ಕೌಶಲ್ಯ ಅಭಿವೃದ್ಧಿಗೆ ತರಬೇತಿಯ ಅಗತ್ಯತೆ ಇದೆ

| Published : Jan 01 2024, 01:15 AM IST

ಕೌಶಲ್ಯ ಅಭಿವೃದ್ಧಿಗೆ ತರಬೇತಿಯ ಅಗತ್ಯತೆ ಇದೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಜಿಲ್ಲಾ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಮತ್ತು ರಕ್ಷಣೆ ಕುರಿತು ಏರ್ಪಡಿಸಿದ್ದ ಕಾರ್ಯಗಾರ ಉದ್ಘಾಟಿಸಿಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೂ ಹೇಳಿದರು.

ಪದ್ಮಿನಿ ಸಾಹೂ ಅಭಿಮತ । ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಹಾಗೂ ರಕ್ಷಣೆ ಕುರಿತು ಕಾರ್ಯಗಾರ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸಿಬ್ಬಂದಿಗೆ ಕೌಶಲ್ಯ ಅಭಿವೃದ್ಧಿಪಡಿಸಿಕೊಳ್ಳಲು ತರಬೇತಿಗಳ ಅಗತ್ಯತೆಯಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೂ ಹೇಳಿದರು.

ನಗರದ ಜಿಲ್ಲಾ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಮತ್ತು ರಕ್ಷಣೆ ಕುರಿತು ಏರ್ಪಡಿಸಿದ್ದ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಮಹಿಳೆಯರು ಮತ್ತು ಮಕ್ಕಳ ಸ್ನೇಹಿ ವಾತಾವರಣವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಬೇಕಿದೆ. ಜೊತೆಗೆ ಇಲಾಖೆಗಳ ಒಗ್ಗೂಡುವಿಕೆ ಅಗತ್ಯವಿದೆ. ಸಂಸ್ಥೆ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಮಹಿಳೆಯರು ಮತ್ತು ಮಕ್ಕಳ ಪ್ರಸ್ತುತ ಸ್ಥಿತಿಗಳ ಬಗ್ಗೆ ತಿಳಿಸಬೇಕು ಎಂದರು.

ತಾವು ಆಯೋಗದ ಜೊತೆ ಈಗಾಗಲೇ ಮಾತನಾಡಿದ್ದು, ಮಕ್ಕಳ ಹಕ್ಕುಗಳಿಗೆ ಪೂರಕವಾಗಿ ಕೆಲಸ ನಿರ್ವಹಿಸುವಲ್ಲಿ ಯೋಜನೆಯನ್ನು ಇಲಾಖೆ ರೂಪಿಸಿದೆ ಎಂದು ತಿಳಿಸಿದರು.

ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ನಿರ್ದೇಶಕಿ ಸರಸ್ವತಿ ಮಾತನಾಡಿ, ಸಂಸ್ಥೆಯ ಗುರಿ, ಉದ್ದೇಶ ಹಾಗೂ ಈ ಕಾರ್ಯಗಾರದ ಉದ್ದೇಶದ ಬಗ್ಗೆ ವಿವರಿಸುತ್ತಾ ,ಸಂಸ್ಥೆಯು ಕಳೆದ ಐದು ವರ್ಷಗಳಿಂದ ಗುಂಡ್ಲುಪೇಟೆ ತಾಲೂಕಿನ ೨೫ ಹಳ್ಳಿಗಳಲ್ಲಿ ಕೆಲಸವನ್ನು ನಿರ್ವಹಿಸುತ್ತಿದೆ.

