ಸಾರಾಂಶ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮದ ಕೊಡುಗೆಯ ಅರಿವು ಮೂಡಿಸಬೇಕಿದೆ.
ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಕೊಪ್ಪಳ ವಿವಿ ಕುಲಪತಿ
ಕನ್ನಡಪ್ರಭ ವಾರ್ತೆ ಕೊಪ್ಪಳಭಾರತ ಮಾಧ್ಯಮ ಮಂಡಳಿ ಸ್ಥಾಪನೆಯಾದ ಪ್ರಯುಕ್ತ ಆ ನೆನಪಿನಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮದ ಕೊಡುಗೆಯ ಅರಿವು ಮೂಡಿಸಬೇಕಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿ ಹೇಳಿದರು.
ನಗರದ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪತ್ರಿಕೋದ್ಯಮವು ಇತ್ತೀಚಿನ ದಿನಗಳಲ್ಲಿ ಹಲವು ಬದಲಾವಣೆ ಕಂಡಿದೆ. ಪತ್ರಕರ್ತರಲ್ಲಿ ಸಾಮಾಜಿಕ ಹೊಣೆಗಾರಿಕೆ ಬೇಕಾಗಿದೆ. ಧ್ವನಿ ಇಲ್ಲದವರ ಪರ ಹಾಗೂ ಅನ್ಯಾಯದ ವಿರುದ್ಧ ಮಾಧ್ಯಮಗಳು ಧ್ವನಿ ಎತ್ತಬೇಕು. ಆರೋಗ್ಯಕರ ಮಾಧ್ಯಮದಿಂದ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.ಮಾಧ್ಯಮವು ಹೊಸ ತಂತ್ರಜ್ಞಾನದಿಂದ ಕೂಡಿದೆ. ಆದರೆ ಹೊಸ ತಂತ್ರಜ್ಞಾನದ ಭರಾಟೆಯಿಂದ ಕೊಚ್ಚಿ ಹೋಗುತ್ತಿದೆ. ಮಾಧ್ಯಮ ಮೈ ಮರೆತರೆ ಸಮಾಜ ಕುಸಿಯುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೊಪ್ಪಳ ವಿವಿ ಹಣಕಾಸು ಅಧಿಕಾರಿ ಅಮೀನಸಾಬ ಅತ್ತಾರ ಮಾತನಾಡಿ, ಪತ್ರಿಕಾ ರಂಗ ಪ್ರಜಾಪ್ರಭುತ್ವದ ಬಲಿಷ್ಠತೆ ಹಾಗೂ ಸದೃಢ ಭಾರತ ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ. ಪ್ರಜೆಗಳು ಮತ್ತು ಪ್ರಭುತ್ವದ ನಡುವಿನ ಕೊಂಡಿಯಂತೆ ಕೆಲಸ ಮಾಡುವ ಪತ್ರಿಕಾರಂಗವು, ಪ್ರಜಾಪ್ರಭುತ್ವವನ್ನು ಬಲಗೊಳಿಸುವ ವಿಚಾರಗಳ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಮಹತ್ತರ ಜವಾಬ್ದಾರಿ ಹೊತ್ತಿದೆ ಎಂದರು.ಪ್ರಮಾಣಪತ್ರ ವಿತರಣೆ:
ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಮಾಡಲಾಯಿತು.ಕೊಪ್ಪಳ ವಿವಿಯ ಕುಲಸಚಿವ ಪ್ರೊ. ಕೆ.ವಿ. ಪ್ರಸಾದ, ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರಕಾಶ್ ಯಳವಟ್ಟಿ, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಶ್ರೀಕಾಂತ್, ಸಂತೋಷಕುಮಾರ ವಿವಿಧ ವಿಭಾಗಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಇತರರು ಇದ್ದರು.