ಪೆನ್‌ಡ್ರೈವ್‌ ಪ್ರಕರಣ: ಪ್ರೀತಂಗೌಡರ ಆಪ್ತರಿಬ್ಬರನ್ನು ಬಂಧಿಸಿದ ಎಸ್ಐಟಿ

| Published : May 13 2024, 12:06 AM IST / Updated: May 13 2024, 01:19 PM IST

ಪೆನ್‌ಡ್ರೈವ್‌ ಪ್ರಕರಣ: ಪ್ರೀತಂಗೌಡರ ಆಪ್ತರಿಬ್ಬರನ್ನು ಬಂಧಿಸಿದ ಎಸ್ಐಟಿ
Share this Article
  • FB
  • TW
  • Linkdin
  • Email

ಸಾರಾಂಶ

ಸಂಸದ ಪ್ರಜ್ವಲ್‌ ರೇವಣ್ಣರಿಗೆ ಸಂಬಂಧಿಸಿದ್ದು ಎನ್ನಲಾದ ಪೆನ್‌ಡ್ರೈವ್‌ನಲ್ಲಿಯ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ವಿಚಾರವಾಗಿ ಕ್ಷೇತ್ರದ ಮಾಜಿ ಶಾಸಕ ಪ್ರೀತಂಗೌಡರ ಆಪ್ತ ಲಿಖಿತ್ ಹಾಗೂ ಚೇತನ್ ಇಬ್ಬರನ್ನು ಎಸ್‌ಐಟಿ ತಂಡವು ಹಾಸನದಲ್ಲಿ ಬಂಧಿಸಿ ಭಾನುವಾರ ವಿಚಾರಣೆಗೆ ಒಳಪಡಿಸಿದೆ.

  ಹಾಸನ : ಸಂಸದ ಪ್ರಜ್ವಲ್‌ ರೇವಣ್ಣರಿಗೆ ಸಂಬಂಧಿಸಿದ್ದು ಎನ್ನಲಾದ ಪೆನ್‌ಡ್ರೈವ್‌ನಲ್ಲಿಯ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ವಿಚಾರವಾಗಿ ಕ್ಷೇತ್ರದ ಮಾಜಿ ಶಾಸಕ ಪ್ರೀತಂಗೌಡರ ಆಪ್ತ ಲಿಖಿತ್ ಹಾಗೂ ಚೇತನ್ ಇಬ್ಬರನ್ನು ಎಸ್‌ಐಟಿ ತಂಡವು ವಶಕ್ಕೆ ಪಡೆದು ಭಾನುವಾರ ವಿಚಾರಣೆಗೆ ಒಳಪಡಿಸಿದೆ.

ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಅಶ್ಲೀಲ ವೀಡಿಯೋಗಳ ವೈರಲ್ ಪ್ರಕರಣದ ಭೇದಿಸಲು ತನಿಖೆಯ ಬೆನ್ನಟ್ಟಿರುವ ಎಸ್‌ಐಟಿ ತಂಡ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ನಗರದ ಎನ್.ಆರ್.ವೃತ್ತದ ಬಳಿ ಇರುವ ನಗರ ಪೊಲೀಸ್ ಠಾಣೆಯಲ್ಲಿ ಬೀಡುಬಿಟ್ಟಿರುವ ಎಸ್‌ಐಟಿಯ ಒಟ್ಟು ೨೦ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ತನಿಖೆ ನಡೆಸಲಾಗುತ್ತಿದೆ. ಕಳೆದ ಏ.೨೩ರ ರಂದು ಹಾಸನ ಸೈಬರ್ ಕ್ರೈಮ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ತನಗೆ ಹಸ್ತಾಂತರ ಮಾಡಿಕೊಂಡು ಎಸ್‌ಐಟಿ ತನಿಖೆ ನಡೆಸುತ್ತಿದೆ.

ಪೆನ್‌ಡ್ರೈವ್ ವೈರಲ್ ವಿಚಾರದಲ್ಲಿ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರದಾನ ಕಾರ್ಯದರ್ಶಿ ಪ್ರೀತಂಗೌಡ ಆಪ್ತ ಲಿಖಿತ್ ಗೌಡ ಹಾಗೂ ಚೇತನ್‌ ಇಬ್ಬರನ್ನೂ ಶನಿವಾರ ಮಧ್ಯ ರಾತ್ರಿಯೇ ವಶಕ್ಕೆ ಪಡೆಯಲಾಗಿದೆ. ಈ ಮೂಲಕ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿ ನಾಯಕರಿಗೆ ಮುಖಭಂಗವಾಗಿದೆ ಎನ್ನಲಾಗಿದೆ. ಅಲ್ಲದೆ ಹಾಸನ ನಗರ ಪೊಲೀಸ್ ಠಾಣೆಯ ಸಮುಚ್ಚಯದಲ್ಲಿರುವ ಸೈಬರ್ ಕ್ರೈಂ ಠಾಣೆಯಲ್ಲೂ ಇಬ್ಬರ ವಿಚಾರಣೆ ನಡೆಸಲಾಗಿದೆ.

ಅಲ್ಲದೆ ತನಿಖೆ ಭಾಗವಾಗಿ ಆರೋಪಿ ಚೇತನ್‌ರನ್ನು ಅವರ ಸ್ವಗ್ರಾಮವಾದ ಹಾಸನ ತಾಲೂಕಿನ ಯಲಗುಂದಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಲಾಗಿದೆ. ಮತ್ತೊಂದೆಡೆ ಶ್ರವಣಬೆಳಗೊಳದಲ್ಲಿ ಲಿಖಿತ್ ಮನೆಯಲ್ಲೂ ಮಹಜರು ಚುರುಕುಗೊಂಡಿದೆ. ಇನ್‌ಸ್ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ಮಹಜರು ಕಾರ್ಯ ನಡೆಸಲಾಗಿದೆ.