ಪ್ರತಿಭಾವಂತರಿಗೆ ಕೇವಲ ಪದವಿ ಇದ್ದರೆ ಸಾಲದು, ಜೊತೆಗೆ ಒಂದು ಕಲೆ, ಒಂದು ಕೌಶಲ್ಯ ಇರಬೇಕು. ಆ ನಿಟ್ಟಿನಲ್ಲಿ ಟ್ರಸ್ಟ್ ನವರು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡುತ್ತಿರುವುದು ನಿಜಕ್ಕೂ ಮಾದರಿ ಕಾರ್ಯ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವತಿ ಹಾಗೂ ಮಹಿಳೆಯರಿಗೆ ಕೌಶಲ್ಯಾಧಾರಿತ ತರಬೇತಿಗಳು ಬಹಳ ಮುಖ್ಯ ಎಂದು ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ತಿಳಿಸಿದರು.

ಪಟ್ಟಣದ ಜಯನಗರ ಬಡಾವಣೆಯ ಶ್ರೀಮಲ್ಲಿಕಾರ್ಜುನ್ ಚಾರಿಟಬಲ್ ಟ್ರಸ್ಟ್ ಕಚೇರಿಯಲ್ಲಿ ನೃತ್ಯಾಲಯ ಅಕಾಡೆಮಿ ಹಾಗೂ ಜ್ಞಾನ ಜ್ಯೋತಿ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಪ್ರತಿಭಾವಂತರಿಗೆ ಕೇವಲ ಪದವಿ ಇದ್ದರೆ ಸಾಲದು, ಜೊತೆಗೆ ಒಂದು ಕಲೆ, ಒಂದು ಕೌಶಲ್ಯ ಇರಬೇಕು. ಆ ನಿಟ್ಟಿನಲ್ಲಿ ಟ್ರಸ್ಟ್ ನವರು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡುತ್ತಿರುವುದು ನಿಜಕ್ಕೂ ಮಾದರಿ ಕಾರ್ಯ ಎಂದು ಶ್ಲಾಘಿಸಿದರು.

ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಸಿಕ್ಕರೆ ಅವರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಾರೆ. ಶ್ರೀ ಮಲ್ಲಿಕಾರ್ಜುನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಇಂತಹ ಯುವ ಪ್ರತಿಭೆಗಳಿಗೆ, ಸಮಾಜಮುಖಿ ಕಾರ್ಯಗಳಿಗೆ ನಮ್ಮ ಸಂಪೂರ್ಣ ಬೆಂಬಲ ಸದಾ ಇರುತ್ತದೆ. ತರಬೇತಿ ಪಡೆದ ಎಲ್ಲಾ ವಿದ್ಯಾರ್ಥಿಗಳು ಈ ಪ್ರಮಾಣ ಪತ್ರವನ್ನು ಕೇವಲ ಕಾಗದ ಎಂದು ಭಾವಿಸದೆ ನಿಮ್ಮ ಭವಿಷ್ಯದ ಮೊದಲ ಮೆಟ್ಟಿಲು ಎಂದು ತಿಳಿದು ಸಾಧನೆ ಮಾಡಬೇಕು ಎಂದರು.

ಜ್ಞಾನ ಜ್ಯೋತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ನಾಗರಾಜು ಮಾತನಾಡಿ, ನಿರುದ್ಯೋಗ ಸಮಸ್ಯೆ ನಿವಾರಣೆ ಮತ್ತು ಮಹಿಳಾ ಸಬಲೀಕರಣದ ಉದ್ದೇಶದಿಂದ ನೃತ್ಯಾಲಯ ಅಕಾಡೆಮಿ ವತಿಯಿಂದ ಇಂತಹ ಉಚಿತ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ ಎಂದರು.

ಮಹಿಳೆಯರು ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಲು ಮತ್ತು ಆರ್ಥಿಕ ಸ್ವಾವಲಂಬಿಗಳಾಗಲು ವೇದಿಕೆಯನ್ನು ಸೃಷ್ಟಿಸಲಾಗಿದೆ. ಎಲ್ಲಾ ವಿದ್ಯಾರ್ಥಿನಿಯರು ಕಲಿತ ವಿದ್ಯೆಯನ್ನು ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯಬೇಕು ಎಂದರು.

ಇದೇ ವೇಳೆ ತರಬೇತಿ ಪೂರ್ಣಗೊಳಿಸಿದ ಎಲ್ಲಾ ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಸುಜೇಂದ್ರ ಕುಮಾರ್, ಜ್ಞಾನ ಜ್ಯೋತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ನಾಗರಾಜು, ಸಂಚಾಲಕ ಶಿವರಾಮೇಗೌಡ, ನೃತ್ಯ ಶಿಕ್ಷಕಿ ಕಾವ್ಯ, ಲಕ್ಷ್ಮಿ ವೆಂಕಟೇಶ್ವರ ಕ್ಲಿನಿಕ್ ಡಾ.ಬದ್ರೀನಾಥ್, ರಂಗಭೂಮಿ ಕಲಾವಿದ ಶಿವು ಬಾಲಾಜಿ, ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್, ಪುರಸಭಾ ಮಾಜಿ ಸದಸ್ಯ ಕೆ.ಆರ್.ನೀಲಕಂಠ, ಗ್ರಾಪಂ ಮಾಜಿ ಸದಸ್ಯ ಅಗ್ರಹಾರಬಾಚಹಳ್ಳಿ ಶ್ರೀನಿವಾಸ್, ಆರ್.ಟಿ.ಓ ಮಲ್ಲಿಕಾರ್ಜುನ್ ಆಪ್ತ ಸಹಾಯಕ ಗಂಜೀಗೆರೆ ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.