ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿರುವ ಗುರುಗಳಿಂದ ಮಾತ್ರ ಸಮಾಜದ ಪರಿವರ್ತನೆ ಮಾಡಲು ಸಾಧ್ಯ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.ಪಟ್ಟಣದ ಟಿ.ಬಿ.ಬಡಾವಣೆಯ ಎಂಆರ್‌ಪಿ ಶ್ರೀನಂಜುಂಡೇಶ್ವರ ಪ್ಯಾಲೇಸ್‌ನಲ್ಲಿ ಜಿಪಂ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಶಿಕ್ಷಕರ ದಿನಾಚರಣೆ ಸಮಿತಿ ಸಹಭಾಗಿತ್ವದಲ್ಲಿ ಭಾನುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಭವಿಷ್ಯದ ಜೀವನ ಮತ್ತು ದೇಶದ ಇತಿಹಾಸದ ಬಗ್ಗೆ ಶಿಕ್ಷಕರು ಮಕ್ಕಳಿಗೆ ಎಷ್ಟರ ಮಟ್ಟಿಗೆ ಅರಿವು ಮೂಡಿಸುತ್ತೀರೋ ಅದು ಮುಂದಿನ ದಿನಗಳಲ್ಲಿ ಈ ದೇಶದ ಬದಲಾವಣೆಗೆ ಭದ್ರ ಬುನಾದಿಯಗುತ್ತದೆ ಎಂದರು.ಚಿಕ್ಕ ವಯಸ್ಸಿನಲ್ಲಿ ಮಕ್ಕಳನ್ನು ತಿದ್ದುವ ಅವಕಾಶವಿರುವುದು ಪೋಷರನ್ನು ಬಿಟ್ಟರೆ ಶಿಕ್ಷಕರಿಗೆ ಮಾತ್ರ. ಶಿಕ್ಷಕರು ಕೇವಲ ಪಾಠ ಮಾಡಿ ಪರೀಕ್ಷೆಯಲ್ಲಿ ಪಾಸ್ ಮಾಡಿಸುವುದಷ್ಟೇ ಅಲ್ಲ. ಸಮಾಜದ ಬದಲಾವಣೆಗೆ ಜನರನ್ನು ಪರಿವರ್ತಿಸುವ ಜವಾಬ್ದಾರಿಯೂ ಇದೆ ಎಂದರು.
ಮಕ್ಕಳಿಗೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಕಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ ಉದ್ಯೋಗ ಪಡೆದರೂ ಸಹ ಸಮಾಜದಲ್ಲಿ ಅನೇಕ ವ್ಯತ್ಯಾಸಗಳಾಗುತ್ತವೆ ಎಂದರು.ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಬದ್ಧತೆ ಬೆಳೆಯಬೇಕು. ದೇಶದ ಬಗ್ಗೆ ಗೌರವ, ಪ್ರೀತಿ ಜೊತೆಗೆ ಎಲ್ಲರು ನಮ್ಮವರು ಎಂಬ ಭಾವನೆ ಬರಬೇಕು. ಇದನ್ನು ಶಾಲಾ ಹಂತದಲ್ಲಿ ಶಿಕ್ಷಕರು ಕಲಿಸಬೇಕು. ಸರ್ಕಾರಿ ಶಾಲೆಯಲ್ಲಿ ಓದಿದ ಗ್ರಾಮೀಣ ಮಕ್ಕಳು ಐಎಎಸ್, ಐಪಿಎಸ್ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳಾಗಿದ್ದಾರೆ ಎಂಬುದನ್ನು ತಿಳಿಸಬೇಕು ಎಂದರು.
ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿ ಪೋಷಕರು ಆರ್ಥಿಕವಾಗಿ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಓದಿದ ಅನೇಕರು ವಿಜ್ಞಾನಿಗಳೂ ಸೇರಿದಂತೆ ಅತ್ಯುನ್ನತ ಸ್ಥಾನದಲ್ಲಿದ್ದುಕೊಂಡು ದೇಶ ಸೇವೆ ಮಾಡುತ್ತಿದ್ದಾರೆ. ಪೋಷಕರಿಗೆ ಅರಿವು ಮೂಡಿಸಿದರೆ ಮಕ್ಕಳಿಗಾಗಿ ಸಾಲ ಮಾಡುವ ಪ್ರಮೇಯವೇ ಬರುವುದಿಲ್ಲ ಎಂದರು.ವೇದಿಕೆಯಲ್ಲಿ ಸೇವಾ ನಿವೃತ್ತಿ ಹೊಂದಿದ ಶಿಕ್ಷಕರು, ಅಕಾಲಿಕ ಮರಣ ಹೊಂದಿರುವ ಶಿಕ್ಷಕರ ಕುಟುಂಬಸ್ಥರು ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಸೇರಿ ಒಟ್ಟು 45 ಮಂದಿ ಶಿಕ್ಷಕರಿಗೆ ಸಚಿವರು ಸನ್ಮಾನಿಸಿದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನ ನೀಡಲಾಯಿತು.
ಈ ವೇಳೆ ಚಿಕ್ಕಮಗಳೂರಿನ ಸಾಹಿತ್ಯ ವಿಮರ್ಶಕ ಡಾ.ಎಚ್.ಎಸ್.ಸತ್ಯನಾರಾಯಣ ಪ್ರಧಾನ ಭಾಷಣ ಮಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ, ನಿವೃತ್ತ ಪ್ರಾಂಶುಪಾಲ ಶಿವಪ್ಪ ಹಾಗೂ ನಿವೃತ್ತ ಶಿಕ್ಷಕ ಬಿ.ಎಂ.ಪ್ರಕಾಶ್ ಮಾತನಾಡಿದರು.ಇದಕ್ಕೂ ಮುನ್ನ ಸರ್ವಪಲ್ಲಿ ಡಾ.ರಾಧಾಕೃಷ್ಣನ್ ಅವರ ಭಾವಚಿತ್ರವನ್ನು ಅಲಂಕರಿಸಿದ್ದ ವಾಹನದಲ್ಲಿರಿಸಿ ಪಟ್ಟಣದ ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತದಿಂದ ಕಾರ್ಯಕ್ರಮದ ವೇದಿಕೆ ವರೆಗೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಅಲಿ ಅನ್ಸರ್ ಪಾಷ, ಉಪಾಧ್ಯಕ್ಷೆ ವಸಂತಲಕ್ಷ್ಮಿ, ಡಿಡಿಪಿಐ ಶಿವರಾಮೇಗೌಡ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಚಲುವಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಯೋಗೇಶ್, ಕ್ಷೇತ್ರ ಸಮನ್ವಯಾಧಿಕಾರಿ ಕೆ.ರವೀಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜೆ.ವೈ.ಮಂಜುನಾಥ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರುದ್ರೇಶ್ ಸೇರಿದಂತೆ ತಾಲೂಕಿನ ಎಲ್ಲಾ ಶಿಕ್ಷಕರು ಇದ್ದರು.