ಮಕ್ಕಳ ಭವಿಷ್ಯ ರೂಪಿಸುವಲ್ಲಿ ಸಮಾಜದ ಹೊಣೆಗಾರಿಕೆ ಅಗತ್ಯ

| Published : Jun 13 2024, 12:47 AM IST

ಮಕ್ಕಳ ಭವಿಷ್ಯ ರೂಪಿಸುವಲ್ಲಿ ಸಮಾಜದ ಹೊಣೆಗಾರಿಕೆ ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಬಾಲ ಕಾರ್ಮಿಕ ಪದ್ಧತಿ ಶೂನ್ಯಕ್ಕೆ ಇಳಿಯಬೇಕು. 14 ವರ್ಷದೊಳಗಿನ ಮಕ್ಕಳು ಶಾಲೆಯಲ್ಲಿರಬೇಕೇ ಹೊರತು ದುಡಿಮೆಯಲ್ಲಿ ಅಲ್ಲ. ಇದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ.

ನ್ಯಾ.ಕೆ.ಬಿ.ಶಿವಪ್ರಸಾದ್ ಅಭಿಮತ । ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆಯಿಂದ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಉತ್ತಮ ಸಮಾಜ ನಿರ್ಮಾಣದಲ್ಲಿ ಮಕ್ಕಳ ಏಳಿಗೆಯೂ ಮುಖ್ಯವಾಗಿದ್ದು, ಮಕ್ಕಳ ಉತ್ತಮ ಬದುಕು ಮತ್ತು ಭವಿಷ್ಯದ ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿಯೂ ಹೌದು, ಸಮಾಜದ ಜವಾಬ್ದಾರಿಯೂ ಹೌದು ಎಂದು ಒಂದನೇ ಹೆಚ್ಚುವರಿ ಸತ್ರ ನ್ಯಾಯಾದೀಶ ಕೆ.ಬಿ.ಶಿವಪ್ರಸಾದ್ ಅಭಿಮತ ವ್ಯಕ್ತ ಪಡಿಸಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ಶಾಲಾ ಶಿಕ್ಷಣ ಇಲಾಖೆ. ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಸಹಯೋಗದಲ್ಲಿ ಬುಧವಾರ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬಾಲಕಾರ್ಮಿಕ ಪದ್ಧತಿ ಸಮಾಜಕ್ಕೆ ಅಂಟಿದ ಶಾಪ. ಇದೊಂದು ಸಾಮಾಜಿಕ ಪಿಡುಗು, ಮಕ್ಕಳ ಅಮೂಲ್ಯವಾದ ಬಾಲ್ಯವನ್ನು ಕಸಿಯುತ್ತದೆ. ಬಾಲ ಕಾರ್ಮಿಕ ಪದ್ಧತಿಯನ್ನು ಹೋಗಲಾಡಿಸುವುದು ಸಮಾಜದ ಹೊಣೆಗಾರಿಕೆಯಾಗಿದ್ದು, ಈ ಬಗ್ಗೆ ಪ್ರತಿಯೊಬ್ಬರೂ ಗಂಭೀರವಾಗಿ ಚಿಂತನೆ ನಡೆಸುವ ಅಗತ್ಯವಿದೆ. ಬಾಲ ಕಾರ್ಮಿಕತೆ ನಿರ್ಮೂಲನೆಗೆ ಸರ್ಕಾರದ ವಿವಿಧ ಇಲಾಖೆಗಳೊಂದಿಗೆ ಸ್ವಯಂ ಸೇವಾ ಸಂಸ್ಥೆಗಳು, ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯದೀಶ ಎಚ್.ಕೆ.ಉಮೇಶ್ ಮಾತನಾಡಿ, ಬಾಲ ಕಾರ್ಮಿಕ ಪದ್ಧತಿ ಶೂನ್ಯಕ್ಕೆ ಇಳಿಯಬೇಕು. 14 ವರ್ಷದೊಳಗಿನ ಮಕ್ಕಳು ಶಾಲೆಯಲ್ಲಿರಬೇಕೇ ಹೊರತು ದುಡಿಮೆಯಲ್ಲಿ ಅಲ್ಲ. ಇದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ. ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಅಂತಹವರ ವಿರುದ್ಧ ಪ್ರಕರಣ ದಾಖಲಿಸಿ 20 ರಿಂದ 50 ಸಾವಿರ ರುಪಾಯಿವರೆಗೆ ದಂಡ ವಿಧಿಸಲು ಹಾಗೂ ಎರಡು ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದರು.

