ಸಮುದಾಯ ಮತ್ತು ಕಾರ್ಪೊರೇಟರ್‌ ಸಾಮಾಜಿಕ ಹೊಣೆಗಾರಿಕೆಯಡಿ(ಸಿಸಿಎಸ್‌ಆರ್‌) ಉಪಕ್ರಮದಡಿ ಸರ್ಕಾರಿ ಶಾಲಾ ಮಕ್ಕಳಿಗೆ 6ನೇ ತರಗತಿಯಿಂದಲೇ ಈಗಿನ ಕೈಗಾರಿಕೆಗಳ ಅಗತ್ಯತೆಗೆ ತಕ್ಕಂತೆ ಕೌಶಲ್ಯಾಧಾರಿತ ಶಿಕ್ಷಣ ಜಾರಿಗೊಳಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ.

ಲಿಂಗರಾಜು ಕೋರಾ

 ಬೆಂಗಳೂರು : ಸಮುದಾಯ ಮತ್ತು ಕಾರ್ಪೊರೇಟರ್‌ ಸಾಮಾಜಿಕ ಹೊಣೆಗಾರಿಕೆಯಡಿ(ಸಿಸಿಎಸ್‌ಆರ್‌) ಉಪಕ್ರಮದಡಿ ಸರ್ಕಾರಿ ಶಾಲಾ ಮಕ್ಕಳಿಗೆ 6ನೇ ತರಗತಿಯಿಂದಲೇ ಈಗಿನ ಕೈಗಾರಿಕೆಗಳ ಅಗತ್ಯತೆಗೆ ತಕ್ಕಂತೆ ಕೌಶಲ್ಯಾಧಾರಿತ ಶಿಕ್ಷಣ ಜಾರಿಗೊಳಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ.

ಸಾಂಪ್ರದಾಯಿಕ ಶಿಕ್ಷಣ ನೀಡುವುದರಿಂದ ಇಂದಿನ ದಿನಗಳಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಹಾಗಾಗಿ ಸರ್ಕಾರಿ ಶಾಲೆಗಳಲ್ಲೂ ಆಧುನಿಕ ಕಾಲಘಟ್ಟಕ್ಕೆ ಅನುಗುಣವಾಗಿ ಶಿಕ್ಷಣದಲ್ಲಿ ಮಾರ್ಪಾಡು ತರಲು ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ 6ರಿಂದ 12ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಪಠ್ಯಬೋಧನೆ ಜೊತೆಗೆ ನಿಯಮಿತ ಅವಧಿಯಲ್ಲಿ ಕೈಗಾರಿಕೆಗಳ ಅಗತ್ಯತೆಗೆ ತಕ್ಕಂತೆ ಕೌಶಲ್ಯಾಧಾರಿತ ಶಿಕ್ಷಣ, ತಾಂತ್ರಿಕ ಪ್ರಾವೀಣ್ಯತೆ ಜಾರಿಗೊಳಿಸಲು ಯೋಜಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಕೈಗಾರಿಕೆಗಳ ಸಹಭಾಗಿತ್ವದಲ್ಲೇ ಈ ಉಪಕ್ರಮ ಜಾರಿಗೆ ಉದ್ದೇಶೀಸಿದ್ದು, ಕ್ಷೇತ್ರ ಪರಿಣಿತರು, ತಜ್ಞರಿಂದ ತಿಂಗಳಲ್ಲಿ ಕೆಲ ದಿನಗಳ ಕಾಲ ಕೌಶಲ್ಯ ಶಿಕ್ಷಣ ನೀಡುವುದು. ಗ್ರಾಮೀಣ ಭಾಗದಲ್ಲಿ ಉದ್ಯೋಗ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಕೌಶಲ್ಯಗಳನ್ನು ಆಯಾ ಶಾಲಾ ಹಂತದಲ್ಲೇ ಉಚಿತವಾಗಿ ನೀಡುವ ದೂರದೃಷ್ಟಿ ಹೊಂದಲಾಗಿದೆ. ಅಲ್ಲದೆ, ಇದಕ್ಕೆ ಇಲಾಖೆ ಮತ್ತು ಕೈಗಾರಿಕೆಗಳಿಂದ ಜಂಟಿ ಪ್ರಮಾಣಪತ್ರಗಳನ್ನೂ ನೀಡಲು ಉದ್ದೇಶಿಸಲಾಗಿದೆ. 

10 ಮತ್ತು 12ನೇ ತರಗತಿಯ ವೇಳೆಗೆ ಪ್ರತಿಯೊಬ್ಬ ವಿದ್ಯಾರ್ಥಿಗೆ ಉದ್ಯೋಗಾವಕಾಶಗಳಿಗೆ ದಾರಿ

 ಇದರಿಂದ 10 ಮತ್ತು 12ನೇ ತರಗತಿಯ ವೇಳೆಗೆ ಪ್ರತಿಯೊಬ್ಬ ವಿದ್ಯಾರ್ಥಿಗೆ ಉದ್ಯೋಗಾವಕಾಶಗಳಿಗೆ ದಾರಿಯಾಗುತ್ತದೆ. ಅಲ್ಲದೆ, ಇದು ಉನ್ನತ ಶಿಕ್ಷಣಕ್ಕೆ ಸೂಕ್ತ ಮಾರ್ಗಗಳನ್ನೂ ಕಲ್ಪಿಸಕೊಡುತ್ತದೆ. ಒಟ್ಟಾರೆ ಶಾಲಾ ಶಿಕ್ಷಣ ಮುಗಿಯುವವೇಳೆಗೆ ವಿದ್ಯಾರ್ಥಿಯಲ್ಲಿ ಸ್ವಾವಲಂಭನೆಯ ಆತ್ಮಸ್ಥೈರ್ಯ ತುಂಬುವುದು ಇದರ ಇದ್ದೇಶವಾಗಿದೆ ಎನ್ನುವುದು ಅಧಿಕಾರಿಗಳ ಹೇಳಿಕೆ.ಕೆಪಿಎಸ್‌ಗಳ ಅಭಿವೃದ್ದಿಗೆ ಸಿಸಿಎಸ್‌ಆರ್‌ ಕೋಶ:

