್ರೊ. ಅಮರ್ಥಸೇನ, ನೇತಾಜಿ ಸುಭಾಷಚಂದ್ರ ಭೋಸ್‌ ಅವರ ಮೊಮ್ಮಗ ಚಂದ್ರ ಭೋಸ್, ಕ್ರಿಕೆಟಿಗ ಮಹ್ಮದ ಶಮಿ ಸೇರಿದಂತೆ ಹಲವರ ಹೆಸರನ್ನು ಮತಪಟ್ಟಿಯಿಂದ ತೆಗೆದುಹಾಕಲಾಗಿದೆ. ಇನ್ನು ಸಾಮಾನ್ಯ ಜನರ ಸ್ಥಿತಿ ಏನು ಎಂದು ಪ್ರಶ್ನಿಸಿದರು.

ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದು, ಧರ್ಮ, ಜಾತಿ ಮತ್ತು ಭಾಷೆಯ ಆಧಾರದ ಮೇಲೆ ರಾಜಕೀಯ ಮಾಡುತ್ತಿವೆ. ದೇಶದ ಅಭಿವೃದ್ಧಿ, ರೈತರು, ಕಾರ್ಮಿಕರು, ಮಹಿಳೆಯರು ಹಾಗೂ ಯುವಕರ ಸಮಸ್ಯೆಗಳ ಬಗ್ಗೆ ಗಮನ ಹರಿಸುವ ಬದಲು ಜನರ ಭಾವನೆಗಳನ್ನು ಕೆರಳಿಸುವ ರಾಜಕಾರಣ ನಡೆಸಲಾಗುತ್ತಿದೆ ಎಂದು ಟೀಕಿಸಿದರು.

ಮತದಾರರ ಪಟ್ಟಿಯಲ್ಲಿ ನಕಲಿ ಹೆಸರಿದ್ದರೆ ಅವುಗಳನ್ನು ತೆಗೆದುಹಾಕಬೇಕು. ಆದರೆ, ನೈಜ ಮತದಾರರ ಹೆಸರುಗಳನ್ನು ಕೈಬಿಡಲು ಅವಕಾಶ ನೀಡಬಾರದು. ವಿಶೇಷವಾಗಿ ಬಡವರು, ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಮತದಾನದ ಹಕ್ಕು ಕಸಿಯದಂತೆ ಕಾಂಗ್ರೆಸ್ ಕಾರ್ಯಕರ್ತರು ಮನೆಮನೆಗೆ ತೆರಳಿ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.


ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಶಾಸಕರು ಹಾಗೂ ಪಕ್ಷದ ಮುಖಂಡರು ನಿರಂತರವಾಗಿ ಜನರನ್ನು ಭೇಟಿ ಮಾಡಿ ಮತದಾರರ ಪಟ್ಟಿಯಲ್ಲಿ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳುವಂತೆ ತಿಳಿಸಬೇಕು ಎಂದರು.

ದೇಶದ ಲೂಟಿ ಹೊಡೆದ ಬಿಜೆಪಿ

ಸ್ವಾತಂತ್ರ್ಯ ಪೂರ್ವದಲ್ಲಿ ಮಹಮ್ಮದ್ ಘಜ್ನಿ ಭಾರತದ ಮೇಲೆ 17 ಬಾರಿ ದಾಳಿ ಮಾಡಿ ದೇಶದ ಸಂಪತ್ತು ಲೂಟಿ ಮಾಡಿದ್ದ. ಆದರೆ, ಈಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಮ ಮಂದಿರ ಸೇರಿದಂತೆ ದೇಶದ ಜನರ ಸಂಪತ್ತು ಲೂಟಿ ಮಾಡುತ್ತಿದೆ. ಪದವಿ ಹೊಂದಿರುವುದಾಗಿ ಸುಳ್ಳು ಹೇಳುತ್ತ ತಿರುಗಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ದೇಶದ ಜನರ ದಾಖಲಾತಿ ಕೇಳುವ ಯಾವ ನೈತಿಕ ಹಕ್ಕೂ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ನಡೆ- ಮತ ರಕ್ಷಣೆ ಕಡೆಗೆ ಅಭಿಯಾನದ ಅಧ್ಯಕ್ಷ ವಿ.ಆರ್‌. ಸುದರ್ಶನ್‌ ಮಾತನಾಡಿ, ಪ್ರಜಾಪ್ರಭುತ್ವ ಮತ್ತು ಸಂಸದೀಯ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಆಯೋಜಿಸಿರುವ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಪಕ್ಷದ ಎಲ್ಲ ಪದಾಧಿಕಾರಿಗಳು, ಬ್ಲಾಕ್ ಅಧ್ಯಕ್ಷರು, ಬೂತ್ ಲೆವೆಲ್ ಏಜೆಂಟರು, ಮುಖಂಡರು ಹಾಗೂ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಿದರು.

