ಮಂಗಳೂರು: ರಾಜ್ಯದಲ್ಲಿ ಮಳೆ ಕೊರತೆಯಿಂದ ಬರ ಪರಿಸ್ಥಿತಿ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಕ್ಷಣ ರಾಜ್ಯ ಮಟ್ಟದ ಬರ ಅಧ್ಯಯನ ಸಮಿತಿ ರಚಿಸಬೇಕು, ಅಲ್ಲದೆ ಎಲ್ಲ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳೂ ಕೂಡಲೇ ತಮ್ಮ ಜಿಲ್ಲೆಗಳಿಗೆ ತೆರಳಿ ಕಾರ್ಯಪ್ರವೃತ್ತರಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇ ಗೌಡ ಒತ್ತಾಯಿಸಿದ್ದಾರೆ.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಡಿಕೆಶಿ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಬರ ಅಧ್ಯಯನಕ್ಕೆ ಸಮಿತಿ ಕಳುಹಿಸಬೇಕು ಎಂದು ವಿನಂತಿ ಮಾಡಿರುವುದು ಸ್ವಾಗತಾರ್ಹ, ಆದರೆ ಅದು ಬರುವವರೆಗೂ ನಮ್ಮಲ್ಲಿ ಸುಮ್ಮನಿರುವುದು ಸರಿಯಲ್ಲ, ಬದಲಿಗೆ ರಾಜ್ಯಮಟ್ಟದ ಸಮಿತಿ ಆಗಮಿಸಿ ಅಧ್ಯಯನ ನಡೆಸುವುದು ಸೂಕ್ತ ಎಂದರು.
ಕಳೆದ ವರ್ಷ ಇದೇ ಅವಧಿಯಲ್ಲಿ ಭರ್ತಿಯಾಗಿದ್ದ ಡ್ಯಾಂಗಳು ಈ ಬಾರಿ ಖಾಲಿ ಇವೆ. ಬರ ಬರುವ ಬಗ್ಗೆ ಸರ್ಕಾರಕ್ಕೆ ಮೊದಲೇ ಸೂಚನೆ ಇತ್ತು, ಆದರೂ ಯಾವುದೇ ಬರ ಎದುರಿಸುವ ಪೂರ್ವ ತಯಾರಿ ಮಾಡಿಕೊಳ್ಳುವಲ್ಲಿ ಸರ್ಕಾರ ಹಿಂದುಳಿದಿದೆ ಎಂದರು.ಬಿಡದಿ ಸ್ಯಾಟಲೈಟ್ ನಗರ ಯೋಜನೆಯನ್ನು ಆರಂಭದಲ್ಲಿ ಎಚ್.ಡಿ. ಕುಮಾರಸ್ವಾಮಿಯವರೇ ರೂಪಿಸಿದ್ದು, ಈಗ ರಾಜಕೀಯಕ್ಕಾಗಿ ಪ್ರತಿರೋಧ ಮಾಡುತ್ತಿದ್ದಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಬೆಂಗಳೂರು ನಗರದ ದಟ್ಟಣೆ ಕಡಿಮೆ ಮಾಡಲು ನಾಲ್ಕು ಕಡೆ ಟೌನ್‌ಶಿಪ್ ಯೋಜಿಸಿದ್ದು ನಿಜ, ಆದರೆ ವಿರೋಧ ಇದ್ದುದ್ದರಿಂದ ಕೈಬಿಟ್ಟಿದ್ದರು ಎಂದು ಸ್ಪಷ್ಟಪಡಿಸಿದರು.ಜೆಡಿಎಸ್ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ, ಪ್ರಮುಖರಾದ ಶಶಿರಾಜ್ ಶೆಟ್ಟಿ ಕೊಳಂಬೆ, ಅಕ್ಷಿತ್ ಸುವರ್ಣ, ಯೋಗೀಶ್ ಶೆಟ್ಟಿ ಜೆಪ್ಪು ಇದ್ದರು.ಕಡತ್ಕೊರೆತ ತಡೆಗೆ ಖಾದರ್ ಏನು ಮಾಡಿದ್ದಾರೆ?
ಉಳ್ಳಾಲದಲ್ಲಿ ವರ್ಷವೂ ಕಡಲ್ಕೊರೆತ ಎದುರಾಗುತ್ತಿದೆ, ಹತ್ತಾರು ಮನೆಗಳು ಕಡಲ ಪಾಲಾಗುತ್ತಿದೆ. ಅಲ್ಲಿನ ಶಾಸಕ ಯು.ಟಿ. ಖಾದರ್ ಅವರು ಸಚಿವರಾಗಿದ್ದಾರೆ. ಕಳೆದ 9 ಬಾರಿ ಈ ಕ್ಷೇತ್ರವನ್ನು ಅವರು ಹಾಗೂ ಅವರ ಕುಟುಂಬ ಪ್ರತಿನಿಧಿಸಿದೆ. ಆದರೆ ಯಾಕೆ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕೈಗೊಂಡಿಲ್ಲ? ಮುಂಬಯಿ ನಗರದಲ್ಲಿ ಕಡಲ್ಕೊರೆತ ನಿಭಾಯಿಸಿಲ್ಲವೇ ? ಇಲ್ಲಿ ಮಾತ್ರ ಕಡಲು ಇರುವುದೇ ಎಂದು ಭೋಜೇ ಗೌಡ ಪ್ರಶ್ನಿಸಿದರು.