ಸಿ.ಕೆ. ನಾಗರಾಜ

ಹೊಸಪೇಟೆ: ವಿಜಯನಗರ (ಹೊಸಪೇಟೆ) ಹೊಸ ಜಿಲ್ಲೆ ಘೋಷಣೆಯಾದಾಗಿನಿಂದಲೂ ರಾಜ್ಯ ಬಜೆಟ್‌ನಲ್ಲಿ ಈ ವರೆಗೆ ನಿರೀಕ್ಷಿತ ಲಾಭವಾಗಿಲ್ಲ. ಆದಾಗ್ಯೂ ಈ ಬಾರಿಯ ಬಜೆಟ್‌ ಮೇಲೆ ಜಿಲ್ಲೆಯ ಜನರ ನಿರೀಕ್ಷೆಗಳಿವೆ. ಅಭಿವೃದ್ಧಿ ಮುಂದಡಿ ಇಡಲು ವಿವಿಧ ಯೋಜನೆಗಳಿಗೆ ಬಜೆಟ್‌ನಲ್ಲಿ ಅನುದಾನ ಸಿಗುವ ವಿಶ್ವಾಸವೂ ಮೂಡಿದೆ.

ಆರೋಗ್ಯ, ಶಿಕ್ಷಣ, ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿಗೆ ಒತ್ತು ನೀಡಬೇಕಾಗಿರುವುದರಿಂದ ಸರ್ಕಾರದ ನಿಲುವಿನ ಮೇಲೆಯೇ ಜಿಲ್ಲೆಯ ಪ್ರಗತಿ ಅವಲಂಬಿಸಿದೆ. ಬಳ್ಳಾರಿಯಿಂದ ವಿಭಜನೆಗೊಂಡ ವಿಜಯನಗರ ಜಿಲ್ಲೆ ಪ್ರತ್ಯೇಕ ಅಸ್ವಿತ್ವ ಪಡೆದುಕೊಂಡಿದ್ದೇ ದೊಡ್ಡ ಭಾಗ್ಯವಾಯಿತಾದರೂ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಯ ಜನರಿಗೆ ಯಾವುದೇ ಅನುಕೂಲವಾಗಿಲ್ಲ ಎಂಬ ಆರೋಪಗಳು ದಟ್ಟವಾಗಿವೆ. ಅನೇಕ ಸೌಕರ್ಯಗಳಿಗಾಗಿ ಇಲ್ಲಿನ ಸಮಾಜಮುಖಿ ಚಿಂತಕರು ಅನೇಕ ಬಾರಿ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ದೂರುಗಳಿವೆ.

ಜಿಲ್ಲಾ ಆಸ್ಪತ್ರೆಯ ಉದ್ಘಾಟನೆ ಭಾಗ್ಯವಿಲ್ಲ: ಜಿಲ್ಲೆಯ ಜನರ ಆರೋಗ್ಯ ರಕ್ಷಣೆ ಮಾಡುವ ಜಿಲ್ಲಾಸ್ಪತ್ರೆಯ ಉದ್ಘಾಟನೆ ಭಾಗ್ಯ ಇನ್ನು ಕೂಡಿ ಬಂದಿಲ್ಲ. ಹೀಗಾಗಿ ತುರ್ತು ಚಿಕಿತ್ಸೆ ಸೇರಿದಂತೆ ವಿವಿಧ ಕಾಯಿಲೆಗಳಿಗೆ ನೆರೆಯ ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯನ್ನು ಅವಲಂಬಿಸುವಂತಾಗಿದೆ.