ಬಿ.ಬಿ.ಎ ಸ್ವಯಂಸೇವಾ ಸಂಸ್ಥೆಯ ರಾಜ್ಯ ಸಂಯೋಜಕ ಬಿನು ವರ್ಗಿಸ್,ಮಾತನಾಡಿ, ದೇಶದಾದ್ಯಂತ ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಿ ಎಲ್ಲ ಮಕ್ಕಳು ಉತ್ತಮ ಶಿಕ್ಷಣ ಪಡೆಯುವಂತೆ ಮಾಡಬೇಕಾದ ವ್ಯವಸ್ಥೆಯನ್ನು ರೂಪಿಸುವ ಅರಿವಿಗಾಗಿ ಬಾಲ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.ಕನ್ನಡ ಉಪನ್ಯಾಸಕ ಹಾಗೂ ಪತ್ರಕರ್ತ ಎನ್. ಚಂದ್ರಶೇಖರ್ ಮಾತನಾಡಿದರು. ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಪ್ರತಿಜ್ಞಾ ವಿಧಿಯನ್ನು ಜಿಲ್ಲಾ ಕಾರ್ಮಿಕ ಅಧಿಕಾರಿ ವರಲಕ್ಷ್ಮೀ ಬೋಧಿಸಿದರು. ವೇದಿಕೆ ಕಾರ್ಯಕ್ರಮಕ್ಕೂ ಜಾಗೃತಿ ಜಾಥಾಗೆ, ಜಿಲ್ಲಾಧಿಕಾರಿ ಪಿ. ಎನ್. ರವೀಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಕೆ.ಉಮೇಶ್ ಚಾಲನೆ ನೀಡಿದರು. ಈ ಜಾಗೃತಿ ಜಾಥಾದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿ- ವಿದ್ಯಾರ್ಥಿನಿಯರು, ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತೆಯರು ಹಾಗೂ ನಗರದ ಹಲವು ಅಂಗಡಿ, ಗ್ಯಾರೇಜ್, ಹೋಟೆಲ್ ಮಾಲೀಕರು ಭಾಗವಹಿಸಿದ್ದರು.ಕಾರ್ಮಿಕ ನಿರೀಕ್ಷಕ ಸತೀಶ್, ಮಂಜುಳಾ, ಕಲಾವಾಣಿ, ವಿಜಯಲಕ್ಷ್ಮೀ, ತಾಲೂಕು ಆರೋಗ್ಯಾಧಿಕಾರಿ ಡಾ.ಮಂಜುಳಾ, ಸಿಡಿಪಿಒ ಗಂಗಾಧರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶ್ರೀನಿವಾಸ್, ವಕೀಲರಾದ ಮುರುಳಿಮೋಹನ್, ಮಂಜುನಾಥರೆಡ್ಡಿ, ಸೌಜನ್ಯ ಗಾಂಧಿ, ಕಾರ್ಮಿಕ ಇಲಾಖೆಯ ಜಿಲ್ಲಾ ಯೋಜನಾಧಿಕಾರಿ ರಮೇಶ್ ಮತ್ತಿತರರು ಇದ್ದರು.

---------------

ಬಾಕ್ಸ್.........

ಬಾಲ ಕಾರ್ಮಿಕ ಪದ್ಧತಿ ಕಂಡರೆ ಸಹಾಯವಾಣಿ ಸಂಖ್ಯೆ 1098ಕ್ಕೆ ಕರೆ ಮಾಡಿ

ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮಾತನಾಡಿ, ಪೋಷಕರ ಬಡತನ, ಅರಿವಿನ ಕೊರತೆ, ಅನಕ್ಷರತೆ ಮತ್ತಿತರ ಕಾರಣಗಳಿಂದಾಗಿ ಬಾಲಕಾರ್ಮಿಕ ಪದ್ಧತಿ ಸಮಾಜದಲ್ಲಿ ಇನ್ನೂ ಜೀವಂತವಾಗಿದೆ. ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆಗಾಗಿ ಸರ್ಕಾರವು ಹಲವು ಯೋಜನೆ,ಕಾರ್ಯಕ್ರಮಗಳ ಜೊತೆಗೆ ಕಾನೂನುಗಳನ್ನೂ ಜಾರಿ ಮಾಡಿದೆ. ಜಿಲ್ಲೆಯ ಯಾವುದೇ ಭಾಗದಲ್ಲಿ ಬಾಲ ಕಾರ್ಮಿಕರನ್ನು ನೇಮಿಸಿಕೊಂಡಿರುವುದು ಹಾಗೂ ಬಾಲ್ಯ ವಿವಾಹಗಳು ನಡೆಯುತ್ತಿರುವುದು ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಅಥವಾ 112 ಕ್ಕೆ ಕರೆ ಮಾಡಬೇಕು ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಸಾರ್ವಜನಿಕರು ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸಬೇಕು ಎಂದರು. -------------ಸಿಕೆಬಿ-4 ವಿಶ್ವ ಬಾಲ ಕಾರ್ಮಿಕ ದಿನಾಚರಣೆಯನ್ನು ನ್ಯಾ.ಕೆ.ಬಿ.ಶಿವಪ್ರಸಾದ್ ಉಧ್ಘಾಟಿಸಿದರು