ಸಾರಾಂಶ
ಹೈಕೋರ್ಟ್ ನ್ಯಾಯಾಧೀಶರು ಮತ್ತು ಕಲಬುರ್ಗಿ ಜಿಲ್ಲೆ ಆಡಳಿತಾತ್ಮಕ ನ್ಯಾಯಾಧೀಶ ಆಗಿರುವ ಕೆ. ನಟರಾಜನ್ ಅವರು ಇಂದು ಆಳಂದ ಪಟ್ಟಣಕ್ಕೆ ಭೇಟಿ ನೀಡಿ ಕೋರ್ಟ್ ಕಟ್ಟಡದ ದುರಸ್ತಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಆಳಂದ
ಹೈಕೋರ್ಟ್ ನ್ಯಾಯಾಧೀಶರು ಮತ್ತು ಕಲಬುರ್ಗಿ ಜಿಲ್ಲೆ ಆಡಳಿತಾತ್ಮಕ ನ್ಯಾಯಾಧೀಶ ಆಗಿರುವ ಕೆ. ನಟರಾಜನ್ ಅವರು ಇಂದು ಆಳಂದ ಪಟ್ಟಣಕ್ಕೆ ಭೇಟಿ ನೀಡಿ ಕೋರ್ಟ್ ಕಟ್ಟಡದ ದುರಸ್ತಿ ಕಾಮಗಾರಿಗಳನ್ನು ಪರಿಶೀಲಿಸಿದರು. ಅವರು ದುರಸ್ತಿ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಿ, ಕೋರ್ಟ್ ಕಲಾಪಗಳಿಗೆ ಅನುಕೂಲ ಮಾಡಿಕೊಡಲು ಅಧಿಕಾರಿಗಳಿಗೆ ಸೂಚಿಸಿದರು.ಈ ವೇಳೆ, ನ್ಯಾಯಾಧೀಶರು ಕಟ್ಟಡದ ಸುವ್ಯವಸ್ಥೆಯನ್ನು ಪರಿಶೀಲಿಸಿ, ಆವರಣ ಮತ್ತು ಮುಂಭಾಗದಲ್ಲಿ ಮಳೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಕೈಗೆತ್ತಿಕೊಂಡ ದುರಸ್ಥಿ ಕಾಮಗಾರಿಗಳ ಪರಿಶೀಲಿಸಿ ಕಾಮಗಾರಿಯಲ್ಲಿನ ಲೋಷದೋಷಗಳನ್ನು ಸರಿಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಹೊಸ ಕೋರ್ಟ್ ಕಟ್ಟಡ ನಿರ್ಮಾಣಕ್ಕಾಗಿ ತಾಲೂಕು ಆಡಳಿತಸೌಧ ಬಳಿಯ ನಿವೇಶನಕ್ಕೆ ಭೇಟಿ ನೀಡಿ ಸ್ಥಳವನ್ನು ವೀಕ್ಷಿಸಿದ ನ್ಯಾಯಾಧೀಶರು ತಹಸೀಲ್ದಾರರೊಂದಿಗೆ ಚರ್ಚಿಸಿ, ಹೊಸ ನ್ಯಾಯಾಲಯದ ಕಟ್ಟಡ ನಿರ್ಮಾಣಕ್ಕಾಗಿ ಮಾಹಿತಿ ಕಲೆಹಾಕಿದರು.ಜಿಲ್ಲಾ ಕೋರ್ಟ್ ನ್ಯಾಯಾಧೀಶೆ ನಾಗಶ್ರೀ, ಸ್ಥಳೀಯ ಹಿರಿಯ ಶ್ರೇಣಿ ಕೋರ್ಟ್ ನ್ಯಾಯಾಧೀಶ ಎಸ್.ಎಂ. ಅರುಟಗಿ, ಸಿವಿಲ್ ನ್ಯಾಯಾಧೀಶ ಯಲ್ಲಪ್ಪ ಕಲ್ಲಾಪೂರ, ಹೆಚ್ಚುವರಿ ನ್ಯಾಯಾಧೀಶೆ ಸುಮನ್ ಚಿತ್ತರಗಿ, ತಹಸೀಲ್ದಾರ ಯಲ್ಲಪ್ಪ ಸುಬೇದಾರ, ಡಿವೈಎಸ್‌ಪಿ ಗೋಪಿ ಬಿ.ಆರ್. ಸಿಪಿಐ ಮಹಾದೇವ ಪಂಚಮುಖಿ, ನ್ಯಾಯವಾದಿ ಸಂಘದ ಅಧ್ಯಕ್ಷ ಕಮಲ್ ರಾಠೋಡ, ಮಾಜಿ ಅಧ್ಯಕ್ಷ ಬಾಬಾಸಾಬ ಪಾಟೀಲ, ಎಸ್.ಎ. ಪಾಟೀಲ, ಕಾರ್ಯದರ್ಶಿ ಬಿ.ಟಿ. ಸಿಂಧೆ ಇದ್ದರು.