ಸಾರಾಂಶ
ಪ್ರಸಕ್ತ ದಿನಗಳಲ್ಲಿ ಕೃಷಿ ರಸಾಯನಿಕ ಗೊಬ್ಬರ ಮತ್ತು ಔಷಧಿಗಳ ಸಿಂಪರಣೆಗಳಿಂದ ಭೂಮಿ ವಿಷಮಯವಾಗುತ್ತಿದೆ. ಇದರಿಂದ ಆಹಾರ ಧಾನ್ಯಗಳ ಮತ್ತು ವಾಣಿಜ್ಯ ಬೆಳೆಗಳ ಉತ್ಪಾದನೆಯೂ ಕುಂಠಿತವಾಗುತ್ತಿದೆ. ಮಣ್ಣಿನ ಫಲವತ್ತತೆ ಹೆಚ್ಚಿಸಬೇಕಾದ ಜವಾಬ್ದಾರಿ ರೈತರ ಮೇಲಿದೆ ಎಂದು ಕೃಷಿ ಅಧಿಕಾರಿ ಮೇತಾಬ್ ಆಲಿ ಹೇಳಿದ್ದಾರೆ.
- ಮೆದಿಕೆರೆಯಲ್ಲಿ ಮಣ್ಣು ಪರೀಕ್ಷೆ-ಸಸ್ಯ ಪೋಷಕಾಂಶಗಳ ನಿರ್ವಹಣೆ ತರಬೇತಿ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ಪ್ರಸಕ್ತ ದಿನಗಳಲ್ಲಿ ಕೃಷಿ ರಸಾಯನಿಕ ಗೊಬ್ಬರ ಮತ್ತು ಔಷಧಿಗಳ ಸಿಂಪರಣೆಗಳಿಂದ ಭೂಮಿ ವಿಷಮಯವಾಗುತ್ತಿದೆ. ಇದರಿಂದ ಆಹಾರ ಧಾನ್ಯಗಳ ಮತ್ತು ವಾಣಿಜ್ಯ ಬೆಳೆಗಳ ಉತ್ಪಾದನೆಯೂ ಕುಂಠಿತವಾಗುತ್ತಿದೆ. ಮಣ್ಣಿನ ಫಲವತ್ತತೆ ಹೆಚ್ಚಿಸಬೇಕಾದ ಜವಾಬ್ದಾರಿ ರೈತರ ಮೇಲಿದೆ ಎಂದು ಕೃಷಿ ಅಧಿಕಾರಿ ಮೇತಾಬ್ ಆಲಿ ಹೇಳಿದರು.ಮಂಗಳವಾರ ತಾಲೂಕಿನ ಮೆದಿಕೆರೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರೈತರಿಗಾಗಿ ಏರ್ಪಡಿಸಿದ್ದ ಮಣ್ಣು ಪರೀಕ್ಷೆ ಮತ್ತು ಸಸ್ಯ ಪೋಷಕಾಂಶಗಳ ನಿರ್ವಹಣೆ ಬಗ್ಗೆ ಒಂದು ದಿನದ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.
ಮಣ್ಣಿನ ಫಲವತ್ತತೆ ಹೆಚ್ಚಿಸಲು ಜಮೀನುಗಳ ಮಣ್ಣಿನಲ್ಲಿ ಹಸಿರೆಲೆ ಗೊಬ್ಬರ ಮತ್ತು ಕೊಟ್ಟಿಗೆ ಗೊಬ್ಬರಗಳನ್ನು ಹಾಕಬೇಕು. ಇದರಿಂದ ಮಣ್ಣಿನ ಗುಣಮಟ್ಟವನ್ನು ಉತ್ತಮವಾಗಿ ಹೆಚ್ಚಿಸಲು ಸಾಧ್ಯವಿದೆ. ಅಧಿಕ ಇಳುವರಿ ಗಳಿಸಲು 16 ಪೋಷಕಾಂಶಗಳ ಅಗತ್ಯವಿದೆ. ರೈತರು ತಮ್ಮ ಜಮೀನುಗಳಲ್ಲಿನ ಮಣ್ಣನ್ನು ಪರೀಕ್ಷೆ ಮಾಡಿ, ಮಣ್ಣಿಗೆ ಬೇಕಾದ ಪೋಷಕಾಂಶಗಳನ್ನು ನೀಡಬೇಕು ಎಂದ ಅವರು, ಈ ಕ್ರಮದ ವಿಧಾನಗಳ ಬಗ್ಗೆ ವಿವರಿಸಿದರು.ಗ್ರಾಮದ ರೈತ ರುದ್ರಪ್ಪ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಇಲಾಖೆ ತಜ್ಞ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ, ರೈತರಿಗೆ ಮಾಹಿತಿ ಕೊಡಿಸುತ್ತಿದ್ದೀರಿ. ಇದು ಶ್ಲಾಘನೀಯ ಸೇವೆ ಎಂದು ಪ್ರಶಂಶಿಸಿದರು.
ಕೃಷಿ ಮೇಲ್ವಿಚಾರಕ ಅಜ್ಜಪ್ಪ ಮಾತನಾಡಿ, ರೈತರು ದೇಶ ಬೆನ್ನೆಲುಬಾಗಿದ್ದಾರೆ. ಅವರ ಪ್ರಗತಿಗಾಗಿ ಕೃಷಿ ಬೆಳೆಯಲ್ಲಿ ಅನುಸರಿಸಬಹುದಾದ ಪದ್ಧತಿಗಳ ಬಗ್ಗೆ ಶಿಬಿರಗಳನ್ನು ಏರ್ಪಡಿಸಿ ಮಾಹಿತಿಯನ್ನು ಕೊಡಿಸಲಾಗುತ್ತಿದೆ. ಎಲ್ಲ ರೈತರೂ ಇಂಥ ಕಾರ್ಯಕ್ರಮಗಳ ಸದುಪಯೋಗ ಪಡೆದು ಗುಣಮಟ್ಟದ ಕೃಷಿಯನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.ತರಬೇತಿ ಶಿಬಿರದಲ್ಲಿ ವಲಯ ವಿಚಾರಕರಾದ ಎಸ್.ಸುಧಾ, ಸೇವಾ ಪ್ರತಿನಿಧಿ ವೀರಭದ್ರಪ್ಪ, ಮಂಜುಳಾ ಹಾಗೂ ರೈತ ಮಹಿಳೆಯರು ಭಾಗವಹಿಸಿದ್ದರು.
- - - -12ಕೆಸಿಎನ್ಜಿ3:ಮಣ್ಣು ಪರೀಕ್ಷೆ ಮತ್ತು ಸಸ್ಯ ಪೋಷಕಾಂಶಗಳ ನಿರ್ವಹಣೆ ತರಬೇತಿ ಶಿಬಿರದಲ್ಲಿ ಕೃಷಿ ಅಧಿಕಾರಿ ಮೇತಾಬ್ ಆಲಿ ಮಾತನಾಡಿದರು.