ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಸಾಹಿತ್ಯ ಹಾಗೂ ಸಾಂಸ್ಕೃತಿಕ ರಂಗ ಆಳುವವರ ಗುಲಾಮಗಿರಿ ಒಪ್ಪಿಕೊಂಡಲ್ಲಿ ಅಂತಹ ಸಮಾಜದ ಸರ್ವನಾಶ ನಿಶ್ಚಿತ ಎಂದು ಕಳವಳ ಹೊರಹಾಕಿರುವ ನಾಟಕ ಅಕ್ಯಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಅವರು, ಗುಲಾಮರಾಗದೆ ಹೊಣೆಗಾರಿಕೆ ಅರಿತು ಜಾಗೃತರಾಗಲು ಇದು ಸಕಾಲ ಎಂದು ಸಾಹಿತಿಗಳು, ಕಲಾವಿದರಿಗೆ ಕಿವಿಮಾತು ಹೇಳಿದ್ದಾರೆ.ಕಲಬುರಗಿಯಲ್ಲಿ ಗುರುವಾರ ನಡೆದ, ಈ ಭಾಗದಲ್ಲಿ ರಂಗಕಲೆಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವ ರಂಗ ಸಂಗಮ ಕಲಾ ಸಂಸ್ಥೆಯ ಜಂಗಮಶೆಟ್ಟಿ ರಂಗ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆಳುವ ಪಕ್ಷದವರ ವಂದಿಮಾಗದರು, ಹೊಗಳು ಭಟ್ಟರೇ ಅಕಾಡೆಮಿಗಳಿಗೆ ಅಧ್ಯಕ್ಷ, ಸದಸ್ಯರಾಗಿ ಬರೋದು ಸಹಜ ಎನ್ನುವಷ್ಟು ಈಗ ಅದು ನಮ್ಮಲ್ಲಿ ಬೆರೆತು ಹೋಗಿದೆ, ನಾನೂ ಒಂದು ಪಕ್ಷ, ವರ್ಗಕ್ಕೆ ಸೇರಿದ್ದರಿಂದಲೇ ಇಲ್ಲಿಗೆ ಬಂದಿರುವೆ ಎಂದು ತಮ್ಮನ್ನೂ ವಿಮರ್ಶೆಗೊಳಪಡಿಸುತ್ತಲೇ ಇಂತಹ ಬೆಳವಣಿಗೆ ಸರಿಯಲ್ಲ ಎಂದು ಖಂಡಿಸಿದರು.ಸಾಹಿತ್ಯ, ಸಾಂಸ್ಕೃತಿಕ ರಂಗ ಸ್ವತಂತ್ರವಾಗಿ ಕೆಲಸ ನಿರ್ವಹಿಸುತ್ತಿದ್ದರೆ ಮಾತ್ರ ಅಂತಹ ಸಮಾಜ ಚುರುಕಾಗಿರುತ್ತದೆಂದು ಗಾಂಧೀಜಿ ಹೇಳಿದ್ದರು, ಆದರಿಂದು ಈ ಮಾತಿಗೆ ವ್ಯತಿರಿಕ್ತವಾಗಿ ಈ ರಂಗಗಳಲ್ಲಿನ ಬೆಳವಣಿಗೆಗಳು ಸಾಗಿವೆ. ಹೀಗಾಗಿ ಸಾಂಸ್ಕೃತಿಕ, ಸಾಹಿತ್ಯದ ಅಧಃಪತನದತ್ತ ನಾವೆಲ್ಲರೂ ವೇಗವಾಗಿ ಸಾಗಿದ್ದೇವೆಂದು ಆತಂಕ ಹೊರಹಾಕಿದರು.