ಗ್ರಾಮೀಣ ಪ್ರದೇಶದಲ್ಲಿ ಜೀವನೋಪಾಯಕ್ಕೆ ಜನರು ವಲಸೆ, ಬಾಲ್ಯ ವಿವಾಹ, ಗ್ರಾಮಮಟ್ಟದಲ್ಲಿ ವಿಚ್ಛೇದನ , ಹೀಗೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರ ಪರಿಣಾಮ ಮಹಿಳೆಯರು ಮತ್ತು ಮಕ್ಕಳು ಸಾಕಷ್ಟು ಸಮಸ್ಯೆ, ದೌರ್ಜನ್ಯ ಎದುರಿಸುತ್ತಿದ್ದಾರೆ. ಇವರಿಗೆ ಉತ್ತಮ ಜೀವನ ರೂಪಿಸುವ ನಿಟ್ಟಿನಲ್ಲಿ ಹಲವಾರು ಇಲಾಖೆಗಳು ಕೆಲಸ ಮಾಡುತ್ತಿವೆ. ಆದರೆ ಎಲ್ಲಾ ಇಲಾಖೆಗಳು ಒಟ್ಟಾಗಿ ಕೆಲಸ ನಿರ್ವಹಿಸುವ ಅಗತ್ಯತೆ ಬಹಳ ಅವಶ್ಯಕವಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ವೆಂಕಟೇಶ್. ಕೆ. ಮಾತನಾಡಿ, ಚಾಮರಾಜನಗರದ ಉಸ್ತುವಾರಿ ವಹಿಸಿದ ಮೇಲೆ ಸಾಕಷ್ಟು ಅಂಗನವಾಡಿ, ಶಾಲೆ, ಪಂಚಾಯ್ತಿಗಳನ್ನು ಭೇಟಿ ಮಾಡಿದ್ದು, ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳನ್ನು ಗುರುತಿಸಲು ಸಾಧ್ಯವಾಗಿದೆ. ಪೊಲೀಸ್ ಇಲಾಖೆ ಮಕ್ಕಳು ಮತ್ತು ಮಹಿಳೆಯರ ಜೊತೆ ಸೂಕ್ಷ್ಮವಾಗಿ ವರ್ತಿಸುವ ಅಗತ್ಯವಿದ್ದು, ಅವರ ಸಮಸ್ಯೆಗಳಿಗೆ ಪರಿಹಾರ ನೀಡಬೇಕಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ಬಾಲ್ಯ ವಿವಾಹ, ಬಾಲಕಾರ್ಮಿಕತೆ, ಲವ್ ಅಂಡ್ ಅಫೆಕ್ಷನ್, ವಲಸೆ ಮುಂತಾದ ಸಮಸ್ಯೆಗಳನ್ನು ಮಕ್ಕಳು ಎದುರಿಸುತ್ತಿದ್ದಾರೆ. ಮಹಿಳೆಯರು ಮತ್ತು ಮಕ್ಕಳಿಗೋಸ್ಕರ ೧೦೦% ಪೊಲೀಸ್ ಇಲಾಖೆ ಮತ್ತು ಮಕ್ಕಳ ರಕ್ಷಣಾ ಆಯೋಗ ಕೆಲಸವನ್ನು ನಿರ್ವಹಿಸುತ್ತಿದ್ದು , ಇಲಾಖೆಯೂ ಕೂಡ ೬೫% ಮಕ್ಕಳಿಗೋಸ್ಕರ ಕೆಲಸ ಮಾಡುತ್ತಿದೆ. ಜೊತೆಗೆ ಅವರಿಗೆ ಪುನರ್ವಸತಿ ಕೇಂದ್ರಗಳನ್ನು ಒದಗಿಸುವ ಮೂಲಕ ಜೀವನವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಇಲಾಖೆಯು ಮಹಿಳೆ ಮತ್ತು ಮಕ್ಕಳ ಜೊತೆ ನಿಲ್ಲುತ್ತಿದೆ ಎಂದರು.

ಕೊಪ್ಪಳ ಯುನಿಸೆಫ್ ನ ರಾಘವೇಂದ್ರ ಭಟ್ ಮಕ್ಕಳ ಹಕ್ಕುಗಳು ಮತ್ತು ಬಾಲ್ಯ ವಿವಾಹದ ಕುರಿತು ಮಾಹಿತಿ ನೀಡಿದರು. ಪೊಲೀಸ್ ಇಲಾಖೆ ತರಬೇತುದಾರ ರೋಹಿತ್ ಪೋಕ್ಸೂ ಕುರಿತು ಮಾಹಿತಿ ನೀಡಿದರು.

ಜಿಲ್ಲೆಯ ೧೮ ಪೊಲೀಸ್ ಠಾಣೆಗಳಿಂದ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ಘಟಕ ಸಿಬ್ಬಂದಿ ಭಾಗವಹಿಸಿದ್ದರು.

------

31ಸಿಎಚ್‌ಎನ್12

ಚಾಮರಾಜನಗರದ ಜಿಲ್ಲಾ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಮತ್ತು ರಕ್ಷಣೆ ಕುರಿತು ಏರ್ಪಡಿಸಿದ್ದ ಕಾರ್ಯಗಾರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೂ ಉದ್ಘಾಟಿಸಿದರು.

--------