ಕನ್ನಡಪ್ರಭ ವಾರ್ತೆ ರಾಮನಗರ
ಸರ್ಕಾರಿ ಶಾಲೆಗಳಲ್ಲಿ ಇನ್ನು ಮುಂದೆ ಕನ್ನಡದ ಜೊತೆಗೆ ಇಂಗ್ಲಿಷ್ ಭಾಷಾ ಮಾಧ್ಯಮ, ಕಂಪ್ಯೂಟರ್ ಹಾಗೂ ಕೌಶಲ್ಯಯುತ ಶಿಕ್ಷಣವನ್ನು ಕಡ್ಡಾಯವಾಗಿ ಜಾರಿಗೊಳಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ. ರಶ್ಮಿ ಮಹೇಶ್ ತಿಳಿಸಿದರು.ತಾಲೂಕಿನ ಪಾದರಹಳ್ಳಿ ಗ್ರಾಮದಲ್ಲಿ ಟೊಯೋಟಾ ಸಂಸ್ಥೆಯ ಸಿಎಸ್‌ಆರ್ ಯೋಜನೆಯಡಿ ₹12 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಕರ್ನಾಟಕ ಪಬ್ಲಿಕ್ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ತರುವಾಯ ಸಭೆಯಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಕರ್ನಾಟಕ ಪಬ್ಲಿಕ್ ಶಾಲೆಗಳ ಪ್ರಾರಂಭದ ಉದ್ದೇಶವಾಗಿದೆ. ಈ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ನೂರರಷ್ಟು ಮಕ್ಕಳಿಗೆ 1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ. ಸ್ಪೋಕನ್ ಇಂಗ್ಲಿಷ್ , ಇಂಗ್ಲಿಷ್ ಭಾಷಾ ಮಾಧ್ಯಮ, 9ನೇ ತರಗತಿಯಿಂದ ಕೌಶಲ್ಯಯತ ಶಿಕ್ಷಣ ಸಹ ಕೊಡಲಾಗುವುದು ಎಂದರು.ಸರ್ಕಾರಿ ಶಾಲೆಗಳಲ್ಲಿ ಉತ್ತಮ ಮೆರಿಟ್ ಶಿಕ್ಷಕರುಗಳಿದ್ದು, ಸ್ಪರ್ಧಾ ಜಗತ್ತಿಗೆ ಅನುಗುಣವಾಗಿ ನಾವು ಸಹ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕಾಗಿದೆ. ಈ ವರ್ಷದಿಂದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಕನ್ನಡದ ಜೊತೆಗೆ ಇಂಗ್ಲಿಷ್ ಭಾಷೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದರು.
ಈಗ ಮೇಲ್ದರ್ಜೆಗೇರಿಸುತ್ತಿರುವ ಸರ್ಕಾರಿ ಶಾಲೆಗಳಿಗೆ ಪಾದರಹಳ್ಳಿ ಶಾಲೆಯ ಕಟ್ಟಡದ ಮಾದರಿಯ ನಕ್ಷೆಯನ್ನು ಅನುಸರಿಸಲಾಗುವುದು. ಇದರಿಂದ ಖಾಸಗಿ ಶಾಲೆಗಳಿಗಿಂತ ಉತ್ತಮವಾದ ಪರಿಸರದಲ್ಲಿ ಉಚಿತ ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಸಿಗುವಂತಾಗಲಿದೆ. ಈ ಬಗ್ಗೆ ಶಿಕ್ಷಕರಲ್ಲಿ ಸಂಶಯ ಬೇಡ, ಖಚಿತತೆ ಇರಲಿ, ಯಾವುದೇ ಸರ್ಕಾರಿ ಶಾಲೆಗಳನ್ನು ಸಹ ಮುಚ್ಚುವುದಿಲ್ಲ. ಮಕ್ಕಳಿಗೆ ಉಚಿತ ಗುಣಮಟ್ಟದ ಶಿಕ್ಷಣಕ್ಕೆ ಒಂದು ಒಳ್ಳೆಯ ಅವಕಾಶ ಮಾಡಿಕೊಡಲಾಗುತ್ತಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ರಶ್ಮಿ ತಿಳಿಸಿದರು.
