ಕನ್ನಡಪ್ರಭ ವಾರ್ತೆ ಬೆಳಗಾವಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ನಡುವಿನ ಮಾತುಕತೆ ಶೇ.90ರಷ್ಟು ಯಶಸ್ವಿಯಾಗಿದ್ದು, ಉಳಿದ ಸಮಸ್ಯೆ ಇತ್ಯರ್ಥವಾಗುವ ವಿಶ್ವಾಸವಿದೆ. ಆದರೆ, ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಗೆ ₹1,000 ಪರಿಹಾರ ಘೋಷಿಸದಿದ್ದರೆ ನ.5ರಂದು ಬೆಳಗಾವಿಯಲ್ಲಿ ರಾಜ್ಯದ 31 ಜಿಲ್ಲೆಗಳ ರೈತರು ಸೇರಿದಂತೆ ಒಂದು ಕೋಟಿಗೂ ಅಧಿಕ ಜನರನ್ನು ಸೇರಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜೇರಿ ಎಚ್ಚರಿಕೆ ನೀಡಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ನಡುವಿನ ಮಾತುಕತೆ ಶೇ.90ರಷ್ಟು ಯಶಸ್ವಿಯಾಗಿದ್ದು, ಉಳಿದ ಸಮಸ್ಯೆ ಇತ್ಯರ್ಥವಾಗುವ ವಿಶ್ವಾಸವಿದೆ. ಆದರೆ, ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಗೆ ₹1,000 ಪರಿಹಾರ ಘೋಷಿಸದಿದ್ದರೆ ನ.5ರಂದು ಬೆಳಗಾವಿಯಲ್ಲಿ ರಾಜ್ಯದ 31 ಜಿಲ್ಲೆಗಳ ರೈತರು ಸೇರಿದಂತೆ ಒಂದು ಕೋಟಿಗೂ ಅಧಿಕ ಜನರನ್ನು ಸೇರಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜೇರಿ ಎಚ್ಚರಿಕೆ ನೀಡಿದರು.ಹುಕ್ಕೇರಿ ತಾಲೂಕಿನ ಬಡಕುಂದರಿ ಗ್ರಾಮದ ಹೊಳ್ಳೆಮ್ಮ ದೇವಿ ದೇವಸ್ಥಾನದ ಬಳಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಪಾದಯಾತ್ರೆ 4ನೇ ದಿನಕ್ಕೆ ಕಾಲಿಟ್ಟಿದ್ದು, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಶಶಿಕಾಂತ ಗುರೂಜಿ ನೇತೃತ್ವದಲ್ಲಿ ಲಕ್ಷಾಂತರ ರೈತರು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ರೈತರ ಸಂಕಷ್ಟ ಅರಿತು ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಕಾರ್ಖಾನೆ ಮಾಲೀಕರೊಂದಿಗೆ ನಡೆದ ಸಭೆ ಶೇ.90ರಷ್ಟು ಯಶಸ್ವಿಯಾಗಿದೆ ಎಂದರು.
