ಮುಂಡಗೋಡ: ಕಾಂಗ್ರೆಸ್‌ ಮತದಾರರನ್ನು ವಂಚನೆ ಮಾಡುವುದೇ ಎಸ್ಐಆರ್ ಯೋಜನೆಯ ಮೂಲಭೂತ ಉದ್ದೇಶವಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಆರೋಪಿಸಿದರು.

ಇಲ್ಲಿಯ ಕಾರ್ಮಿಕ ಭವನದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್.ಐ.ಆರ್) ಕುರಿತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಮಾಹಿತಿ ನೀಡುವ ಉದ್ದೇಶದಿಂದ ಕೈಗೊಳ್ಳಲಾದ ಸಭೆಯನ್ನುದ್ದೇಶಿಸಿ ಮಾತನಾಡಿದರು. ಹಿಂದುಳಿದ ವರ್ಗ, ಎಸ್ಸಿ-ಎಸ್ಟಿ ಹಾಗೂ ಅಲ್ಪಸಂಖ್ಯಾತ ಮತಗಳನ್ನು ಹೊಂದಿರುವ ಕಾಂಗ್ರೆಸ್ ಮತದಾರರಿಗೆ ವಂಚನೆ ಮಾಡುವುದರಿಂದ ಪಕ್ಷದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಕಾರಣದಿಂದ ಇದನ್ನು ಜಾರಿಗೆ ತರಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ೧.೧೦ ಕೋಟಿ ಮತದಾರರನ್ನು ಮತದಾನ ಹಕ್ಕಿನಿಂದ ವಂಚನೆ ಮಾಡಿ ಸರ್ಕಾರವೇ ಹೋಗುವಂತ ಪರಿಸ್ಥಿತಿ ನಿರ್ಮಾಣ ಮಾಡಲಾಯಿತು. ತಮಿಳುನಾಡು ಕೂಡ ಇದಕ್ಕೆ ಹೊರತಾಗಿಲ್ಲ. ಅತಿ ಹೆಚ್ಚು ವಿದ್ಯಾವಂತರಿರುವ ಕೇರಳದಲ್ಲಿ ಮಾತ್ರ ಈ ಕಾರ್ಯಕ್ರಮ ಯಶಸ್ವಿಯಾಗಿದೆ. ಇನ್ನುಳಿದ ಎಲ್ಲ ಕಡೆ ಜಾಗೃತಿ ಕೊರತೆಯಿಂದ ಚುನಾವಣಾ ಫಲಿತಾಂಶಗಳು ಬುಡಮೇಲಾಗುತ್ತಿವೆ.

ಎಸ್ಐಆರ್ ನಲ್ಲಿ ೧೮ ವರ್ಷ ಮೇಲ್ಪಟ್ಟವರಿಗೆ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಅವಕಾಶವಿದೆ. ಆದರೆ, ಈ ಹಿಂದೆ ಮತದಾನ ಮಾಡಿದ ನಾವು ಎಸ್ಐಆರ್‌ನಲ್ಲಿ ಯಶಸ್ವಿಯಾಗಿ ಮತದಾರ ಪಟ್ಟಿಯಲ್ಲಿ ಹೆಸರು ಬರದಿದ್ದರೆ ಮುಂದೆ ಬರುವ ಯಾವ ಚುನಾವಣೆಯಲ್ಲಿ ಮತದಾನ ಮಾಡಲು ಸಾಧ್ಯವಿಲ್ಲ. ಮುಂಡಗೋಡ ತಾಲೂಕಿನಲ್ಲಿ ೮೦ ಸಾವಿರ ಮತದಾರರಿದ್ದು, ಜೂ. ೨೯ರಿಂದ ಜುಲೈ ೩೦ರೊಳಗೆ ಪ್ರತಿಯೊಬ್ಬ ಮತದಾರರಿಗೂ ಕಡ್ಡಾಯವಾಗಿ ಕಲರ್ ಪೋಟೊ ಆಗಬೇಕು. ಯಾರಿಗೆ ಮತದಾನಕ್ಕೆ ಅವಕಾಶ ಸಿಗುವುದಿಲ್ಲವೊ ಅವರು ಭಾರತದ ಪ್ರಜೆಯೇ ಅಲ್ಲ ಎಂದು ಪರಿಗಣಿಸಲಾಗುತ್ತದೆ. ಅಂತಹವರಿಗೆ ಗ್ಯಾರಂಟಿ, ಮಾಶಾಸನ ಸೇರಿದಂತೆ ಯಾವುದೇ ಸರ್ಕಾರಿ ಯೋಜನೆಗಳು ಸಿಗುವುದಿಲ್ಲ. ಈ ಸಂಗತಿಯನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಮತದಾರ ಪಟ್ಟಿಯಿಂದ ಹೆಸರು ಬಿಟ್ಟು ಹೋದ ಮೇಲೆ ತಮಗೆ ಸಿಗುತ್ತಿದ್ದ ಸರ್ಕಾರಿ ಸವಲತ್ತು ಬಂದ್ ಆಗಿದೆ ಎಂದು ಯಾರ ಮುಂದೆ ಹೇಳಿಕೊಂಡರೂ ಪ್ರಯೋಜನವಿಲ್ಲ. ನಮ್ಮ ಮತದಾರರನ್ನು ಮತದಾನದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಹಾಗಾಗಿ ಈಗಲೇ ಎಚ್ಚೆತ್ತುಕೊಳ್ಳುವ ಮೂಲಕ ಸಮರ್ಪಕ ಮಾಹಿತಿ ಹಾಗೂ ಸ್ಪಷ್ಟವಾದ ಪೋಟೋ ನೀಡುವ ಮೂಲಕ ನಮ್ಮ ಮತದಾನವನ್ನು ಭದ್ರಪಡಿಸಿಕೊಳ್ಳಬೇಕು ಎಂದರು.