ಈ ವರ್ಷ 7 ಶಾಲೆಗಳು ಪ್ರಾರಂಭ:
ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಮಾತನಾಡಿ, ನಮ್ಮಲ್ಲಿ ಶಿಕ್ಷಣ ಇದೆ. ಆದರೆ, ಗುಣಮಟ್ಟದ ಶಿಕ್ಷಣದ ವ್ಯವಸ್ಥೆ ಸದೃಢವಾಗಿ ಬೆಳೆಯಬೇಕಿದೆ. ಗುಣಮಟ್ಟದ ಕೊರತೆಯಿಂದ ಖಾಸಗಿ ಶಾಲೆಗಳು ತಲೆ ಎತ್ತಿದ್ದು, ಇದರಿಂದ ಮಧ್ಯಮ, ಬಡವರು, ರೈತರು ಹಾಗೂ ಕೂಲಿ ಕಾರ್ಮಿಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಸರ್ಕಾರ ಶಿಕ್ಷಣಕ್ಕೆ ಮೊದಲ ಆದ್ಯತೆ ಕೊಡುತ್ತಿದೆ. ಅದಕ್ಕೆ ಪೂರಕವಾಗಿ ಜಿಲ್ಲೆಯಲ್ಲಿ ಡಿ.ಕೆ.ಶಿವಕುಮಾರ್ ಮತ್ತು ನಾವು ಚಿಂತನೆ ನಡೆಸಿ ವಿವಿಧ ಕಂಪನಿಗಳ ಸಿಎಸ್‌ಆರ್ ಯೋಜನೆಯಡಿ 20 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲು ಸಿದ್ಧತೆ ಮಾಡಿದೆವು. ಈ ವರ್ಷದಿಂದ 7 ಶಾಲೆಗಳು ಪ್ರಾರಂಭವಾಗುತ್ತಿವೆ ಎಂದರು.ಕಡಿಮೆ ಸಂಖ್ಯೆ ಮಕ್ಕಳಿರುವ ಶಾಲೆಗಳನ್ನು ಒಗ್ಗೂಡಿಸಿ ಒಂದೆಡೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾರಂಭಿಸಿದರೆ ಗ್ರಾಮೀಣ ಭಾಗದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗುತ್ತದೆ. ಇದಕ್ಕೆ ಶಿಕ್ಷಕರು, ಎಸ್‌ಡಿಎಂಸಿ ಹಾಗೂ ಸ್ಥಳೀಯರ ಸಹಕಾರ ಅತೀ ಮುಖ್ಯವಾಗಲಿದೆ. ಇಲ್ಲಿಗೆ ಅಗತ್ಯವಿರುವ ಸೌಕರ್ಯಗಳನ್ನೆಲ್ಲವನ್ನೂ ಪೂರೈಸಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು.
ಪ್ರತ್ಯೇಕ ಸಮವಸ್ತ್ರ, ಬಸ್ಸಿನ ವ್ಯವಸ್ಥೆ:ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಮಾತನಾಡಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಅವರ ಪರಿಶ್ರಮದ ಫಲವಾಗಿ ಸುಸಜ್ಜಿತ ಕರ್ನಾಟಕ ಪಬ್ಲಿಕ್ ಶಾಲೆ ನಿರ್ಮಾಣವಾಗಿದೆ. ಉತ್ತಮ ವಾತಾವರಣದಲ್ಲಿ ನುರಿತ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ಸಿಗಲಿದೆ. ಈ ಶಾಲೆಯ ಮಕ್ಕಳು, ಶಿಕ್ಷಕರಿಗೆ ಪ್ರತ್ಯೇಕ ಸಮವಸ್ತ್ರ, ಬಸ್ಸಿನ ವ್ಯವಸ್ಥೆ, ಶಿಕ್ಷಕರನ್ನು ನಿಯೋಜನೆ ಮಾಡಲಾಗುವುದು. ಇದಕ್ಕೆ ಎಸ್‌ಡಿಎಂಸಿ ಪದಾಧಿಕಾರಿಗಳು, ಶಿಕ್ಷಕರು, ಪೋಷಕರು ಮಕ್ಕಳ ಭವಿಷ್ಯ ರೂಪಿಸುವ ಕಡೆ ಚಿಂತಿಸಿ, ಸಹಕಾರ ನೀಡಬೇಕು ಎಂದು ತಿಳಿಸಿದರು.
ಈ ವೇಳೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರಾದ ವಿಕಾಸ್ ಕಿಶೋರ್ ಸುರಳ್ಕರ್, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್, ಜಿಲ್ಲಾಧಿಕಾರಿ ಯಶ್ವಂತ್ ವಿ.ಗುರುಕರ್, ಜಿಪಂ ಸಿಇಒ ಅನ್ಮೋಲ್ ಜೈನ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಸೋಮಲಿಂಗಯ್ಯ, ತಹಸೀಲ್ದಾರ್ ತೇಜಸ್ವಿನಿ, ಟೊಯೋಟಾ ಸಂಸ್ಥೆಯ ಸಿಎಸ್‌ಆರ್ ಮುಖ್ಯಸ್ಥ ಹೆಗ್ಗಡೆ ಮತ್ತಿತರರು ಹಾಜರಿದ್ದರು.