ಮಾಹಿತಿ ಪ್ರಕಾರ, ಈ ಕೌಶಲ್ಯ ತರಬೇತಿ ಶಿಕ್ಷಣವನ್ನು ಮೊದಲು ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ(ಕೆಪಿಎಸ್‌) ಆರಂಭಿಸಲಾಗುತ್ತದೆ. ನಂತರ ಹಂತ ಹಂತವಾಗಿ ಇತರೆ ಶಾಲೆಗಳಿಗೆ ವಿಸ್ತರಿಸುವ ಯೋಜನೆ ಇದೆ. ಯೋಜನೆಯನ್ನು ಪಾರದರ್ಶಕ, ಉತ್ತರದಾಯಿತ್ವದಿಂದ ಜಾರಿಗೆ ತರಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಸಿಸಿಎಸ್‌ಆರ್‌ ಕೋಶಗಳನ್ನು ರಚಿಸಲಾಗಿದೆ. ಆಯಾ ಜಿಲ್ಲಾ ವ್ಯಾಪ್ತಿಯ ಕೈಗಾರಿಕೆಗಳ ಮಾಲೀಕರು, ಉದ್ಯಮಿಗಳು, ಸ್ವಯಂ ಸೇವಾ ಸಂಸ್ಥೆಗಳು, ಸಂಘ ಸಂಸ್ಥೆಗಳು, ದಾನಿಗಳ ಸಭೆ ನಡೆಸಿ ಕೆಪಿಎಸ್‌ಗಳ ಅಭಿವೃದ್ಧಿಗೆ ಅಗತ್ಯ ಆರ್ಥಿಕ ಅಥವಾ ಶಿಕ್ಷಣಕ್ಕೆ ಬೇಕಾದ ಅಗತ್ಯ ಮೂಲಸೌಕರ್ಯಗಳನ್ನು ಪಡೆಯಲು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

ಯಾವ್ಯಾವ ತರಬೇತಿ ಸಿಗುತ್ತದೆ?: 

ಶಾಲಾ ಹಂತದಲ್ಲೇ ಕೌಶಲ್ಯಾಧಾರಿತ ಶಿಕ್ಷಣ ಪರಿಚಯಿಸುವುದು ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಮುಖ ಉದ್ದೇಶವಾಗಿದೆ. ರಾಜ್ಯದಲ್ಲಿ ಎನ್‌ಇಪಿ ಅಳವಡಿಕೆ ಇಲ್ಲ ಎಂದು ಹೇಳುತ್ತಿದ್ದರೂ ಸರ್ಕಾರ ಪರೋಕ್ಷವಾಗಿ ಅನುಷ್ಠಾನಗೊಳಿಸುತ್ತಿದೆ. ವಿದ್ಯಾರ್ಥಿಗಳಿಗೆ ಕೇವಲ ಪುಸ್ತಕದ ಜ್ಞಾನ ನೀಡದೆ, ಭವಿಷ್ಯದ ಉದ್ಯೋಗ ಮತ್ತು ಜೀವನಕ್ಕೆ ಅಗತ್ಯವಾದ ಪ್ರಾಯೋಗಿಕ ಕೌಶಲ್ಯಗಳನ್ನು ಕಲಿಸುವ ಗುರಿ ಇದಾಗಿದೆ. ಕೋಡಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡಿಜಿಟಲ್ ಸಾಕ್ಷರತೆ, ಕೃಷಿ, ತೋಟಗಾರಿಕೆ, ಮರಗೆಲಸ, ಕುಂಬಾರಿಕೆ ಮತ್ತು ನೇಯ್ಗೆ, ಆಧುನಿಕ ಕಲೆ, ಗ್ರಾಫಿಕ್ ಡಿಸೈನ್, ಫೋಟೋಗ್ರಫಿ ಸೇರಿದಂತೆ ಇನ್ನಿತರೆ ಕೌಶಲ್ಯ ಶಿಕ್ಷಣ ನೀಡಲಾಗುತ್ತದೆ. ಇದರಿಂದ ಚಿಕ್ಕ ವಯಸ್ಸಿನಲ್ಲೇ ಸ್ವಂತವಾಗಿ ಕೆಲಸ ಮಾಡುವ ಆತ್ಮವಿಶ್ವಾಸ ಮೂಡುತ್ತದೆ. ವಿದ್ಯಾರ್ಥಿಗಳಲ್ಲಿ ಹೊಸ ಆಲೋಚನೆ ಮತ್ತು ಸೃಜನಶೀಲತೆ ಹೆಚ್ಚುತ್ತದೆ. ಭವಿಷ್ಯದಲ್ಲಿ ಸ್ವಯಂ ಉದ್ಯೋಗ ಅಥವಾ ಕೆಲಸ ಹುಡುಕಲು ಸುಲಭವಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.