ಮಹಿಳೆಯರಿಗೆ ಆಯೋಜಿಸಿದ್ದ ಮೂವತ್ತು ದಿನಗಳ ಹೊಲಿಗೆ ತರಬೇತಿ ಮುಗಿಸಿದ ಶಿಬಿರಾರ್ಥಿಗಳಿಗೆ ಪಟ್ಟಣದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಭಾಂಗಣದಲ್ಲಿ ಉತ್ತರ ಕನ್ನಡ ಜಿಪಂ ಎನ್.ಆರ್.ಎಲ್.ಎಂ. ಜಿಲ್ಲಾ ವ್ಯವಸ್ಥಾಪಕ (ಕೌಶಲ್ಯ ವಿಭಾಗ) ವಿಜಯಕುಮಾರ ಹೆಗಡೆ ಪ್ರಮಾಣಪತ್ರ ವಿತರಿಸಿದರು.
ಗ್ರಾಮೀಣ ಮಹಿಳೆಯರಿಗೆ 30 ದಿನಗಳ ಹೊಲಿಗೆ ಕೌಶಲ್ಯ ತರಬೇತಿ ಶಿಬಿರ ಮುಕ್ತಾಯ
ಕನ್ನಡಪ್ರಭ ವಾರ್ತೆ ಹಳಿಯಾಳಮಹಿಳೆಯರಿಗೆ ಆಯೋಜಿಸಿದ್ದ ಮೂವತ್ತು ದಿನಗಳ ಹೊಲಿಗೆ ತರಬೇತಿ ಮುಗಿಸಿದ ಶಿಬಿರಾರ್ಥಿಗಳಿಗೆ ಪಟ್ಟಣದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಭಾಂಗಣದಲ್ಲಿ ಉತ್ತರ ಕನ್ನಡ ಜಿಪಂ ಎನ್.ಆರ್.ಎಲ್.ಎಂ. ಜಿಲ್ಲಾ ವ್ಯವಸ್ಥಾಪಕ (ಕೌಶಲ್ಯ ವಿಭಾಗ) ವಿಜಯಕುಮಾರ ಹೆಗಡೆ ಪ್ರಮಾಣಪತ್ರ ವಿತರಿಸಿದರು.
ಬಳಿಕ ಮಾತನಾಡಿದ ಅವರು, ಗ್ರಾಮೀಣ ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡುವುದು ಅವರ ಸ್ವಾವಲಂಬಿ ಬದುಕಿನತ್ತ ಮಹತ್ವದ ಹೆಜ್ಜೆಯಾಗಿದೆ ಎಂದರು.ಎನ್.ಆರ್.ಎಲ್.ಎಂ. ಹಳಿಯಾಳದ ಸಂಯೋಜಕಿ ಕವಿತಾ ಕಲಾಲ ಅವರು ಎನ್.ಆರ್.ಎಲ್.ಎಂ. ವತಿಯಿಂದ ಮಹಿಳಾ ಉದ್ಯಮಿಗಳಿಗೆ ಲಭ್ಯವಿರುವ ವಿವಿಧ ಸಹಾಯ ಸೌಲಭ್ಯಗಳ ಮಾಹಿತಿ ನೀಡಿದರು.
ತರಬೇತಿ ಶಿಬಿರವನ್ನು ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಂಸ್ಥೆ, ಉತ್ತರ ಕನ್ನಡ ಜಿಪಂ, ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಖನಿಜ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಲಾಗಿತ್ತು.ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಂಸ್ಥೆಯ ಹಿರಿಯ ಮಾರ್ಗದರ್ಶಕ ಅನಂತಯ್ಯ ಆಚಾರ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ಯೋಜನಾ ಸಂಯೋಜಕ ವಿನಾಯಕ ಚವ್ಹಾಣ, ಮಹಿಳೆಯರ ಸ್ವಾವಲಂಬಿ ಬದುಕಿಗಾಗಿ ಸಂಸ್ಥೆಯ ವತಿಯಿಂದ ನೀಡಲಾಗುವ ತರಬೇತಿಗಳು, ಸ್ವಯಂ ಉದ್ಯೋಗದ ಅವಕಾಶಗಳು, ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ ಮಾಡಲು ನೀಡಲಾಗುವ ತರಬೇತಿಗಳ ಕುರಿತು ಸಮಗ್ರ ಮಾಹಿತಿ ನೀಡಿದರು.ತರಬೇತಿಯ ಸಂಪನ್ಮೂಲ ವ್ಯಕ್ತಿ ವಿದ್ಯಾ ಮೇಟ್ರಿ, ಯಶಸ್ವಿ ಉದ್ಯಮಿಗಳಾಗುವಂತೆ ಶುಭ ಹಾರೈಸಿದರು.
ಶಿಬಿರಾರ್ಥಿಗಳಾದ ಜ್ಯೋತಿ ಹುಲಕೊಪ್ಪಕರ, ವಂದನಾ ಕರ್ಲೆಕರ, ಕೋಮಲ ಬೋಕಡೆಕರ, ತಮ್ಮ ಅನುಭವಗಳನ್ನು ಹಂಚಿಕೊಂಡರು. ಕ್ಷೇತ್ರ ಮೇಲ್ವಿಚಾರಕ ಉಳವಯ್ಯ ಬೆಂಡಿಗೇರಿ ಹಾಗೂ ವಂದನಾ ಕರ್ಲೆಕರ ಕಾರ್ಯಕ್ರಮ ನಿರೂಪಿಸಿದರು.