ಟ್ರೋಲ್‌ ಮಾಡಿ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದವರ ಆರು ಯುವಕರ ಬಂಧನ

| Published : Aug 28 2024, 12:53 AM IST

ಟ್ರೋಲ್‌ ಮಾಡಿ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದವರ ಆರು ಯುವಕರ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಫೇಸ್‌ಬುಕ್‌, ಇನ್‌ಸ್ಟಾಗ್ರಾಂಗಳಲ್ಲಿ ಅಪ್‌ಲೋಡ್‌ ಮಾಡಿದ ಫೋಟೋ, ವೀಡಿಯೋ ಬಳಸಿಕೊಂಡು ಅಶ್ಲೀಲವಾಗಿ ಎಡಿಟ್ ಮಾಡಿ, ಅದಕ್ಕೆ ಅಶ್ಲೀಲ ಸಂಭಾಷಣೆ ಅಳವಡಿಸಿ ಟ್ರೋಲ್ ಫೇಜ್‌ಗೆ ಹಾಕುತ್ತಿದ್ದ ಯುವಕರ ತಂಡ.

ಧಾರವಾಡ:

ಫೇಸ್‌ಬುಕ್‌, ಇನ್‌ಸ್ಟಾಗ್ರಾಂಗಳಲ್ಲಿ ಅಪ್‌ಲೋಡ್‌ ಮಾಡಿದ ಫೋಟೋ, ವೀಡಿಯೋ ಬಳಸಿಕೊಂಡು ಅಶ್ಲೀಲವಾಗಿ ಎಡಿಟ್ ಮಾಡಿ, ಅದಕ್ಕೆ ಅಶ್ಲೀಲ ಸಂಭಾಷಣೆ ಅಳವಡಿಸಿ ಟ್ರೋಲ್ ಫೇಜ್‌ಗೆ ಹಾಕುತ್ತಿದ್ದ ಯುವಕರ ತಂಡವನ್ನು ಪೊಲೀಸರು ಧಾರವಾಡದಲ್ಲಿ ಬಂಧಿಸಿದ್ದಾರೆ.

ಸಚಿನ ಕಡಕಬಾವಿ, ಆಕಾಶ ಮೇಟಿ, ಪ್ರಕಾಶ ನವಲೂರು, ಮೌನೇಶ ಬಡಿಗೇರ, ಆನಂದ ಸೇಂಡಗೆ, ಸುನಿಲ್ ಪರ್ವತಿಕರ ಬಂಧಿತ ಆರೋಪಿಗಳು.

ಆಗಿದ್ದೇನು?

ಮೂವರು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಕಾಲೇಜು ಕಾರ್ಯಕ್ರಮದಲ್ಲಿ ತೆಗೆಯಿಸಿಕೊಂಡಿದ್ದ ಫೋಟೋ ಬಳಸಿದ ಬಂಧಿತರ ತಂಡ ಅದನ್ನು ಕೆಟ್ಟದಾಗಿ ಟ್ರೋಲ್ ಮಾಡಿದೆ. ಅದನ್ನು ತೆಗೆಯುವಂತೆ ಕೇಳಿದಾಗ ಹಣದ ಬೇಡಿಕೆ ಇಟ್ಟಿದ್ದಾರೆ. ಇದರಿಂದ ರೋಸಿ ಹೋದ ವಿದ್ಯಾರ್ಥಿನಿಯೊಬ್ಬಳು ಧಾರವಾಡ ಉಪನಗರ ಠಾಣೆಗೆ ದೂರು ನೀಡಿದಾಗ ನಡೆದ ಘಟನೆ ಬಯಲಾಗಿದೆ.

ದೂರು ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಉಪನಗರ ಠಾಣೆ ಪೊಲೀಸರು ಈ ಕೃತ್ಯ ಮಾಡಿರುವ ಆರೋಪದ ಮೇಲೆ ಯುವಕರನ್ನು ಬಂಧಿಸಿದ್ದಾರೆ. ಇದರಲ್ಲಿ ನಾಲ್ವರು ಸ್ಪರ್ಧಾತ್ಮಕ ಪರೀಕ್ಷೆಗೆ ಓದಲು ಬೇರೆ ಬೇರೆ ಜಿಲ್ಲೆಯಿಂದ ಧಾರವಾಡಕ್ಕೆ ಬಂದವರು. ಇಬ್ಬರು ನಗರದ ಕರ್ನಾಟಕ ಕಾಲೇಜಿನಲ್ಲಿ ಬಿಎ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು. ಸದ್ಯ ಇವರ ವಿರುದ್ಧ ಪ್ರಕರಣ ದಾಖಲಾಗಿದೆ. ಇನ್ನೂ ಅನೇಕರಿಗೆ ಇದೇ ರೀತಿ ಬ್ಲ್ಯಾಕ್ ಮೇಲ್ ಮಾಡಿರುವ ಮಾಹಿತಿ ಲಭ್ಯವಾಗಿದ್ದು, ತನಿಖೆ ನಡೆಯುತ್ತಿದೆ.

ಈಗಾಗಲೇ ಹು-ಧಾ ಅವಳಿ ನಗರದಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಹೋರಾಟ ನಡೆಸಿರುವ ಪೊಲೀಸರು ಅನೇಕರ ಮೇಲೆ ಕ್ರಮಕೈಗೊಂಡಿದ್ದಾರೆ. ಅದೇ ರೀತಿ ಕೆಲ ದಿನಗಳಿಂದ ಅವಳಿ ನಗರದಲ್ಲಿ ಮೀಟರ್‌ ಬಡ್ಡಿ ದಂಧೆ ಸಹ ಜೋರಾಗಿದ್ದು ಪ್ರಕರಣಗಳು ದಾಖಲಾಗುತ್ತಿದ್ದಂತೆ ಪೊಲೀಸರು ಎಚ್ಚರಗೊಂಡಿದ್ದಾರೆ. ಇದೀಗ ಟ್ರೋಲ್ ಮಾಡುವ ಇಂತಹ ತಂಡಗಳಿಗೂ ಬಿಸಿ ಮುಟ್ಟಿಸುವ ಕಾರ್ಯವೂ ನಡೆಯಬೇಕಿದೆ ಎಂದು ಅವಳಿ ನಗರ ಜನರು ಆಗ್ರಹಿಸುತ್ತಿದ್ದಾರೆ.