ಮೂಡುಪೆರಂಪಳ್ಳಿಯ ವಿಶ್ವಪ್ರಿಯ ಬಯಲು ರಂಗಮಂಟಪದಲ್ಲಿ ನವ ಚೈತನ್ಯ ಯುವಕ ಮಂಡಲದ 40ನೇ ವಾರ್ಷಿಕೋತ್ಸವ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.

ನವಚೈತನ್ಯ ಯುವಕ ಮಂಡಲದ ವಾರ್ಷಿಕೋತ್ಸವ । ಡಾ.ತಲ್ಲೂರರಿಗೆ ‘ವಜ್ರ ಚೈತನ್ಯ ಪ್ರಶಸ್ತಿ’

ಉಡುಪಿ: ಸಂಘ ಸಂಸ್ಥೆಗಳಿಂದ ಉತ್ತಮ ಕಾರ್ಯಗಳು ನಡೆದರೆ ಅದು ಸಮಾಜದ ಉನ್ನತಿ ಕಾರಣ ಆಗುತ್ತದೆ ಎಂದು ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಇಲ್ಲಿನ ಮೂಡುಪೆರಂಪಳ್ಳಿಯ ವಿಶ್ವಪ್ರಿಯ ಬಯಲು ರಂಗಮಂಟಪದಲ್ಲಿ ನಡೆದ ನವ ಚೈತನ್ಯ ಯುವಕ ಮಂಡಲದ 40ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.ಎಲ್ಲಿ ಸಜ್ಜನರಿಗೆ ಗೌರವ ಆದರಗಳು ನಡೆಯುತ್ತಿವೆ ಎಂದಾದರೆ ಆ ಸಂಘಗಳು ಉತ್ತಮ ಕಾರ್ಯಗಳನ್ನು ನಡೆಸುತ್ತಿವೆ ಎಂದರ್ಥ. ಆರಂಭದಿಂದಲೂ ಮೂಡುಪೆರಂಪಳ್ಳಿ ನವಚೈತನ್ಯ ಯುವಕ ಮಂಡಲಕ್ಕೂ ನಮ್ಮ ಗುರುಗಳಿಗೂ ವಿಶೇಷ ಆದರಾಭಿಮಾನ ಇದೆ, ಮುಂದೆಯೂ ಈ ಸಂಘಟನೆ ಉತ್ತಮ ಕಾರ್ಯಗಳನ್ನು ಮಾಡಿಕೊಂಡು ಸಮಾಜಕ್ಕೆ ಮಾದರಿ ಆಗಲಿ ಎಂದು ಹಾರೈಸಿದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಸಮಾಜಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಸಂಘದ ವತಿಯಿಂದ ‘ವಜ್ರ ಚೈತನ್ಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ನಂತರ ಡಾ. ತಲ್ಲೂರು ಅವರು ನವಚೈತನ್ಯ ಯುವಕ ಮಂಡಲ ನಡೆಸುತ್ತಿರುವ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಇತರ ಯುವಕ ಮಂಡಲಗಳಿಗೆ ಮಾದರಿಯಾಗಿವೆ ಎಂದರು.

ಯುವಕ ಮಂಡಲದ ಅಧ್ಯಕ್ಷ ಜಿತೇಶ್ ಅಧ್ಯಕ್ಷತೆ ವಹಿಸಿದ್ದರು, ಮಾಜಿ ಶಾಸಕ ರಘುಪತಿ ಭಟ್, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಗಿರಿಜಾ ಶಿವರಾಮ ಶೆಟ್ಟಿ, ಮಾಜಿ ನಗರಸಭಾ ಸದಸ್ಯೆ ಅನಿತಾ ಬೆಳಿಂಡ ಉಪಸ್ಥಿತರಿದ್ದರು.ಮುಳುಗುತಜ್ಞ ಈಶ್ವರ್ ಮಲ್ಪೆ ಹಾಗೂ ಗಾಯಕಿ ಲಿಯೋನ ಒಲಿವೆರ ಅವರಿಗೆ ಗೌರವಾರ್ಪಣೆ ನಡೆಯಿತು. ಸಂಘದ ಹಿರಿಯ ಸದಸ್ಯರಾದ ಸುರೇಂದ್ರ ಪೂಜಾರಿ, ರವೀಂದ್ರ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ಆರ್ಥಿಕವಾಗಿ ಹಿಂದುಳಿದ ಇಬ್ಬರು ವಿದ್ಯಾರ್ಥಿಗಳಿಗೆ ಹಾಗೂ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರಿಗೆ ವಾಕಿಟಾಕಿ ಖರೀದಿಸಲು ಸಂಘದ ವತಿಯಿಂದ ಸಹಾಯಧನ ವಿತರಿಸಲಾಯಿತು. ಈ ಸಂದರ್ಭ ಸಂಸ್ಥೆಯ ಉಪಾಧ್ಯಕ್ಷ ವಿಪಿನ್ ಹಾಗೂ ಕಾರ್ಯದರ್ಶಿ ವಿಶಾಲ್, ಕೋಶಾಧಿಕಾರಿ ಶಂಕರ್ ಕುಲಾಲ್ ಪೆರಂಪಳ್ಳಿ ಇದ್ದರು.