ಕಾನೂನು ಪಾಲನೆಯಿಂದ ಸಮಾಜ ಸುವ್ಯವಸ್ಥಿತ; ನ್ಯಾಯಾಧೀಶರಾದ ಬಿ. ಜಯಂತ್ ಕುಮಾರ್

| Published : Nov 09 2025, 01:15 AM IST

ಕಾನೂನು ಪಾಲನೆಯಿಂದ ಸಮಾಜ ಸುವ್ಯವಸ್ಥಿತ; ನ್ಯಾಯಾಧೀಶರಾದ ಬಿ. ಜಯಂತ್ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅನಂತ ಎಚ್. ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿರಿಯ ನಾಗರಿಕರ ಹಕ್ಕುಗಳು ಮತ್ತು ಅವರ ರಕ್ಷಣೆಗೆ ಸಂಬಂಧಿಸಿದಂತೆ ತಂದೆ-ತಾಯಿ ಮಕ್ಕಳಿಗೆ ಆಸ್ತಿಯನ್ನು ನೀಡಿದ ನಂತರ ಅವರನ್ನು ನೋಡಿಕೊಳ್ಳದೇ ಇರುವ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ.

ಕನ್ನಡಪ್ರಭ ವಾರ್ತೆ, ತುಮಕೂರು

ಕಾನೂನು ಪಾಲನೆಯಿಂದ ಸಮಾಜವನ್ನು ಸುವ್ಯವಸ್ಥಿತವಾಗಿಡಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ. ಜಯಂತ್ ಕುಮಾರ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ ಪ್ರಯುಕ್ತ “ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣೆ ಕಾಯ್ದೆ–2007”ರ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜ, ಕಾನೂನು ಮತ್ತು ಆತ್ಮಭಯ ಅಂಶಗಳು ಜನರಲ್ಲಿ ಒಟ್ಟಾಗಿದ್ದಾಗ ಮಾತ್ರ ಸಮಾಜ ಸುಲಲಿತವಾಗಿ, ಶಿಸ್ತುಬದ್ಧವಾಗಿ ನಡೆಯಲು ಸಾಧ್ಯ ಎಂದು ಹೇಳಿದರು.

ಪ್ರತಿಯೊಬ್ಬರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಿದಾಗ ಮಾತ್ರ ಸಮಾಜ ವ್ಯವಸ್ಥೆ ದೃಢವಾಗುತ್ತದೆ. ಸಮಾಜದಲ್ಲಿ ಮನುಷ್ಯನ ಮೌಲ್ಯವನ್ನು ಅವನ ಪ್ರಾಮಾಣಿಕತೆ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ ಎಂದು ಹೇಳಿದ ಅವರು, ಪ್ರತಿಯೊಬ್ಬರು ಸಮಾನವಾಗಿ ಬದುಕಬೇಕು ಎಂಬ ಭಾವನೆ ಮನುಷ್ಯನೊಳಗೆ ಬೆಳೆಯಬೇಕು. ಮೌಲ್ಯಾಧಾರಿತ ಜೀವನ ನಡೆಸಿದರೆ ಮಾತ್ರ ಮನುಷ್ಯನ ಜೀವನ ಸಾರ್ಥಕವಾಗುತ್ತದೆ. ಸಮಾಜದ ಒಳಿತಿಗಾಗಿ ಕೆಲಸ ಮಾಡುವ ಮನೋಭಾವ ಎಲ್ಲರಲ್ಲೂ ಬೆಳೆಯಬೇಕು ಎಂದು ಸಲಹೆ ನೀಡಿದರು.

ಹಿರಿಯ ನಾಗರಿಕರು ನಮ್ಮ ಸಮಾಜದ ಆಧಾರಸ್ತಂಭ. ಪೋಷಣೆ ಮತ್ತು ಗೌರವ ರಕ್ಷಣೆ ಪ್ರತಿಯೊಬ್ಬರ ಕಾನೂನು ಮತ್ತು ಮಾನವೀಯ ಹೊಣೆಗಾರಿಕೆಯಾಗಿದೆ. ಮಕ್ಕಳಿಂದ ಪೋಷಕರ ನಿರ್ಲಕ್ಷ್ಯ, ಶೋಷಣೆ ಅಥವಾ ಆಸ್ತಿ ವಿವಾದದ ಸಂದರ್ಭಗಳಲ್ಲಿ ಹಿರಿಯ ನಾಗರಿಕರಿಗೆ ನ್ಯಾಯ ಒದಗಿಸಲು 2007ರ ಹಿರಿಯ ನಾಗರಿಕರ ರಕ್ಷಣೆ ಕಾಯ್ದೆ ಮಹತ್ವದ ಪಾತ್ರ ವಹಿಸುತ್ತದೆ, ಹಿರಿಯ ನಾಗರಿಕರು ತಮ್ಮ ಹಕ್ಕುಗಳ ಬಗ್ಗೆ ಅರಿವು ಪಡೆದು ಅಗತ್ಯವಿದ್ದಾಗ ಕಾನೂನು ಸೇವಾ ಪ್ರಾಧಿಕಾರ ಸಂಪರ್ಕಿಸಬೇಕು ಎಂದು ಕರೆ ನೀಡಿದರು.

ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಮಾತನಾಡಿ ದೇಶವನ್ನು ಆಳಿದ ಮೊಟ್ಟಮೊದಲ ಚಕ್ರವರ್ತಿ ಅಶೋಕನು ಬುದ್ಧನ ಅಷ್ಟಾಂಗ ಮಾರ್ಗಗಳಿಂದ ಪ್ರೇರಣೆ ಪಡೆದು ಧಮ್ಮ ಕಲ್ಪನೆ ಮೂಲಕ ಗುರು-ಹಿರಿಯರಿಗೆ, ಸಮಾಜದಲ್ಲಿ ಉತ್ತಮ ಸ್ಥಾನ ಹಾಗೂ ಗೌರವ ದೊರೆಯುವಂತೆ ಮಾಡಿದ್ದನು ಎಂದು ಸ್ಮರಿಸಿದರು.

ಗೌತಮ ಬುದ್ಧನ ಧಮ್ಮಕಲ್ಪನೆಯಲ್ಲಿ ಗುರು-ಹಿರಿಯರಿಗೆ ಗೌರವ, ಸತ್ಯನಿಷ್ಠ ಜೀವನದ ಮಾರ್ಗವನ್ನು ಬೋಧಿಸಲಾಗಿದೆ. ಧಮ್ಮ ಎಂದರೆ ಕೇವಲ ಧಾರ್ಮಿಕ ಕಲ್ಪನೆ ಅಲ್ಲ, ಅದು ಮಾನವೀಯ ಮೌಲ್ಯಗಳ ನಿಜವಾದ ಸಾರವಾಗಿದೆ. ಸತ್ಯ ಮತ್ತು ಸುಳ್ಳು ಎಂಬುದರ ಮಧ್ಯದ ದಾರಿಯೇ ನೈತಿಕತೆ. ಹಿರಿಯರ, ಪೋಷಕರ ಮತ್ತು ಗುರುಗಳ ಅನುಭವದಿಂದ ಬದುಕಿಗೆ ದಿಕ್ಕು ಸಿಗುತ್ತದೆ. ಗುರು-ಹಿರಿಯರಿಗೆ ಗೌರವ ಮತ್ತು ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ಇಂತಹ ಮೌಲ್ಯಗಳು ಸಮಾಜದಲ್ಲಿ ಬೆಳೆದಾಗ ಕಾನೂನು ಮತ್ತು ಶಿಸ್ತು ಸಹಜವಾಗಿ ಉಳಿಯುತ್ತವೆ ಎಂದು ಹೇಳಿದರು.

ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅನಂತ ಎಚ್. ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿರಿಯ ನಾಗರಿಕರ ಹಕ್ಕುಗಳು ಮತ್ತು ಅವರ ರಕ್ಷಣೆಗೆ ಸಂಬಂಧಿಸಿದಂತೆ ತಂದೆ-ತಾಯಿ ಮಕ್ಕಳಿಗೆ ಆಸ್ತಿಯನ್ನು ನೀಡಿದ ನಂತರ ಅವರನ್ನು ನೋಡಿಕೊಳ್ಳದೇ ಇರುವ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ. ಇಂತಹ ಸಂದರ್ಭಗಳಲ್ಲಿ ಪೋಷಕರಿಗೆ ನ್ಯಾಯ ಸಿಗುವಂತೆ ಕಾನೂನು ಪ್ರಾತಿನಿಧ್ಯ ನೀಡಿದೆ. ಮಕ್ಕಳಿಂದ ಪೋಷಕರ ನಿರ್ಲಕ್ಷ್ಯ ಅಥವಾ ಹಿಂಸೆ ನಡೆದರೆ, ಅವರು ನೀಡಿದ ಆಸ್ತಿಯನ್ನು ಹಿಂತೆಗೆದುಕೊಳ್ಳುವ ಕಾನೂನು ಜಾರಿಯಲ್ಲಿದ್ದು ಸಂದರ್ಭ ಬಂದಾಗ ಉಪಯೋಗಪಡೆಯಬೇಕು ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ, ಉಪ ವಿಭಾಗಾಧಿಕಾರಿ ನಾಹಿದಾ ಜಮ್ ಜಮ್, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪುರುಷೋತ್ತಮ್, ತಹಸೀಲ್ದಾರ್ ರಾಜೇಶ್ವರಿ ಪಿ.ಎಸ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಬಿ.ಎಸ್ ಚಿದಾನಂದಮೂರ್ತಿ ಸೇರಿದಂತೆ ಗೌರವಾನ್ವಿತ ನ್ಯಾಯಾಧೀಶರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.