ನಟರು, ಕಲಾವಿದರ ಕೆಲಸವೆಲ್ಲ ರಾಜಕಾರಣಿಗಳೇ ಮಾಡುತ್ತಿದ್ದಾರೆ: ಸದ್ಯದ ಪರಿಸ್ಥಿತಿ ತುಂಬ ಆಯೋಮಯವಾಗಿದೆ, ನಟರು, ಕಲಾವಿದರು ಸರಿಕೊಂಡು ರಂಗಭೂಮಿ, ಸಿನಿಮಾ, ಕಿರುತೆರೆಗಳಲ್ಲಿ ನಟನೆ ಮಾಡೋದನ್ನೆಲ್ಲ ನಮಗಿಂತ ಚೆನ್ನಾಗಿ ಇಂದು ರಾಜಕಾರಣಿಗಳೇ ಮಾಡಿ ತೋರಿಸುತ್ತಿದ್ದಾರೆ. ಭ್ರಷ್ಟಾಚಾರ, ಅನಾಚಾರ, ಲಾಂಗಿಕ ಹಗರಣ ಹೀಗೆ ಎಲ್ಲದರಲ್ಲೂ ರಾಜಕಾರಣಿಗಳು ನಟನೆಯನ್ನೇ ಮೀರಿಸಿಬಿಟ್ಟಿದ್ದಾರೆ, ಇದು ನಮ್ಮ ಸಮಾಜದ ಬೆಳವಣಿಗೆಯೆ? ಎಂದು ಪ್ರಶ್ನಿಸುತ್ತ ವಿಷಾದಿಸಿದರು.ಏಕಾಏಕಿ ವಾಲ್ಮೀಕಿ ನಿಗಮದ ನೂರಾರು ಕೋಟಿ ಮಂಗಮಾಯವಾಗುತ್ತದೆ, ಲೈಂಗಿಕ ಕಾರಣಕ್ಕೆ ಒಂದೇ ವಾರದಲ್ಲಿ ಮೂವರು ರಾಜಕಾರಣಿಗಳು ಜೈಲುಪಾಲಾಗುತ್ತಾರೆ. ಇವರಿಗೇನು ಕಮ್ಮಿ ಎಂದು ಸ್ವಾಮೀಜಿಗಳು ಜೈಲು, ಬೇಲು ಎಂದು ಓಡಾಡುತ್ತಿದ್ದಾರೆ. ಅನೇಕರು ಮಾಡಿದ ಅನಾಚಾರ ಜೀರ್ಣಿಸಿಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇವೆಲ್ಲವು ನಾಗರಿಕ ಸಮಾಜದ ಅಧೋಗತಿಗೆ ಹಿಡಿದ ಕನ್ನಡಿ ಎಂದರು.
ಕಲಾವಿದರು, ಸಾಹಿತಿಗಳ ಮೇಲೆ ದೊಡ್ಡ ಜವಾಬ್ದಾರಿ: ಇಂತಹ ಸಂಧಿಗ್ಧ ಸಮಯದಲ್ಲಿ ರಾಜಕಾರಣಿಗಳು ಹಾಗೂ ಕಲಾವಿದರು ಇವರ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ. ನಾವು ಎಚ್ಚೆತ್ತು ಕೆಲಸ ಮಾಡಬೇಕಿದೆ. ಸಮಾಜದಲ್ಲಿನ ಅನಾಚಾರ, ಭ್ರಷ್ಟಾಚಾರ, ಹಗರಣಗಳನ್ನು ಇಂತಹವರು ಹೀಗೆ ಮಾಡುತ್ತಿದ್ದಾರೆ, ಎಚ್ಚರಾಗಿರಿ ಎಂದು ಜನರಿಗೆ ತಿಳಿಸುವ ಕೆಲಸ ಮಾಡಬೇಕಿದೆ. ಅಂದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯನೆಂದು ಮೂರ್ತಿ ಹೇಳಿದರು.ಅಂಬಾನಿಯಂತಹ ಉದ್ದಿಮೆದಾರ ಸಾವಿರಾರು ಕೋಟಿ ರುಪಾಯಿ ಮದುವೆಗೆ ವೆಚ್ಚ ಮಾಡುತ್ತಾನೆ, ಅದನ್ನೇ ಮಾಧ್ಯಮದವರು ವೈಭವೀಕರಿಸಿ ತೋರಿಸುತ್ತಾರೆ. ಇಂತಹ ವೈಭವೀಕರಣ ಬೇಕೆ? ದುಂದುವೆಚ್ಚಕ್ಕೆ ಕಡಿವಾಣ ಹಾಕೋಣವೆಂಬ ಸಂದರ್ಭದಲ್ಲಿ ಕೋಟಿಗಟ್ಟಲೇ ವೆಚ್ಚ ಮಾಡೋದು, ಅದೂ ಜನರ ಹಣವನ್ನೇ ವೆಚ್ಚ ಮಾಡುತ್ತಿರುವ ಇಂತಹ ಉದ್ಯಮಪತಿಗಳ ಬಣ್ಣ ಬಯಲು ಮಾಡಬೇಕಿದ್ದ ಮಾಧ್ಯಮದವರು ಅದನ್ನೇ ವೈಭವೀಕರಿಸಿದರು ಎಂದು ವಿಷಾದಿಸಿದರು.
