ವೀರಭದ್ರೇಶ್ವರ ಏತ ನೀರಾವರಿಗೆ ಮಂದಗತಿ

| Published : Mar 07 2025, 12:46 AM IST

ಸಾರಾಂಶ

ರಾಮದುರ್ಗ ತಾಲೂಕಿನ ಉತ್ತರ ಭಾಗದ ರೈತರ ನೀರಾವರಿ ಕನಸಿನ ಕೂಸಾದ ₹544 ಕೋಟಿ ವೆಚ್ಚದ ವೀರಭದ್ರೇಶ್ವರ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆಯಾಗಿ ದಶಕಗಳು ಕಳೆದರೂ ಅಧಿಕಾರಗಳು ಮತ್ತು ರಾಜಕಾರಣಗಳ ನಿರ್ಲಕ್ಷದಿಂದ ಭೂಸ್ವಾಧೀನ ಪ್ರಕ್ರಿಯೆ ಮಂದಗತಿಯಲ್ಲಿ ನಡೆದಿದೆ. ಇದರಿಂದಾಗಿ ನೀರಾವರಿ ಯೋಜನೆ ಕನಸು ಕನಸಾಗಿಯೇ ಉಳಿದಿದೆ.

ಈರಣ್ಣ ಬುಡ್ಡಾಗೋಳ

ಕನ್ನಡಪ್ರಭ ವಾರ್ತೆ ರಾಮದುರ್ಗ

ತಾಲೂಕಿನ ಉತ್ತರ ಭಾಗದ ರೈತರ ನೀರಾವರಿ ಕನಸಿನ ಕೂಸಾದ ₹544 ಕೋಟಿ ವೆಚ್ಚದ ವೀರಭದ್ರೇಶ್ವರ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆಯಾಗಿ ದಶಕಗಳು ಕಳೆದರೂ ಅಧಿಕಾರಗಳು ಮತ್ತು ರಾಜಕಾರಣಗಳ ನಿರ್ಲಕ್ಷದಿಂದ ಭೂಸ್ವಾಧೀನ ಪ್ರಕ್ರಿಯೆ ಮಂದಗತಿಯಲ್ಲಿ ನಡೆದಿದೆ. ಇದರಿಂದಾಗಿ ನೀರಾವರಿ ಯೋಜನೆ ಕನಸು ಕನಸಾಗಿಯೇ ಉಳಿದಿದೆ.ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೇ ಇರುವುದು ಮತ್ತು ಕೊಳವೆಬಾವಿ ವಿಫಲತೆಯಿಂದ ರೈತರು ಕೃಷಿಯನ್ನೇ ಬಿಟ್ಟು ಪಟ್ಟಣದತ್ತ ವಲಸೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದಾಗ 2013ರ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾದ ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣರ ಅವಿರತ ಪ್ರಯತ್ನದ ಫಲವಾಗಿ 2014-15ನೇ ಬಜೆಟ್‌ನಲ್ಲಿ ಅನುಮೋದನೆ ಪಡೆಯಿತು. 2016 ಜನವರಿಯಲ್ಲಿ ಇಂದಿನ ಮತ್ತು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಶಂಕುಸ್ಥಾಪನೆ ಮಾಡಿರುವ ಈ ಯೋಜನೆಕಾಮಗಾರಿ ಕುಂಟುತ್ತ ಸಾಗಿದೆ. ವೀರಭದ್ರೇಶ್ವರ ಏತ ನೀರಾವರಿಗೆ ಸರ್ಕಾರ ಶಂಕುಸ್ಥಾಪನೆಯಾಗಿದ್ದರಿಂದ ಕೆಲವೇ ದಿನಗಳಲ್ಲಿ ಯೋಜನೆ ಕಾರ್ಯಾರಂಭ ಮಾಡಲಿದೆ ಎಂದು ತಿಳಿದು ರೈತರಲ್ಲಿ ಕೃಷಿಯತ್ತ ಉತ್ಸಾಹ ಹೆಚ್ಚಿದ್ದು, ಬರಡು ಭೂಮಿ ಹಸಿರು ನಂದನವನವಾಗಲಿದೆಂದು ಸಂತಸಪಟ್ಟಿದ್ದರು.ಈ ಯೋಜನೆಯಿಂದ ರಾಮದುರ್ಗ ತಾಲೂಕಿನ 28 ಗ್ರಾಮ ಮತ್ತು ಮುಧೋಳ ತಾಲೂಕಿನ 4 ಗ್ರಾಮಗಳ ಸುಮಾರು 17377 ಹೆಕ್ಟೇರ್ ಪ್ರದೇಶ ನೀರಾವರಿಗೆ ಒಳಪಡಲಿದೆ. ಅಲ್ಲದೆ 10 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕೂಡಾ ಇದಾಗಿದೆ. ಪರಿಣಾಮ ಈ ಭಾಗದ ಬಹುತೇಕ ಪ್ರದೇಶಕ್ಕೆ ನೀರಾವರಿ ಆಗಲಿದೆ ಎಂದು ಕನಸು ಕಂಡಿದ್ದರು.

