ಪ್ರಜಾಪ್ರಭುತ್ವ ಇನ್ನಷ್ಟು ಬಲಪಡಿಸುವ ಈ ಮಹತ್ವದ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಅರ್ಹ ಮತದಾರರೂ ಸಕ್ರಿಯವಾಗಿ ಭಾಗವಹಿಸೋಣ
ಗಂಗಾವತಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಹತ್ವವಾಗಿದ್ದು, ದೇಶಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವ್ಯವಸ್ಥೆಯಿಂದ ನಕಲಿ ಮತದಾನಕ್ಕೆ ಕಡಿವಾಣ ಹಾಕುವಂತಾಗಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಅಭಿಯಾನದ ಅಂಗವಾಗಿ ಕನಕಗಿರಿ ರಸ್ತೆಯ ತಮ್ಮನಿವಾಸದಲ್ಲಿ ರಾಜ್ಯದಲ್ಲಿ ಆರಂಭಗೊಂಡಿರುವ ಬೂತ್ ಮಟ್ಟದ ಅಧಿಕಾರಿಗಳಿಂದ ಎನ್ಯುಮರೇಷನ್ ಫಾರ್ಮ್ ಅನ್ನು ಅಗತ್ಯ ಮಾಹಿತಿ ಭರ್ತಿ ಮಾಡಿ ಚಾಲನೆ ನೀಡಿ ಮಾತನಾಡಿದರು.ಪ್ರಜಾಪ್ರಭುತ್ವ ಇನ್ನಷ್ಟು ಬಲಪಡಿಸುವ ಈ ಮಹತ್ವದ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಅರ್ಹ ಮತದಾರರೂ ಸಕ್ರಿಯವಾಗಿ ಭಾಗವಹಿಸೋಣ. ನಿಮ್ಮ ಮನೆಗೆ ಭೇಟಿ ನೀಡುವ ಬೂತ್ ಮಟ್ಟದ ಅಧಿಕಾರಿಗಳಿಗೆ ಅಗತ್ಯ ಮಾಹಿತಿ ಹಾಗೂ ದಾಖಲೆ ಒದಗಿಸಿ, ಮತದಾರರ ಪಟ್ಟಿ ನಿಖರ, ಪಾರದರ್ಶಕ ಹಾಗೂ ಸಮಗ್ರವಾಗಿಸಲು ಸಹಕರಿಸಿ. ಪ್ರತಿಯೊಬ್ಬ ಅರ್ಹ ನಾಗರಿಕರ ಹೆಸರು ಮತದಾರರ ಪಟ್ಟಿಯಲ್ಲಿ ಸರಿಯಾಗಿ ದಾಖಲಾಗಿರುವುದು ನಮ್ಮ ಪ್ರಜಾಪ್ರಭುತ್ವದ ಶಕ್ತಿಯ ಪ್ರತೀಕವಾಗಿದೆ. ಆದ್ದರಿಂದ ಈ ಅಭಿಯಾನ ಯಾವುದೇ ನಿರ್ಲಕ್ಷ್ಯ ಮಾಡದೆ ಯಶಸ್ವಿಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿ ಹಾಗೂ ಕರ್ತವ್ಯವಾಗಿದೆ ಎಂದರು.
ಇದೇ ವೇಳೆ ಕಾರ್ಯಕರ್ತರೊಂದಿಗೆ ಗಂಗಾವತಿ ನಗರದ ವಿವಿಧ ವಾರ್ಡ್ ಗಳಲ್ಲಿ ಮನೆ ಮನೆ ಭೇಟಿ ನೀಡಿ ಎಸ್ಐಆರ್ ಕುರಿತು ಮತದಾರರಿಗೆ ಜಾಗೃತಿ ಮೂಡಿಸಿ ಅಗತ್ಯ ಮಾಹಿತಿ ಮತ್ತು ದಾಖಲೆ ನೀಡಲು ತಿಳಿಸಿದರು. ಭಾರತದ ಸಂವಿಧಾನ ನಮಗೆ ನೀಡಿರುವ ಮತದಾನದ ಹಕ್ಕು ಅತ್ಯಂತ ಅಮೂಲ್ಯವಾದದ್ದು. ಆ ಹಕ್ಕು ಚಲಾಯಿಸಲು ಮೊದಲ ಹೆಜ್ಜೆಯೇ ನಿಖರವಾದ ಮತದಾರರ ಪಟ್ಟಿ. ಹೀಗಾಗಿ ಈ ವಿಶೇಷ ಸಮಗ್ರ ಪರಿಷ್ಕರಣೆ ಅಭಿಯಾನದಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಪಾಲ್ಗೊಂಡು ಅಗತ್ಯ ದಾಖಲೆ ಸಮಯಕ್ಕೆ ಸರಿಯಾಗಿ ಸಲ್ಲಿಸಿ ಪ್ರಜಾಪ್ರಭುತ್ವದ ಬಲವರ್ಧನೆಗೆ ಕೈಜೋಡಿಸೋಣ ಎಂದರು.ಈ ಸಂದರ್ಭದಲ್ಲಿ ತಹಸೀಲ್ದಾರ ವಸಂತಕುಮಾರಿ, ನಗರಸಭಾ ಆಯುಕ್ತ ವಿರುಪಾಕ್ಷಮೂರ್ತಿ, ಶಿರಸ್ತೆದಾರ ರವಿಕುಮಾರ, ನಗರಸಭೆ ಕಂದಾಯ ಅಧಿಕಾರಿ ಮಹಿಬೂಬು ಪಾಷಾ, ಅಲಿಖಾನ್ ಬಳ್ಳಾರಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಚಂದ್ರಶೇಖರ ಹಿರೂರು, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಡಿ.ಕೆ. ಆಗೋಲಿ, ಜಿಲ್ಲಾ ಉಪಾಧ್ಯಕ್ಷ ಮನೋಹರಗೌಡ ಹೆರೂರು, ಬಿಎಲ್ಎ1 ವೀರೇಶ್ ಬಲಕುಂದಿ, ಯಮನೂರು ಚೌಡ್ಕಿ, ನಾಗರಾಜ್ ಚಳಗೇರಿ, ಲಿಂಗನಗೌಡ, ಪ್ರಸಾದ್, ಸಂಗಮೇಶ್, ದೀಪಕ್ ಬಾಂಟೀಯ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.