ಬಿಜೆಪಿ ಸರ್ಕಾರದಿಂದ ಸಾಮಾಜಿಕ ನ್ಯಾಯ ಸಾಧ್ಯವಿಲ್ಲ-ಗೀತಾ ಪೂಜಾರ

| Published : Mar 19 2024, 12:45 AM IST

ಬಿಜೆಪಿ ಸರ್ಕಾರದಿಂದ ಸಾಮಾಜಿಕ ನ್ಯಾಯ ಸಾಧ್ಯವಿಲ್ಲ-ಗೀತಾ ಪೂಜಾರ
Share this Article
  • FB
  • TW
  • Linkdin
  • Email

ಸಾರಾಂಶ

ಬೆಲೆ ಏರಿಕೆ ಗಗನಕ್ಕೇರಿಸಿ ಭಾರತದ ಜನತೆಯನ್ನು ಭೀತಿಯಲ್ಲಿ ಕಾಲ ಕಳೆಯುವಂತೆ ಮಾಡಿರುವ ಬಿಜೆಪಿ ಸರಕಾರದಿಂದ ಸಾಮಾಜಿಕ ನ್ಯಾಯ ಸಾಧ್ಯವಿಲ್ಲ, ಕರ್ನಾಟಕದಂತೆ ದೇಶಕ್ಕೆ ಕಾಂಗ್ರೆಸ್ ಸರಕಾರ ನೀಡಲು ಕಾಂಗ್ರೆಸ್ ಬೆಂಬಲಿಸಲು ಮಹಿಳೆಯರು ಮೊದಲು ಮನಸ್ಸು ಮಾಡಬೇಕು ಎಂದು ಪಕ್ಷದ ನಾಯಕಿ ಗೀತಾ ಪೂಜಾರ ತಿಳಿಸಿದರು.

ಹಾನಗಲ್ಲ: ಬೆಲೆ ಏರಿಕೆ ಗಗನಕ್ಕೇರಿಸಿ ಭಾರತದ ಜನತೆಯನ್ನು ಭೀತಿಯಲ್ಲಿ ಕಾಲ ಕಳೆಯುವಂತೆ ಮಾಡಿರುವ ಬಿಜೆಪಿ ಸರಕಾರದಿಂದ ಸಾಮಾಜಿಕ ನ್ಯಾಯ ಸಾಧ್ಯವಿಲ್ಲ, ಕರ್ನಾಟಕದಂತೆ ದೇಶಕ್ಕೆ ಕಾಂಗ್ರೆಸ್ ಸರಕಾರ ನೀಡಲು ಕಾಂಗ್ರೆಸ್ ಬೆಂಬಲಿಸಲು ಮಹಿಳೆಯರು ಮೊದಲು ಮನಸ್ಸು ಮಾಡಬೇಕು ಎಂದು ಪಕ್ಷದ ನಾಯಕಿ ಗೀತಾ ಪೂಜಾರ ತಿಳಿಸಿದರು.

ಶುಕ್ರವಾರ ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಈ ದೇಶದಲ್ಲಿ ಮಹಿಳೆಯರ ತೀರ್ಮಾನವೇ ನಿರ್ಣಾಯಕ. ಸುಭದ್ರ ಆಡಳಿತ ನೀಡುವ ಶಕ್ತಿ ಮಹಿಳೆಯರಿಗಿದೆ. ರಾಜ್ಯದ ಕಾಂಗ್ರೆಸ್ ಚುನಾವಣಾ ಸಂದರ್ಭದಲ್ಲಿ ೫ ಗ್ಯಾರಂಟಿ ಘೋಷಿಸಿದಾಗ ಅಪಹಾಸ್ಯ ಮಾಡಿದ ಬಿಜೆಪಿಗರಿಗೆ ಮತದಾರರು ಸರಿಯಾದ ಪಾಠ ಕಲಿಸಿದರು. ಅಡಿದಂತೆ ಕಾಂಗ್ರೆಸ್ ಸರಕಾರ ಎಲ್ಲ ಗ್ಯಾರಂಟಿಗಳನ್ನು ಸಮರ್ಪಕವಾಗಿ ನೀಡಿದೆ. ಸರಕಾರ ಬಂದ ಮೇಲೆ ಮಹಿಳೆಯರು ಕರ್ನಾಟಕದಲ್ಲಿ ಸಶಕ್ತರಾಗಿದ್ದಾರೆ. ಈ ಬಾರಿ ದೇಶಕ್ಕೆ ಕಾಂಗ್ರೇಸ್ ಪಕ್ಷವೇ ಸರಿ ಎಂಬ ಒಕ್ಕೊರಲಿನ ನಿರ್ಣಯ ಮಹಿಳೆಯರದ್ದಾಗಿದೆ ಎಂದರು.