ಮುಂಬರುವ ಗ್ರಾಪಂ, ಪಪಂ, ತಾಪಂ, ಜಿಪಂ ಸೇರಿದಂತೆ ಯಾವುದೇ ಚುನಾವಣೆ ಎದುರಿಸಿ ಗೆಲ್ಲಬೇಕಾದರೆ ಮೊದಲು ಎಸ್ಐಆರ್ ಅನ್ನು ಗೆಲ್ಲುವುದು ಮುಖ್ಯವಾಗಿದೆ. ಸಭೆಯಲ್ಲಿ ಎಸ್‌ಐಆರ್ ಪ್ರಕ್ರಿಯೆಯ ಮಹತ್ವ, ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯದಲ್ಲಿ ಕಾರ್ಯಕರ್ತರ ಪಾತ್ರ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕುರಿತು ಶಾಸಕರು ಮಾರ್ಗದರ್ಶನ ನೀಡಿದರು.


ಈ ಸಂದರ್ಭ ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಜಿಲ್ಲಾ ಕಾರ್ಯದರ್ಶಿ ಜ್ಞಾನೇಶ್ವರ ಗುಡಿಯಾಳ, ಜಿಪಂ ಮಾಜಿ ಸದಸ್ಯ ರವಿಗೌಡ ಪಾಟೀಲ್ ಹಾಗೂ ರಾಮಕೃಷ್ಣ ಮೂಲಿಮನಿ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎಂ. ನಾಯ್ಕ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ರಾಠೋಡ, ಜಿಲ್ಲಾ ಕಾರ್ಯದರ್ಶಿ ಸಲ್ಮಾ ಶೇರಖಾನೆ, ಹಿಂದುಳಿದ ವರ್ಗ ವಿಭಾಗದ ತಾಲೂಕು ಅಧ್ಯಕ್ಷ ದೇವು ಪಾಟೀಲ್ ಸೇರಿದಂತೆ ಪ್ರಮುಖರಾದ ಸಿದ್ಧಪ್ಪ ಹಡಪದ, ಧರ್ಮರಾಜ ನಾಡಗೇರ್, ವೈ.ಪಿ. ಭುಜಂಗಿ, ಪರಶುರಾಮ ತಹಶಿಲ್ದಾರ್, ಮಹಮ್ಮದ್ ಗೌಸ್ ಮಕಾನದಾರ್, ಕೆಂಜೋಡಿ ಗಲಬಿ, ರಫೀಕ ಇನಾಮದಾರ್, ನಾಗಭೂಷಣ ಹಾವಣಗಿ, ಬಸವರಾಜ ಆಸ್ತಕಟ್ಟಿ, ಮುಂತಾದವರಿದ್ದರು.