ಭೂಸ್ವಾಧೀನದ ಬೆಲೆ ಡಬಲ್‌, ತ್ರಿಬಲ್‌:

ಈ ಯೋಜನೆಗೆ ರೈತರು ಯಾವುದೇ ಅಡೆತಡೆ ಮಾಡದೇ ಭೂಸ್ವಾಧೀನವಾಗಬೇಕಿದ್ದ 2400 ಎಕರೆ ಭೂಮಿ ನೀಡಿದ್ದರು. ವಿಪರ್ಯಾಸ ಎಂದರೆ ಈವರೆಗೆ ಕೇವಲ 220 ಎಕರೆ ಮಾತ್ರ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಕಾಲುವೆ ನಿರ್ಮಾಣದ ಕಾಮಗಾರಿ 2018ರಲ್ಲಿ ಕೈಗೊಂಡಿದ್ದು, ಅಂದಿನಿಂದ ಅಧಿಕಾರಿಗಳು ಗುರ್ತಿಸಿದ ಭೂಮಿಯಲ್ಲಿ ಯಾವುದೇ ಬೆಳೆಯನ್ನು ಬೆಳೆಯುತ್ತಿಲ್ಲ. ಭೂಸ್ವಾಧೀನವನ್ನು ಅಂದೇ ಮಾಡಿದ್ದರೇ ಎಕರೆಗೆ ₹5ಲಕ್ಷ, ₹6 ಲಕ್ಷ ಕಡಿಮೆ ಹಣದ ಅವವಶ್ಯಕತೆ ಇತ್ತು. ಇಂದು ದಶಕಗಳು ಕಳೆದಿದ್ದು ಭೂಸ್ವಾಧೀನದ ಬೆಲೆ ₹15 ಲಕ್ಷದಿಂದ ₹18 ಲಕ್ಷ ಆಗುವ ಸಾಧ್ಯತೆ ಇದೆ. ಇದೆಲ್ಲ ಸರ್ಕಾರಕ್ಕೆ ಹೊರೆಯಾಗಲಿದ್ದು, ಜನಸಾಮಾನ್ಯರ ತೆರಿಗೆ ಹಣವೇ ಬಳಕೆಯಾಗುತ್ತದೆ ಎಂಬುದು ರೈತರ ಆಕ್ರೋಶ.ರೈತರ ಕನಸು ನನಸಾಗಲು ನೀರಾವರಿ, ಕಂದಾಯ ಇಲಾಖೆ ಹಾಗೂ ಜಿಲ್ಲಾಡಳಿತ ಇಚ್ಛಾಶಕ್ತಿ ಪ್ರದರ್ಶಿಸಿ ತ್ವರಿತಗತಿಯಲ್ಲಿ ಭೂಸ್ವಾಧೀನ ಕಾರ್ಯಕೈಗೊಂಡು ರೈತರ ಜಮೀನಗೆ ನೀರುಣಿಸಬೇಕಾಗಿದೆ. ವೀರಭದ್ರೇಶ್ವರ ಏತ ನೀರಾವರಿ ಯೋಜನೆಗೆ ಒಳಪಡುವ ಗ್ರಾಮಗಳು

