ಶಿಕ್ಷಣ, ಸಂಘಟನೆಯಿಂದ ಸಮಾಜ ಅಭಿವೃದ್ಧಿ ಸಾಧ್ಯ

| Published : Feb 11 2025, 12:48 AM IST

ಸಾರಾಂಶ

ಹೊಸದುರ್ಗ ಬ್ರಹ್ಮ ವಿದ್ಯಾನಗರದ ಭಗೀರಥ ಪೀಠದಲ್ಲಿ ಪುರುಷೋತ್ತಮಾನಂದಪುರಿ ಶ್ರೀಗಳ 26ನೇ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದದಲ್ಲಿ ಶ್ರೀಗಳನ್ನು ಗೌರವಿಸಲಾಯಿತು.

ಪುರುಷೋತ್ತಮಾನಂದ ಶ್ರೀಗಳ 26ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವದಲ್ಲಿ ಸಾಣೇಹಳ್ಳಿ ಶ್ರೀ ಅಭಿಮತಕನ್ನಡಪ್ರಭ ವಾರ್ತೆ ಹೊಸದುರ್ಗ:

ಸ್ವಾಮಿಗಳಾದ ನಾವು ವೈಭವದಿಂದ ಮೆರೆಯುವುದಕ್ಕಿಂತ ಹೆಚ್ಚಾಗಿ ಸಮಾಜ ವೈಭವದಿಂದ ಇರುವ ಹಾಗೆ ನೋಡಿಕೊಳ್ಳುವುದು ಬಹಳ ಮುಖ್ಯ. ಶಿಸ್ತು, ಸಂಸ್ಕೃತಿ, ಶಿಕ್ಷಣ, ಸಂಘಟನೆ ಇವುಗಳು ಇದ್ದಾಗ ಯಾವ ಸಮಾಜವಾದರೂ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಬ್ರಹ್ಮವಿದ್ಯಾ ನಗರದ ಭಗೀರಥ ಪೀಠದಲ್ಲಿ ಆಯೋಜಿಸಲಾಗಿರುವ ವ ಹಾಗೂ ರಾಷ್ಟ್ರೀಯ ಭಗೀರಥ ಜಯಂತೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಒಳ್ಳೆಯ ಕಾರ್ಯಗಳನ್ನು ಪ್ರಾರಂಭಿಸಿದಾಗ ವಿಘ್ನಗಳು ತನ್ನಷ್ಟಕ್ಕೆ ತಾನೇ ಹುಟ್ಟಿಕೊಳ್ಳುವುದು ಸಹಜ ಅವುಗಳೇ ನಮ್ಮ ಸಂಪತ್ತೆಂದು ಭಾವಿಸಿಕೊಳ್ಳಬೇಕು. ಯಾರಿಗೆ ಯಾವ ವಿಘ್ನಗಳು ಇರುವುದಿಲ್ಲ ಅವರು ಪ್ರಗತಿ ಹೊಂದಲು ಸಾಧ್ಯವಿಲ್ಲ. ವಿಘ್ನಗಳು ಬಂದಾಗ ಪುಟಿದೇಳುವಂಥಹ ನೈತಿಕ ನೆಲೆಗಟ್ಟು ಬೆಳೆಸಿಕೊಳ್ಳಬೇಕು. ಆ ಹಿನ್ನಲೆಯಲ್ಲಿ ಸ್ವಾಮೀಜಿಯವರು ಬಹಳ ಒಳ್ಳೆಯ ಸೇವಾ ಕಾರ್ಯಗಳನ್ನು ತಮ್ಮ ಕ್ಷೇತ್ರದಲ್ಲಿ ಮಾಡಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.

ಪುರುಷೋತ್ತಮಾನಂದಪುರಿ ಸ್ವಾಮೀಜಿ ಕಿರಿಯ ವಯಸ್ಸಿನಲ್ಲಿಯೇ ಹಿರಿಯ ಜವಾಬ್ದಾರಿ ವಹಿಸಿಕೊಂಡು ಸಮಾಜ ಮೆಚ್ಚುವ ಹಾಗೆ ಸೇವಾ ಕಾರ್ಯಗಳನ್ನು ಮಾಡುತ್ತಾ ಜನರಲ್ಲಿ ಜಾಗೃತಿಯನ್ನುಂಟು ಮಾಡುತ್ತಿದ್ದಾರೆ. ಪೂಜ್ಯರಿಗೆ ಪಟ್ಟಾಭಿಷೇಕವಾಗಿ ಇಂದಿಗೆ 26ವರ್ಷ ಆಯಿತು ಎನ್ನುವುದು ದೊಡ್ಡದೇನಲ್ಲ. ಮಾನವನ ಆಯುಷ್ಯ ನೂರು ವರ್ಷವೆಂದು ಪರಿಗಣಿಸಬಹುದು. ನೂರು ವರ್ಷದ ಅವಧಿಯಲ್ಲಿ ಎಂತಹ ಕೆಲಸವನ್ನು ಮಾಡಬೇಕು ಎನ್ನುವುದು ಬಹಳ ಮುಖ್ಯ. ನಾವು ಎಷ್ಟು ವರ್ಷ ಬದುಕಿದ್ದೇವೆ ಎನ್ನುವುದಕ್ಕಿಂತ ಬದುಕಿದ ಅವಧಿಯಲ್ಲಿ ಎಷ್ಟು ಪರಿಣಾಮಕಾರಿಯಾಗಿ ಸಮಾಜ ಕಟ್ಟಿ ಬೆಳೆಸಿದ್ದೇವೆ ಎನ್ನುವುದು ಬಹಳ ಮುಖ್ಯ ಎಂದರು.

ಪುರುಷೋತ್ತಮಾ ನಂದಪುರಿ ಸ್ವಾಮೀಜಿ ಮಾತನಾಡಿ, ಸರ್ಕಾರದಿಂದ ಕಳೆದ 3 ವರ್ಷಗಳಿಂದ ನಮ್ಮ ಸಮಾಜಕ್ಕೆ ಯಾವುದೇ ಕೆಲಸಗಳು ಆಗದ ಹಿನ್ನಲೆಯಲ್ಲಿ ನಮ್ಮ ಹಿಂದಿನ ಭಗೀರಥ ಶ್ರೀಗಳ ಏಕಶಿಲಾ ಮೂರ್ತಿಯ ಸ್ಥಾಪನೆ ಹಾಗೂ ಭುವನೇಶ್ವರ ರಥ ನಿರ್ಮಾಣದ ಈ 2 ಯೋಜನೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ನಮ್ಮ ಮಠದ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಸಮುದಾಯ ಭವನ ನಿರ್ಮಾಣ ಕಾರ್ಯವೂ ಅರ್ದಕ್ಕೆ ನಿಂತಿದೆ ಈ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಲು ಸರ್ಕಾರ ಮಠಕ್ಕೆ ಅನುದಾನ ನೀಡಬೇಕೆ ಎಂದು ಒತ್ತಾಯಿಸಿದರು.

ಈ ವೇಳೆ ಚಳ್ಳಕೆರೆಯ ಶಾಸಕ ಟಿ.ರಘುಮೂರ್ತಿ, ಮೌನೇಶ್, ನಟರಾಜ, ಲಕ್ಷ್ಮಣ ಉಪ್ಪಾರ, ಪ್ರಕಾಶ, ಪ್ರಭು, ವೀರಭದ್ರಪ್ಪ, ಉಪಸ್ಥಿತರಿದ್ದರು.