ಇಡೀ ರಾಜ್ಯದಲ್ಲೇ ದಲಿತ ಸಮುದಾಯದ ಕುಮಾರ್ ಕೊಪ್ಪ ಒಬ್ಬರನ್ನೇ ಮಂಡ್ಯ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದೆ. ಇದಕ್ಕೆ ಕಾಂಗ್ರೆಸ್‌ನ ಎಲ್ಲ ನಾಯಕರು, ಮುಖಂಡರು, ಕಾರ್ಯಕರ್ತರು ಸೇರಿ ಸಾಕಾರಗೊಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ದಲಿತ ಸಮುದಾಯದ ಕುಮಾರ್ ಕೊಪ್ಪ ಅವರನ್ನು ಹೈಕಮಾಂಡ್ ಆಯ್ಕೆ ಮಾಡುವ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದಿದೆ. ಅವರ ಆಯ್ಕೆ ನಮಗೆ ಖುಷಿ ನೀಡಿದೆ. ಇದರಿಂದ ಯಾರೊಬ್ಬರೂ ಅಸಮಾಧಾನಗೊಂಡಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಎಂ.ದ್ಯಾವಪ್ಪ ಹೇಳಿದರು.

ಎಐಸಿಸಿ ಮತ್ತು ಕೆಪಿಸಿಸಿಯಿಂದ ಆಗಮಿಸಿದ್ದ ವೀಕ್ಷಕರು ಹಾಗೂ ಜಿಲ್ಲೆಯ ಎಲ್ಲಾ ತಾಲೂಕುಗಳ ಮುಖಂಡರು-ಕಾರ್ಯಕರ್ತರ ಅಭಿಪ್ರಾಯಗಳೆಲ್ಲವನ್ನೂ ಪಡೆದಿದ್ದಾರೆ. ಎಐಸಿಸಿ ಅಧ್ಯಕ್ಷರನ್ನು ಆಯ್ಕೆ ಮಾಡುವ ವೇಳೆ ಸಾಮಾನ್ಯರಲ್ಲಿ ಸಾಮಾನ್ಯರಿಗೂ ಅವಕಾಶಗಳು ಸಿಗುತ್ತವೆ ಎಂಬುದನ್ನು ಕುಮಾರ್ ಕೊಪ್ಪ ಆಯ್ಕೆ ಸಾಕ್ಷೀಕರಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇಡೀ ರಾಜ್ಯದಲ್ಲೇ ದಲಿತ ಸಮುದಾಯದ ಕುಮಾರ್ ಕೊಪ್ಪ ಒಬ್ಬರನ್ನೇ ಮಂಡ್ಯ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದೆ. ಇದಕ್ಕೆ ಕಾಂಗ್ರೆಸ್‌ನ ಎಲ್ಲ ನಾಯಕರು, ಮುಖಂಡರು, ಕಾರ್ಯಕರ್ತರು ಸೇರಿ ಸಾಕಾರಗೊಳಿಸಿದ್ದಾರೆ. ನಾನು ಕೂಡ ಜಿಲ್ಲಾಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದು, ಎಐಸಿಸಿಯ ತೀರ್ಮಾನವನ್ನು ಸರ್ವಾನುಮತದಿಂದ ಒಪ್ಪಿ ಕುಮಾರ್ ಕೊಪ್ಪ ಅವರ ಕೈ ಬಲಪಡಿಸುವ ಮೂಲಕ ಪಕ್ಷವನ್ನು ಸದೃಢವಾಗಿಸಲು ಶ್ರಮಿಸುವುದಾಗಿ ಹೇಳಿದರು.

ಕುಮಾರ್ ಕೊಪ್ಪ ಅವರು ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಯುವಜನ ಸೇವೆಯ ಮೂಲಕ ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲೆಯಾದ್ಯಂತ ೨೫ ವರ್ಷ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಸಾಕ್ಷರತೆ, ಸಂಘಟನೆ, ಯುವಜನ ಸೇವೆ ಸಾಹಿತ್ಯ, ಪತ್ರಿಕೋದ್ಯಮ, ಕೃಷಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನೂರಾರು ಯುವಜನರಿಗೆ ಸನ್ಮಾರ್ಗದಲ್ಲಿ ನಡೆಯುವಂತೆ ಮಾರ್ಗದರ್ಶನ ಮಾಡಿದ್ದಾರೆ ಎಂದರು.

ದೀನ ದುರ್ಬಲರ ಧ್ವನಿಯಾಗಿ ಸಾಮಾಜಿಕ ಕಳಕಳಿಯನ್ನು ಹೊಂದಿ ಕಾಂಗ್ರೆಸ್ ಮೂಲಕ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಹಂತ ಹಂತವಾಗಿ ಬೆಕ್ಕಳಲೆ ಗ್ರಾಪಂ ಸದಸ್ಯರಾಗಿ, ಬೆಕ್ಕಳಲೆ ನೀರು ಬಳಕೆದಾರರ ಸಂಘದ ಅಧ್ಯಕ್ಷರಾಗಿ, ಮನ್‌ಮುಲ್ ನಿರ್ದೇಶಕರಾಗಿ, ಮಂಡ್ಯ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಕೊಪ್ಪ ಗ್ರಾಪಂ ಸದಸ್ಯರಾಗಿ ಸೇವೆ ಸಲ್ಲಿಸುವ ಮೂಲಕ ಅಪಾರವಾದ ಸಂಘಟನಾ ಅನುಭವ ಹೊಂದಿದ್ದಾರೆ. ಇವರ ಅನುಭವದ ಆಧಾರದ ಮೇಲೆ ಎಐಸಿಸಿ ಮಂಡ್ಯ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಇವರ ನಾಯಕತ್ವದಲ್ಲಿ ಎದುರಿಸಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ ಎಂದರು.

ಮಂಡ್ಯ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಾಜಿ, ಮುಖಂಡರಾರ ಸಿ.ಎಂ.ಕ್ರಾಂತಿಸಿಂಹ, ಶಿವಲಿಂಗೇಗೌಡ, ಯೋಗೇಶ್, ವೀಣಾ ಶಂಕರ್, ಮಂಜುಳಾ, ಡಿ.ಎಲ್.ಶಂಕರಲಿಂಗೇಗೌಡ, ಉಮ್ಮಡಹಳ್ಳಿ ನಾಗೇಶ್, ಎಚ್.ಎಂ.ಉದಯ್ ಕುಮಾರ್ ಹಾಜರಿದ್ದರು.