ಕರ್ನಾಟಕ ನಾಟಕ ಅಕ್ಯಾಡೆಮಿ ಮಾಜಿ ಅಧ್ಯಕ್ಷ ಎಲ್. ಬಿ. ಶೇಖ್ ಮಾಸ್ತರ್, ರಂಗಕರ್ಮಿಗ ಎಚ್.ಎಸ್. ಬಸವಪ್ರಭು, ಶಾಂತಾ ಕುಲಕರ್ಣಿ, ನಾರಾಯಣ್ ಕುಲಕರ್ಣಿ, ಬಿ.ಎಚ್. ನಿರಗುಡಿ, ಡಾ. ವಿಶ್ವರಾಜ್ ಪಾಟೀಲ್, ಶಿವಗೀತಾ ಬಸವಪ್ರಭು, ಶಂಕರಯ್ಯ ಘಂಟಿ, ಪ್ರಭಾಕರ ಜೋಷಿ, ರಂಗ ಕಲಾವಿದ ಕೆಪಿ ಗಿರಿಧರ್, ಮೋಹನ ಸೀತನೂರ್, ಅಪ್ಪಾರಾವ ಅಕ್ಕೋಣೆ ಸೇರಿದಂತೆ ಅನೇಕರಿದ್ದರು.ಹೆಚ್ಚುತ್ತಿರೋ ಅಸಹಿಷ್ಣುತೆ: ಸಮಾಜದಲ್ಲಿ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗಂದತಹ ವಾತಾವರಣ ನಿರ್ಮಾಣವಾಗುತ್ತಿದೆ. ಇಂತಹ ಅಸಹಿಷ್ಣುತೆ ಆರೋಗ್ಯಕರ ಸಮಾಜಕ್ಕೆ ಮಾರಕ. ನಂಬಿಕೆ, ಪ್ರೀತಿ ಉಳಿಸಿಕೊಳಂಡು ಸಮ ಸಮಾಜ ನಿರ್ಮಾಣದತ್ತ ನಾವೆಲ್ಲರು ಬಸವಣ್ಣನವರ ತತ್ವಗಳೊಂದಿಗೆ ಸಾಗಬೇಕಿದೆ. ಜಂಗಮಶೆಟ್ಟಿ ಪರಿವಾರ ರಂಗ ಸಂಗಮ ಮೂಲಕ ಎಲೆಮರೆಯಲ್ಲಿರುವಂತಹ ನಿಜವಾದ ಕಲಾವಿದರನ್ನು ಹುಡುಕಿ ಪುರಸ್ಕಾರಸುತ್ತಿರೋದು ಹೆಮ್ಮೆಯ ಸಂಗತಿ. ಈ ಕೆಲಸ ನಿರಂತರ ಸಾಗಲಿ ಎಂದು ಮೂರ್ತಿ ಹಾರೈಸಿದರು.
ಪ್ರಶಸ್ತಿ ಪ್ರದಾನದಲ್ಲಿ ಕಲಬುರಗಿ ತೊಗರಿ ಘಮ: ರಂಗಸಂಗಮ ಕಲಾ ವೇದಿಕೆ ರೂವಾರಿ ಡಾ. ಸುಜಾತಾ ಜಂಗಮಶೆಟ್ಟಿ ಸ್ವಾಗತದೊಂದಿಗೆ ಆರಂಭವಾದ ಸಮಾರಂಭದಲ್ಲಿ, ಸೇಡಂ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಅಧ್ಯಕ್ಷ ಸದಾಶಿವ ಸ್ವಾಮೀಜಿ ಸಾನ್ನಿಧ್ಯದಲ್ಲಿ, ಕರಾಮುವಿ ಕುಲಪತಿ ಡಾ. ಶರಣಪ್ಪ ವಿ. ಹಲಸೆ ಹಾಗೂ ನಾಟಕ ಅಕ್ಯಾಡೆಮಿ ಅಧ್ಯಕ್ಷ ನಾಗರಾಜಮೂರ್ತಿ, ಶಿವಗೀತಾ ಬಸವಪ್ರಭು, ಬಿಎಚ್ ನೀರಗುಡಿ ಎಲ್ಲರೂ ಸೇರಿಕೊಂಡು ಕಲಾವಿದರಾದ ಬಳ್ಳಾರಿಯ ಪುರುಷೋತ್ತಮ ಹಂದ್ಯಾಳ್ ಅವರಿಗೆ ಎಸ್.ಬಿ. ಜಂಗಮಶೆಟ್ಟಿ ರಂಗ ಪ್ರಶಸ್ತಿ ಹಾಗೂ ಶಿಗ್ಗಾಂವ್‍ದ ಕಲಾವಿದೆ ರಾಧಿಕಾ ವಿ. ಬೇವಿನಮಟ್ಟಿ ಅವರಿಗೆ ಸುಭದ್ರಾದೇವಿ ಜಂಗಮಶೆಟ್ಟಿ ರಂಗ ಪ್ರಶಸ್ತಿ ಪ್ರದಾನ ಮಾಡಿದರು.