ವಿಜಯನಗರ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಸ್ಪತ್ರೆ ಪೂರ್ಣ ಪ್ರಮಾಣದ ಸಿದ್ಧತೆಗೊಂಡಿಲ್ಲ. ಅನುದಾನ ಕೊರತೆಯಿಂದಾಗಿ ಜಿಲ್ಲಾಸ್ಪತ್ರೆ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿಲ್ಲ. ವೈದ್ಯಕೀಯ ಪರಿಕರಗಳ ಅಳವಡಿಕೆ, ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಹೀಗಾಗಿ ಜಿಲ್ಲೆಯ ಜನರ ಆರೋಗ್ಯ ಕಾಪಾಡುವ ಆಸ್ಪತ್ರೆಯ ಭಾಗ್ಯ ಈ ಭಾಗದ ಜನರಿಗೆ ದೊರೆತಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಜಿಲ್ಲಾಸ್ಪತ್ರೆಗೆ ಅಗತ್ಯ ಅನುದಾನ ಸಿಗುವ ನಿರೀಕ್ಷೆಯಿದ್ದು, ಜಿಲ್ಲಾ ಸಚಿವರು ಸೇರಿದಂತೆ ಜಿಲ್ಲಾಡಳಿತ ಆಸ್ಪತ್ರೆಗೆ ಆರಂಭಕ್ಕೆ ಯಾವ ಕ್ರಮ ಕೈಗೊಳ್ಳುತ್ತಾರೆ. ಈ ಬಜೆಟ್‌ನಲ್ಲಿ ಜಿಲ್ಲೆಗೆ ಎಷ್ಟು ಅನುದಾನ ಹರಿದು ಬರಲಿದೆ ಎಂಬ ಕುತೂಹಲವೂ ಇದೆ.


ಜಿಲ್ಲಾಡಳಿತ ಭವನದ ನಿರೀಕ್ಷೆ: ವಿಜಯನಗರ ಜಿಲ್ಲೆಯಾಗಿ ಐದು ವರ್ಷಗಳಾದರೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸಲು ಬೇಕಾದ ಜಿಲ್ಲಾಡಳಿತ ಭವನ ಕಟ್ಟಡ ನಿರ್ಮಾಣ ಆರಂಭಗೊಂಡಿಲ್ಲ. ಹೀಗಾಗಿ ಸರ್ಕಾರಿ ಕಚೇರಿಗಳು ಹಳೆಯ ಕಟ್ಟಡಗಳಲ್ಲಿಯೇ ಕಾರ್ಯನಿರ್ವಹಿಸುವಂತಾಗಿದೆ. ಹೊಸ ಜಿಲ್ಲೆಯಾದ್ದರಿಂದ ವಿವಿಧ ಇಲಾಖೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅಧಿಕಾರಿಗಳು ಹಾಗೂ ಸಿಬ್ಬಂದಿ ಕೊರತೆಯಿಂದಾಗಿಯೇ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಮುಂದುವರಿದಿದೆ. ಜಿಲ್ಲಾಡಳಿತ ಭವನ ನಿರ್ಮಿಸಬೇಕು ಹಾಗೂ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ನೇಮಕ ಮಾಡಬೇಕು ಎಂದು ಅನೇಕ ಸಂಘಟನೆಗಳು ಹಾಗೂ ಸಾರ್ವಜನಿಕ ಹಿತಾಸಕ್ತ ಸಂಸ್ಥೆಗಳು ಹೋರಾಟ ಮಾಡುತ್ತಲೇ ಬಂದಿವೆ. ಆದರೆ, ಈ ವರೆಗೆ ಕಾರ್ಯರೂಪ ಪಡೆದುಕೊಂಡಿಲ್ಲ. ಜಿಲ್ಲಾಡಳಿತ ಭವನ ನಿರ್ಮಾಣ ಹಿನ್ನಡೆ, ಜಿಲ್ಲಾಡಳಿತ ಕಾರ್ಯನಿರ್ವಹಣೆಗೆ ಅಡ್ಡಿಯಾಗಿದ್ದು, ಕೂಡಲೇ ಈ ಬಗ್ಗೆ ಗಮನ ಹರಿಸುವಂತಾಗಬೇಕು. ಬಜೆಟ್‌ನಲ್ಲಿ ಅನುದಾನ ಪಡೆದು, ಭವನ ನಿರ್ಮಾಣಕ್ಕೆ ಜಿಲ್ಲಾ ಸಚಿವರು ಆಸ್ಥೆ ವಹಿಸಬೇಕು ಎಂಬ ಆಗ್ರಹಗಳು ಕೇಳಿ ಬಂದಿವೆ.

ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ ಕಾಲೇಜುಗಳ ಬೇಡಿಕೆ: ವಿಜಯನಗರ ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಸರ್ಕಾರಿ ಡಿಪ್ಲೊಮಾ ಕಾಲೇಜು, ಬಾಲಕಿಯರ ಮಹಿಳಾ ಪದವಿಪೂರ್ವ ಕಾಲೇಜು, ಕಾನೂನು ಕಾಲೇಜು, ಕೃಷಿ, ತೋಟಗಾರಿಕೆ ಕಾಲೇಜುಗಳು, ಸುಸಜ್ಜಿತವಾದ ಜಿಲ್ಲಾ ಕ್ರೀಡಾಂಗಣ ಸೇರಿದಂತೆ ಹತ್ತಾರು ಬೇಡಿಕೆಗಳಿವೆ. ಹೊಸಪೇಟೆ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆಯಲಾಗುತ್ತಿದ್ದು, ಸಕ್ಕರೆ ಕಾರ್ಖಾನೆ ನಿರ್ಮಿಸಬೇಕು ಎಂಬುದು ಈ ಭಾಗದ ಜನರ ಪ್ರಮುಖ ಬೇಡಿಕೆಯೂ ಆಗಿದೆ. ಇದರಿಂದ ಸಾವಿರಾರು ಕಬ್ಬು ಬೆಳೆಗಾರರಿಗೆ ಅನುಕೂಲವಾಗುವುದಲ್ಲದೆ, ಕೃಷಿ ಬಿಕ್ಕಟ್ಟಿನಿಂದ ರೈತರು ಹೊರ ಬರಲು ಸಾಧ್ಯವಾಲಿದೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೂ ಆಸ್ಪದವಾಗಲಿದೆ. ಹೀಗಾಗಿ ಸಕ್ಕರೆ ಕಾರ್ಖಾನೆಗೆ ಕ್ರಮ ವಹಿಸಬೇಕು. ವಿಶ್ವವಿಖ್ಯಾತ ಹಂಪಿ ವಿಜಯನಗರ ಜಿಲ್ಲೆಯಲ್ಲಿರುವುದರಿಂದ ಹಂಪಿಗೆ ದೇಶ-ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹೋಗುತ್ತಿರುವುದರಿಂದ ಈ ಭಾಗದ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕು. ಹಂಪಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು. ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಬೇಕು. ಹಂಪಿ ಕನ್ನಡ ವಿಶ್ವವಿದ್ಯಾಲಯ ಅನುದಾನ ಕೊರತೆ ಎದುರಿಸುತ್ತಿದ್ದು, ವಿವಿಗೆ ಆರ್ಥಿಕ ನೆರವು ನೀಡುವ ಮೂಲಕ ಸಂಶೋಧನಾ ಕಾರ್ಯಗಳಿಗೆ ಪ್ರೋತ್ಸಾಹಿಸಬೇಕು ಎಂಬ ಬೇಡಿಕೆಗಳಿದ್ದು, ಈ ಬಾರಿಯ ಬಜೆಟ್‌ನಲ್ಲಿ ಜಿಲ್ಲೆಯ ಎಷ್ಟು ಬೇಡಿಕೆಗಳಿಗೆ ಮುಖ್ಯಮಂತ್ರಿಗಳಿಂದ ಅನುದಾನ ಸಿಗುತ್ತದೆಯೋ ಕಾದು ನೋಡಬೇಕಿದೆ. ವಿಜಯನಗರ ಜಿಲ್ಲೆಗೆ ಜಿಲ್ಲಾಡಳಿತ ಭವನ ನಿರ್ಮಿಸುವುದರಿಂದ ಒಂದೇ ಕಡೆ ಎಲ್ಲ ಇಲಾಖೆಗಳು ಕಾರ್ಯನಿರ್ವಹಿಸಲು ಅನುಕೂಲವಾಗಲಿದೆ. ಇದರಿಂದ ಸಾರ್ವಜನಿಕರ ಪರದಾಟವೂ ತಪ್ಪುತ್ತದೆ. ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನಿರೀಕ್ಷಿಯಿದೆ ಎಂದು ವಿಜಯನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಮಾಜಿ ಶಾಸಕರು ಹಾಗೂ ಜಿಲ್ಲಾಧ್ಯಕ್ಷ ಸಿರಾಜ್ ಶೇಖ್‌ ಹೇಳಿದರು.