ರೇವಣ್ಣ ಮನೇಲಿ ಎಸ್‌ಐಟಿ ಸ್ಥಳ ಮಹಜರು

| Published : May 05 2024, 02:06 AM IST / Updated: May 05 2024, 08:35 AM IST

ಸಾರಾಂಶ

ಸಂಸದ ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಪಟ್ಟಣದಲ್ಲಿ ಶಾಸಕ ಎಚ್.ಡಿ.ರೇವಣ್ಣನವರ ಮನೆಗೆ ಎಸ್‌ಐಟಿ ಅಧಿಕಾರಿಗಳು ಸಂತ್ರಸ್ತ ಮಹಿಳೆ ಹಾಗೂ ಆಕೆಯ ಮಗಳನ್ನು ಕರೆತಂದು ಭವಾನಿ ರೇವಣ್ಣನವರ ಉಪಸ್ಥಿತಿಯಲ್ಲಿ ಸ್ಥಳ ಮಹಜರು ನಡೆಸಿದರು.

  ಹೊಳೆನರಸೀಪುರ :  ಸಂಸದ ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಪಟ್ಟಣದಲ್ಲಿ ಶಾಸಕ ಎಚ್.ಡಿ.ರೇವಣ್ಣನವರ ಮನೆಗೆ ಎಸ್‌ಐಟಿ ಅಧಿಕಾರಿಗಳು ಸಂತ್ರಸ್ತ ಮಹಿಳೆ ಹಾಗೂ ಆಕೆಯ ಮಗಳನ್ನು ಕರೆತಂದು ಭವಾನಿ ರೇವಣ್ಣನವರ ಉಪಸ್ಥಿತಿಯಲ್ಲಿ ಸ್ಥಳ ಮಹಜರು ನಡೆಸಿದರು.

ರೇವಣ್ಣ ಹಾಗೂ ಪ್ರಜ್ವಲ್ ಅವರ ವಿರುದ್ಧ ಸಂತ್ರಸ್ತ ಮಹಿಳೆಯೊಬ್ಬರು ಏ.೨೮ರಂದು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ (ತಮ್ಮ ಪುತ್ರಿಗೂ ಕಿರುಕುಳ ನೀಡಿದ್ದ ಆರೋಪ ಮಾಡಿದ್ದರು) ದಾಖಲಿಸಿದ್ದರು. ಅದರಂತೆ ಶನಿವಾರ ಮಧ್ಯಾಹ್ನ ಎಸ್‌ಐಟಿ ಅಧಿಕಾರಿಗಳು ಸಂತ್ರಸ್ತ ಮಹಿಳೆಯ ದೂರಿನಲ್ಲಿ ಉಲ್ಲೇಖಿಸಿರುವ ಸ್ಥಳ ಪರಿಶೀಲನೆ ಜತೆಗೆ ಸ್ಥಳ ಮಹಜರು ನಡೆಸುವ ಸಲುವಾಗಿ ರೇವಣ್ಣ ಅವರ ಮನೆ ಆಗಮಿಸಿದರು. ಮನೆಯ ಪ್ರವೇಶ ದ್ವಾರದಲ್ಲೇ ಮಹಿಳೆಯಿಂದ ಹೇಳಿಕೆ ಪಡೆದ ನಂತರ ಮನೆಯೊಳಗೂ ಪರಿಶೀಲನೆ ನಡೆಸಿದರು, ಸಂತ್ರಸ್ತ ಮಹಿಳೆಯ ಹೇಳಿಕೆಯನ್ನು ಎಸ್‌ಐಟಿ ಅಧಿಕಾರಿಯೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದರು. ಸಂತ್ರಸ್ತ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ ಸ್ಥಳಗಳಲ್ಲೂ ಮಹಜರು ನಡೆಸಿದರು ಎಂದು ತಿಳಿದುಬಂದಿದೆ.

ಡಿವೈಎಸ್ಪಿ ಸತ್ಯ ನಾರಾಯಣ್ ಸಿಂಗ್, ಸುಮಾರಾಣಿ ನೇತೃತ್ವದಲ್ಲಿ ಮೂರು ವಾಹನಗಳಲ್ಲಿ ಎಸ್‌ಐಟಿ ಅಧಿಕಾರಿಗಳು ಆಗಮಿಸಿದ್ದು, ಅವರ ಜೊತೆ ಪಟ್ಟಣದ ಇಬ್ಬರು ಮಹಿಳಾ ಪೊಲೀಸರೂ ಇದ್ದರು. ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿದರು.

ಇದೇ ವೇಳೆ ಹರದನಹಳ್ಳಿ ದೇವೇಶ್ವರ ದೇವಾಲಯದ ಅರ್ಚಕರು ಭವಾನಿ ರೇವಣ್ಣ ಅವರಿಗೆ ಪ್ರಸಾದ ನೀಡಲು ಆಗಮಿಸಿದ್ದರು, ಆಗ ಅರ್ಚಕರನ್ನು ತಡೆದ ಪೊಲೀಸರು, ಬ್ಯಾಗ್ ಪರಿಶೀಲನೆ ನಡೆಸಿದ ನಂತರ ಬಿಟ್ಟರು.

ಡಿವೈಎಸ್ಪಿ ಅಶೋಕ್, ವೃತ್ತ ನಿರೀಕ್ಷಕ ಸುರೇಶ್ ಕುಮಾರ್, ನಗರ ಪೊಲೀಸ್ ಠಾಣೆ ಪಿಎಸ್ಸೈ ಅಜಯ್ ಕುಮಾರ್ ಹಾಗೂ ಹಳ್ಳಿಮೈಸೂರು ಪಿಎಸ್ಸೈ ಸಲ್ಮಾನ್‌ಖಾನ್ ತಂಬುಳಿ ಇದ್ದರು. ಮೀಸಲು ಪೊಲೀಸ್ ತುಕುಡಿಯವರು ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಿದ್ದರು.