ಕಾಂಗ್ರೆಸ್ ಘೋಷಿತ ಹಾವೇರಿ ಲೋಕಸಭಾ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಪತ್ನಿ ದೀಪಾ ಗಡ್ಡದೇವರಮಠ ಮಾತನಾಡಿ, ಯಾವುದೇ ಅಧಿಕಾರವಿಲ್ಲದೆ ಜನತೆಯ ಸೇವೆ ಮಾಡಿರುವ ಆನಂದಸ್ವಾಮಿ ಅವರಿಗೆ ಲೋಕಸಭಾ ಸದಸ್ಯರಾಗುವ ಅವಕಾಶವನ್ನು ಕಲ್ಪಿಸಿದ ಕಾರ್ಯಕರ್ತರಿಗೆ ಕೃತಜ್ಞರಾಗಿದ್ದೇವೆ. ಬಹು ನಿರೀಕ್ಷಿತವಾಗಿ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಗೆಲುವಿಗಾಗಿ ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮವಹಿಸುತ್ತಿದ್ದಾರೆ. ಒಳ್ಳೆಯ ಗೆಲುವಿನ ವಾತಾವರಣವಿದೆ. ವಿಶೇಷವಾಗಿ ಮಹಿಳೆಯರು ಹೆಚ್ಚು ಉತ್ಸಾಹದಿಂದ ಕಾಂಗ್ರೆಸ್‌ ಪರವಾಗಿ ಪ್ರಚಾರದಲ್ಲಿದ್ದಾರೆ ಎಂದರು.

ಕಾಂಗ್ರೆಸ್ ನಾಯಕ ಮಂಜುನಾಥ ನೀಲಗುಂದ ಮಾತನಾಡಿ, ಹಾನಗಲ್ಲ ವಿಧಾನಸಭಾ ಕ್ಷೇತ್ರದಿಂದ ಆನಂದ ಗಡ್ಡದೇವರಮಠ ಅವರಿಗೆ ೩೦ ಸಾವಿರಕ್ಕೂ ಅಧಿಕ ಅಂತರದ ಮತ ನೀಡುತ್ತೇವೆ. ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಹಾನಗಲ್ಲಿನಲ್ಲಿ ಇದ್ದು ಬಿಜೆಪಿ ಪರ ಬೈ ಎಲೆಕ್ಷನ್ ಮಾಡಿದರೂ ಶ್ರೀನಿವಾಸ ಮಾನೆ ಹೆಚ್ಚು ಅಂತರದಿಂದ ಆಯ್ಕೆಯಾಗಿದ್ದಾರೆ. ಈಗ ಮಾಜಿಯಾಗಿರುವ ಬಸವರಾಜ ಬೊಮ್ಮಾಯಿ ಅವರು ಎದುರಾಳಿಯಾಗಿದ್ದಾರೆ. ಈಗ ಇನ್ನಷ್ಟು ಉತ್ಸಾಹದಿಂದ ಕೆಲ ಮಾಡುತ್ತೇವೆ. ಬಿಜೆಪಿ ಅಲೆ, ಬೊಮ್ಮಾಯಿ ಅವರ ಸ್ಪರ್ಧೆ ನಮಗೆ ಲೆಕ್ಕಕ್ಕೇ ಇಲ್ಲ ಎಂದರು.

ಮಾಜಿ ಜಿಪಂ ಸದಸ್ಯ ಟಾಕನಗೌಡ ಪಾಟೀಲ, ಪುರಸಭೆ ಸದಸ್ಯೆ ಮಮತಾ ಆರೆಗೋಪ್ಪ, ಮುಖಂಡರಾದ ಅನಿತಾ ಶಿವೂರ, ರಜಿಯಾ ಹಿತ್ತಲಮನಿ, ಗಾಯತ್ರಿ ಕೊಲ್ಲಾಪೂರ ಮೊದಲಾದವರು ಮಾತನಾಡಿದರು. ಸೌಜನ್ಯ ಗಡ್ಡದೇವರಮಠ, ಶಾರದಾ ಹಿರೇಮಠ, ನಿರಂಜನ ನಿಂಬಯ್ಯಸ್ವಾಮಿಮಠ, ವಿಜಯಕುಮಾರ ದೊಡ್ಡಮನಿ ಮೊದಲಾದವರು ಈ ಸಂದರ್ಭದಲ್ಲಿದ್ದರು.