ಸೌರಶಕ್ತಿ ನೀರಾವರಿ ರೈತರಿಗೆ ವರದಾನ

| Published : Feb 06 2025, 11:46 PM IST

ಸಾರಾಂಶ

ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ (ಹೆಸ್ಕಾಂ) ವ್ಯಾಪ್ತಿಯ ಧಾರವಾಡ 10, ಗದಗ 1, ಹಾವೇರಿ 11, ಉತ್ತರ ಕನ್ನಡ 01, ಬೆಳಗಾವಿ 43, ವಿಜಯಪುರ 18, ಬಾಗಲಕೋಟೆ 28 ಸೇರಿ ಒಟ್ಟು 112 ರೈತರು ಸೌರ ಪಂಪ್‌ಸೆಟ್‌ ಅಳವಡಿಸಿಕೊಂಡಿದ್ದಾರೆ.

ಶಿವಾನಂದ ಅಂಗಡಿ

ಹುಬ್ಬಳ್ಳಿ:

ಕೈಗಾರಿಕೆ, ನೀರಾವರಿ ಅವಲಂಬಿತ ಕೃಷಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ವಿದ್ಯುತ್ ಮೇಲಿನ ಅವಲಂಬನೆ ಹೆಚ್ಚಾಗಿದ್ದು, ವಿಶೇಷವಾಗಿ ನೀರಾವರಿ ಕ್ಷೇತ್ರದಲ್ಲಿ ಇದನ್ನು ತಪ್ಪಿಸಲು ಕೇಂದ್ರ ಸರ್ಕಾರ ಜಾರಿಗೊಳಿಸಿದ ಪಿಎಂ ಕುಸುಮ್‌ ಬಿ ಹೆಸರಿನ ಸೌರ ಪಂಪ್‌ಸೆಟ್‌ ಯೋಜನೆ ರೈತರಿಗೆ ವರದಾನವಾಗಿದೆ.

ಕೇಂದ್ರ ಸರ್ಕಾರದಿಂದ ಪಿಎಂ ಕುಸಮ್‌ (ಪ್ರಧಾನ ಮಂತ್ರಿ ಕಿಸಾನ್‌ ಊರ್ಜಾ ಸುರಕ್ಷಾ ಏವಂ ಉತ್ತಾನ್‌ ಮಹಾಭಿಯಾನ್‌) ಯೋಜನೆ 2019ರಲ್ಲಿಯೇ ಜಾರಿಗೊಂಡಿದ್ದು, ಇದೇ ಯೋಜನೆ ಸುಧಾರಿಸಿ ಬಿ ಮತ್ತು ಸಿ ಘಟಕ ಎಂದು ಹೆಸರಿಸಲಾಗಿದೆ. ಪಿಎಂ ಕುಸುಮ್‌ ಬಿ ಅಡಿ ವಿದ್ಯುತ್‌ ಜಾಲ ಲಭ್ಯವಿಲ್ಲದ ಪ್ರದೇಶಗಳಲ್ಲಿ 7.5 ಎಚ್‌ಪಿ ವರೆಗೆ ಸೌರ ಕೃಷಿ ಪಂಪ್‌ಸೆಟ್‌ಗಳನ್ನು ಸ್ಥಾಪಿಸಲು ರೈತರಿಗೆ ಅವಕಾಶ ಕಲ್ಪಿಸಲಾಗಿದೆ. ರಾಜ್ಯದ ವಿದ್ಯುತ್‌ ಸರಬರಾಜು ಕಂಪನಿಗಳಾದ ಹೆಸ್ಕಾಂ, ಬೆಸ್ಕಾಂ, ಜೆಸ್ಕಾಂ, ಮೆಸ್ಕಾಂ, ಚೆಸ್ಕಾಂಗಳು ಯೋಜನೆಯನ್ನು ಕ್ರೆಡಲ್‌ (ನೇಮಿತ ಸಂಸ್ಥೆ) ಮೂಲಕ ಸಾಕಾರಗೊಳಿಸುತ್ತಿವೆ.

ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ (ಹೆಸ್ಕಾಂ) ವ್ಯಾಪ್ತಿಯ ಧಾರವಾಡ 10, ಗದಗ 1, ಹಾವೇರಿ 11, ಉತ್ತರ ಕನ್ನಡ 01, ಬೆಳಗಾವಿ 43, ವಿಜಯಪುರ 18, ಬಾಗಲಕೋಟೆ 28 ಸೇರಿ ಒಟ್ಟು 112 ರೈತರು ಸೌರ ಪಂಪ್‌ಸೆಟ್‌ ಅಳವಡಿಸಿಕೊಂಡಿದ್ದಾರೆ. ವಿದ್ಯುತ್‌ ಹೋಯಿತು, ತ್ರಿಫೇಸ್‌ ಯಾವಾಗ ಕೊಡುತ್ತೀರಿ, ಇಂಥ ಹಲವಾರು ತೊಡಕುಗಳು ಇಲ್ಲದೇ ನೀರಾವರಿ ಸೌಕರ್ಯ ಪಡೆಯುತ್ತಿದ್ದಾರೆ.

ರಾಜ್ಯ ಸರ್ಕಾರವು ಕನಿಷ್ಠ ಶೇ. 50ರಷ್ಟು ಸಹಾಯಧನ, ಕೇಂದ್ರ ಸರ್ಕಾರ ಶೇ. 30ರಷ್ಟು ಸಹಾಯಧನ ಹಾಗೂ ಫಲಾನುಭವಿಯ ವಂತಿಗೆ ಹಣ ಶೇ. 20ರಷ್ಟು ಸೇರಿ ರೈತ ಯೋಜನೆಯ ಲಾಭ ಪಡೆಯಬಹುದಾಗಿದೆ. ಈ ಹಿಂದೆ ರಾಜ್ಯ ಸರ್ಕಾರ ಶೇ. 30ರಷ್ಟು ಮಾತ್ರ ಸಹಾಯಧನ ನೀಡುತ್ತಿತ್ತು. ಫಲಾನುಭವಿ ಶೇ. 40ರಷ್ಟು ವಂತಿಗೆ ಹಣ ಭರಿಸಬೇಕಾಗಿತ್ತು. ಆದರೆ, 2023ರಲ್ಲಿ ರಾಜ್ಯ ಸರ್ಕಾರ ಸಹಾಯಧನವನ್ನು ಶೇ. 50ಕ್ಕೆ ಏರಿಸಿದ ಮೇಲೆ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಹೆಚ್ಚಾಗಿದೆ.

ಸೌರಶಕ್ತಿಯ ಬಳಕೆ ಮೂಲಕ ರೈತರು ಸಾವಲಂಬನೆ ಸಾಧಿಸಲು ಕುಸಮ್‌ ಬಿ ಯೋಜನೆ ರೂಪಿಸಲಾಗಿದೆ. ಯೋಜನೆಯಡಿ ರೈತರಿಗೆ ಸೌರ ಫಲಕ, ಸಬ್‌ಮರ್ಸಿಬಲ್‌, ಸರ್ಫೇಸ್‌ ಡಿಸಿ ಪಂಪ್‌, ಮೌಂಟಿಂಗ್‌ ಸ್ಟ್ರಕ್ಚರ್‌, ಪ್ಯಾನಲ್‌ ಬೋರ್ಡ್‌, ಪೈಪ್‌ ಮತ್ತು ಕೇಬಲ್‌ ಸರಬರಾಜು ಮಾಡಲಾಗುತ್ತದೆ.

ದೀರ್ಘಕಾಲ ಬಾಳಿಕೆ ಬರುವ ಕಾರಣದಿಂದ ಗ್ರಾಮೀಣ ಪ್ರದೇಶದಲ್ಲೂ ಸೌರ ತಂತ್ರಜ್ಞಾನ ಹೆಚ್ಚು ಜನಪ್ರಿಯವಾಗುತ್ತಿದೆ. ಕೃಷಿ ಭೂಮಿಯಲ್ಲಿ ಅಳವಡಿಸಲಾಗುವ ಸೌರ ಪಂಪ್‌ಸೆಟ್‌ಗಳಿಂದ ಹಗಲು ಹೊತ್ತಿನಲ್ಲಿ 8 ಗಂಟೆ ಕಾಲ ಕೃಷಿ ಚಟುವಟಿಕೆಗಳಿಗೆ ವಿದ್ಯುತ್‌ ಪೂರೈಕೆಯಾಗಲಿದೆ. ಇವುಗಳನ್ನು 5 ವರ್ಷಗಳ ಕಾಲ ದುರಸ್ತಿ ಸೇರಿದಂತೆ ಇತರೆ ಕೆಲಸಗಳನ್ನು ಪೂರೈಕೆದಾರರೇ ಉಚಿತವಾಗಿ ನಿರ್ವಹಣೆ ಮಾಡಲಿದ್ದಾರೆ.