ರಾಮದುರ್ಗ ತಾಲೂಕಿನ ಗುತ್ತಿಗೋಳಿ, ಹೊಸಕೋಟಿ, ಬುದ್ನಿಖುರ್ದ, ತೊಂಡಿಕಟ್ಟಿ, ಕುಳ್ಳೂರ, ತಿಮ್ಮಾಪೂರ, ಪಂಚಗಾಂವ, ವೆಂಕಟಾಪೂರ, ಬೀಡಕಿ, ಗುಡಗಮನಾಳ, ಉದುಪುಡಿ, ರೊಕ್ಕದಕಟ್ಟಿ, ದಾಡಿಬಾಂವಿ ತಾಂಡಾ, ರಾಮಾಪೂರ ತಾಂಡಾ, ಓಬಳಾಪೂರ ತಾಂಡಾ, ಬನ್ನೂರ ತಾಂಡಾ, ಆರಿಬೆಂಚಿ ತಾಂಡಾ, ಬನ್ನೂರ, ಸಾಲಹಳ್ಳಿ, ಬೂದನೂರ, ಕದಾಂಪೂರ, ಗುಡಕಟ್ಟಿ, ಕಾಮನಕೊಪ್ಪ, ಚನ್ನಟ್ಟಿ, ಬಿಜಗುಪ್ಪಿ, ಸಿದ್ನಾಳ, ಕೇಸರಗೊಪ್ಪ, ಗೋಡಚಿ, ತೋಟಗಟ್ಟಿ, ಗುದಗೋಪ್ಪ ಮತ್ತು ಮುಧೋಳ ತಾಲೂಕಿನ ಕಿಲ್ಲಾಹೊಸಕೋಟಿ, ದಾದನಟ್ಟಿ, ಕನಸಗೇರಿ ಹಾಗೂ ಮಲ್ಲಾಪೂರ.2016ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರ ಅವಧಿಯಲ್ಲಿ ತಾಲೂಕಿನ ನೀರಾವರಿಯಿಂದ ವಂಚಿತ ಗ್ರಾಮಗಳ ಭೂಮಿಗೆ ನೀರಾವರಿ ಮಾಡುವ ಉದ್ದೇಶದಿಂದ ಮಂಜೂರು ಮಾಡಿಸಿದ್ದೆ. 2018ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಯೋಜನೆ ಪೂರ್ತಿಯಾಗಿಲ್ಲ. ಈಗ ಮತ್ತೆ ನಾನು ಶಾಸಕನಾಗಿದ್ದಲ್ಲದೇ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು ಆದಷ್ಟು ಬೇಗನೆ ಭೂಸ್ವಾಧೀನ ಸೇರಿದಂತೆ ಕಾಮಗಾರಿ ಪೂರ್ತಿಗೊಳಿಸಿ ರೈತರ ಕನಸು ನನಸು ಮಾಡಲಾಗುವುದು.

-ಅಶೋಕ ಪಟ್ಟಣ, ಶಾಸಕರು, ಸರ್ಕಾರದ ಮುಖ್ಯಸಚೇತಕರು.

ವೀರಭದ್ರೇಶ್ವರ ಏತ ನೀರಾವರಿಯಿಂದ ತಾಲೂಕಿನ ಉತ್ತರದ ಭಾಗದ ರೈತರ ಭಾಗ್ಯದ ಬಾಗಿಲು ತೆರೆಯಿತು ಎಂದುಕೊಂಡಿದ್ದ ರೈತರಿಗೆ ವಿಳಂಬದಿಂದಾಗಿ ನಿರಾಸೆಯಾಗಿದೆ. ಶಾಸಕರು 2023ರ ಚುನಾವಣೆಯಲ್ಲಿ ಆಯ್ಕೆಯಾದ ವರ್ಷದೊಳಗಾಗಿ ಕಾಮಗಾರಿ ಪೂರ್ತಿ ಮಾಡಿ ಜಮೀನಿಗೆ ನೀರು ಹರಿಸುವ ಭರವಸೆ ನೀಡಿದ್ದು, ಆಯ್ಕೆಯಾಗಿ ಎರಡು ವರ್ಷವಾದರೂ ಇನ್ನು ಭೂಸ್ವಾಧೀನವಾಗಿಲ್ಲ. ಬೇಗನೆ ಭೂಸ್ವಾಧೀನ ಕಾರ್ಯ ಮತ್ತು ರೈತರಿಗೆ ಪರಿಹಾರ ನೀಡುವ ಕಾರ್ಯದ ಜೊತೆಗೆ ಭೂಮಿಗೆ ನೀರು ಬರುವಂತೆ ಆದಾಗ ರೈತರಿಗೆ ಸಂತೋಷವಾಗುತ್ತದೆ.

-ಮಲ್ಲಿಕಾರ್ಜುನ ರಾಮದುರ್ಗ, ರೈತ ಮುಖಂಡರು.