ಮತದಾರರ ಕರಡು ಪಟ್ಟಿ ಪ್ರಕಟಣೆಯಾದ ಬಳಿಕ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ವಕೀಲರ ತಂಡಗಳನ್ನು ರಚಿಸಿ ಅಗತ್ಯ ಆಕ್ಷೇಪಣೆಗಳನ್ನು ಚುನಾವಣಾ ಆಯೋಗದ ಮುಂದೆ ಸಲ್ಲಿಸಬೇಕು. ಗ್ರಾಪಂ, ತಾಪಂ, ಜಿಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಈಗಿನಿಂದಲೇ ಸಿದ್ಧತೆ ನಡೆಸಬೇಕು ಎಂದರು.

ಶಾಸಕರಾದ ಸಂತೋಷ ಲಾಡ್, ಎನ್‌.ಎಚ್‌. ಕೋನರಡ್ಡಿ, ಶ್ರೀನಿವಾಸ ಮಾನೆ, ಯು.ಬಿ. ಬಣಕಾರ ಸೇರಿದಂತೆ ಹಲವರು ಮಾತನಾಡಿದರು. ಶಾಸಕರಾದ ಪ್ರಸಾದ ಅಬ್ಬಯ್ಯ, ಬಸವರಾಜ ಶಿವಣ್ಣವರ, ಯಾಸೀರಖಾನ ಪಠಾಣ, ವಿಪ ಸದಸ್ಯ ಎಫ್‌.ಎಚ್‌. ಜಕ್ಕಪ್ಪನವರ, ಮಾಜಿ ಶಾಸಕರಾದ ಅಜೀಮ್‌ಫೀರ್ ಖಾದ್ರಿ, ಮೋಹನ ಲಿಂಬಿಕಾಯಿ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಶಿವಲೀಲಾ ಕುಲಕರ್ಣಿ, ಜಿಲ್ಲಾಧ್ಯಕ್ಷರಾದ ಅಲ್ತಾಫ ಹುಸೇನ ಹಳ್ಳೂರ, ಅನಿಲಕುಮಾರ ಪಾಟೀಲ ಸೇರಿದಂತೆ ಬೆಳಗಾವಿ ವಿಭಾಗದ ಎಲ್ಲ ಜಿಲ್ಲಾಧ್ಯಕ್ಷರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ರಾಜಕೀಯ ನಿವೃತ್ತಿ

ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಆರಂಭಿಸಿರುವ ಮನ್‌ ಕಿ ಬಾತ್‌ನಲ್ಲಿ ಒಮ್ಮೆಯೂ ರೈತರ ಸಮಸ್ಯೆ, ಅವರ ಏಳ್ಗೆ ಬಗ್ಗೆ ಪ್ರಸ್ತಾಪಿಸಿಲ್ಲ. ಒಂದು ವೇಳೆ ಮಾತನಾಡಿದ್ದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ ಸವಾಲೆಸೆದರು. 2024ರ ರೈತರ ಹೋರಾಟದ ಸಂದರ್ಭದಲ್ಲಿ ರೈತರಿಗೆ ನ್ಯಾಯ ಒದಗಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಹೋರಾಟದ ವೇಳೆ ಪ್ರಾಣ ಕಳೆದುಕೊಂಡ ರೈತರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಯಾವುದೇ ಸಾಂತ್ವನ ವ್ಯಕ್ತಪಡಿಸಲಿಲ್ಲ. ಬಿಜೆಪಿ ರೈತರ, ಬಡವರ ಬೆನ್ನಮೂಳೆ ಮುರಿಯುವ ಕೆಲಸ ಮಾಡಿದೆಯೇ ಹೊರತು ಅವರ ಪರವಾಗಿ‌ ಎಂದಿಗೂ ಕೆಲಸ ಮಾಡಿಲ್ಲ ಎಂದು ಟೀಕಿಸಿದರು.