ಯೋಜನೆ ಪಡೆಯುವುದು ಹೇಗೆ?:

ರೈತರು ತಮ್ಮ ಆಧಾರ್‌, ಆರ್‌ಟಿಸಿ ಮತ್ತು ಬ್ಯಾಂಕ್‌ ವಿವರಗಳೊಂದಿಗೆ ಆನ್‌ಲೈನ್‌ ಪೋರ್ಟಲ್‌ https://souramitra.com ಮೂಲಕ ನೋಂದಾಯಿಸಿಕೊಳ್ಳಬೇಕು. ನೋಂದಣಿ ಸಮಸ್ಯೆ ಪರಿಹರಿಸಲು ಕ್ರೆಡಲ್‌ನಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದ್ದು, 080-22202100 ಸಂಪರ್ಕಿಸಬಹುದು. ಹೀಗೆ ನೋಂದಣಿ ಬಳಿಕ ಹೆಸ್ಕಾಂ ಸಿಬ್ಬಂದಿ ಕೊಳವೆಬಾವಿ ಇರುವ ಸ್ಥಳ ಪರಿಶೀಲನೆಗೆ ಬರುತ್ತಾರೆ. 3 ಎಚ್‌ಪಿ, 5 ಎಚ್‌ಪಿ, 7.5 ಎಚ್‌ಪಿ, 10 ಎಚ್‌ಪಿ ವರೆಗೂ ಪಡೆಯಲು ಅವಕಾಶವಿದೆ. ಪರಸ್ಪರ ಒಪ್ಪಿಗೆ ಬಳಿಕ ವಂತಿಗೆ ಹಣ ಕಟ್ಟಿದರೆ, ಶೇ. 80ರಷ್ಟು ಸಹಾಯಧನವೂ ಲಭ್ಯವಾಗಲಿದೆ. ನಮ್ಮ ಹೊಲ ವಿದ್ಯುತ್‌ ಜಾಲದಿಂದ 600 ಮೀಟರ್‌ ದೂರದಲ್ಲಿದೆ. 8 ಎಕರೆ ಹೊಲದ ಪೈಕಿ ಒಂದು ಎಕರೆ ತೋಟಗಾರಿಕೆ ಮಾಡಿದ್ದು, ಮೊದಲು ಜನರೇಟರ್‌ ಮೇಲೆ ನೀರಾವರಿ ಮಾಡುತ್ತಿದ್ದೇವು. ಈಗ ಸೌರ ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಂಡ ಮೇಲೆ 7ರಿಂದ 8 ಗಂಟೆ ಹಗಲು ಹೊತ್ತಿನಲ್ಲಿಯೇ ತೋಟಕ್ಕೆ ನೀರು ಬರುತ್ತದೆ. ಸಮಸ್ಯೆ ನಿವಾರಣೆಯಾಗಿದೆ ಎಂದು ವಿಜಯಪುರ ತಾಲೂಕಿನ ನಾಗಠಾಣದ ಫಲಾನುಭವಿ ಮಂಜುನಾಥ ಬಿರಾದಾರ ಹೇಳಿದರು.

ಸೌರ ಪಂಪ್‌ಸೆಟ್‌ನಿಂದ ರೈತರು ಹಗಲು ಹೊತ್ತಿನಲ್ಲಿಯೇ 8ರಿಂದ 9 ತಾಸು ಹೊಲಗಳಿಗೆ ನೀರು ಹಾಯಿಸಬಹುದು. ಶೇ. 80ರಷ್ಟು ಸಹಾಯಧನವೂ ಸಿಗುವುದರಿಂದ ಕುಸುಮ ಬಿ ಯೋಜನೆ ರೈತರಿಗೆ ವರದಾನವಾಗಿದೆ ಎಂದು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ ಎಂ.ಎಲ್‌. ಹೇಳಿದರು.