ಕಾರ್ಖಾನೆ ಮಾಲೀಕರು ಪ್ರತಿ ಟನ್ ಕಬ್ಬಿಗೆ ₹3,500 ಮುಂಗಡ ನೀಡಲು ಒಪ್ಪಿದ್ದಾರೆ. ಆದರೆ, ಈ ಮೊತ್ತಕ್ಕೆ ರೈತರು ತೃಪ್ತರಾಗಿಲ್ಲ. ಸಕ್ಕರೆ ಬೆಲೆ ₹45ರಿಂದ ₹54, ₹55 ಹಾಗೂ ₹60ಕ್ಕೆ ಏರಿಕೆಯಾಗಿರುವುದರಿಂದ ಕಾರ್ಖಾನೆಗಳಿಗೆ ದೊರೆಯುವ ಲಾಭದಲ್ಲಿ ರೈತರಿಗೆ ಎರಡನೇ ಕಂತಿನಲ್ಲಿ ಎಷ್ಟು ಹಣ ನೀಡಲಾಗುತ್ತದೆ ಎಂಬುದರ ಕುರಿತು ಲಿಖಿತ ಒಪ್ಪಂದವಾಗಬೇಕು. ಈ ಕುರಿತು ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು, ಸಮಸ್ಯೆ ಸಂಪೂರ್ಣ ಇತ್ಯರ್ಥವಾಗುವ ವಿಶ್ವಾಸವಿದೆ ಎಂದರು.ಕಬ್ಬು ಬೆಳೆ ಒಣಗುತ್ತಿದ್ದರೂ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಅಡಿ ರೈತರಿಗೆ ಪರಿಹಾರ ನೀಡದಿರುವ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೂಜೇರಿ, ಅಬಕಾರಿ ಇಲಾಖೆಯಿಂದಲೇ ಸರ್ಕಾರಕ್ಕೆ ₹56 ಸಾವಿರ ಕೋಟಿ ಆದಾಯ ಬರುತ್ತಿದೆ. ಇದರಲ್ಲಿ ₹5 ಸಾವಿರ ಕೋಟಿ ಮೀಸಲಿಟ್ಟು ಕಬ್ಬು ಬೆಳೆಗಾರರಿಗೆ ಪ್ರತಿ ಟನ್ಗೆ ₹1,000 ಪರಿಹಾರ ನೀಡಬೇಕು. ಮುಖ್ಯಮಂತ್ರಿಗಳು ತಕ್ಷಣ ಪರಿಹಾರ ಘೋಷಿಸಬೇಕು. ಮಹಿಳೆಯರಿಗೆ ವರ್ಷಕ್ಕೆ ₹30 ಸಾವಿರ ಕೋಟಿ ನೀಡುವ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸದಿರುವುದು ದುರದೃಷ್ಟಕರ ಎಂದು ಆಕ್ರೋಶ ವ್ಯಕ್ತಪಡಿಸಿದರು.------------
ಇಂದು ಬೆಳಗಾವಿಯಲ್ಲಿ ರೈತರ ಶಕ್ತಿ ಪ್ರದರ್ಶನ
ನ.5ರಂದು ಮಧ್ಯಾಹ್ನ 12ರಿಂದ 1 ಗಂಟೆಯೊಳಗೆ ಬೆಳಗಾವಿಯ ಚೆನ್ನಮ್ಮ ವೃತ್ತ ಮತ್ತು ಸಿಪಿಎಡ್ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು. ರಾಜ್ಯದ 31 ಜಿಲ್ಲೆಗಳಿಂದ ರೈತರು, ಯುವಕರು, ವಕೀಲರು, ಕನ್ನಡಪರ ಹಾಗೂ ದಲಿತಪರ ಸಂಘಟನೆಗಳ ಕಾರ್ಯಕರ್ತರು, ಮಾಜಿ ಸೈನಿಕರು ಸೇರಿದಂತೆ ಒಂದು ಕೋಟಿಗೂ ಅಧಿಕ ಜನರು ಪಾಲ್ಗೊಳ್ಳಲಿದ್ದಾರೆ. ಸರ್ಕಾರ ₹1,000 ಪರಿಹಾರ ಘೋಷಿಸಬೇಕು. ಇಲ್ಲವಾದರೆ ನಮ್ಮೆಲ್ಲರನ್ನೂ ಹಿಂಡಲಗಾ ಜೈಲಿಗೆ ಕಳುಹಿಸಲಿ. ರೈತರ ಹೋರಾಟವನ್ನು ನಿರ್ಲಕ್ಷಿಸಿದರೆ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದರು.ಸಕ್ಕರೆ ಕಾರ್ಖಾನೆಗಳ ಸಮಸ್ಯೆ ಶೀಘ್ರವೇ ಬಗೆಹರಿಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಹೀಗಾಗಿ ನ.6ರಿಂದಲೇ ಕಾರ್ಖಾನೆಗಳು ಕಾರ್ಯಾರಂಭ ಮಾಡಲಿವೆ. ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವ ರೈತರು ಆತಂಕಪಡುವ ಅಗತ್ಯವಿಲ್ಲ. ಎಲ್ಲರೂ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಚುನ್ನಪ್ಪ ಪೂಜೇರಿ ಮನವಿ ಮಾಡಿದರು.
