ತಾಂತ್ರಿಕ ಕಾರಣದಿಂದ ಈ ಸ್ಥಳದಲ್ಲಿ ಅಡಚಣೆ ಎದುರಾದ ಹಿನ್ನೆಲೆ ತಾಲೂಕಿನ ನಾಲ್ಕು ಭಾಗಗಳಲ್ಲಿ ಖಾಸಗಿ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ಭೂಮಿಯನ್ನು ಪಡೆದ ಸೌರ ವಿದ್ಯುತ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ
ರೈತರ ಕೃಷಿ ನೀರಾವರಿ ಬವಣೆ ನಿವಾರಣೆಗೆ ಪಿಎಂ ಕುಸುಮ್- ಸಿ ಯೋಜನೆ ಸಹಕಾರಿಯಾಗಲಿದೆ ಎಂದು ಪಶುಪಾಲನಾ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ಹೇಳಿದರು.ತಾಲೂಕಿನ ಗೊರಹಳ್ಳಿ ಕುಳ್ಳಯ್ಯನ ಕೊಪ್ಪಲು, ಮರಡಿಯೂರು, ಚಿಕ್ಕ ಮಾಗಳಿ ಗ್ರಾಮಗಳ ಅಂಗಳದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸ್ಥಳಗಳಲ್ಲಿ ಸೌರ ವಿದ್ಯುತ್ ಘಟಕ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪಿರಿಯಾಪಟ್ಟಣ ತಾಲೂಕಿನ ರೈತರ ವ್ಯವಸಾಯಕ್ಕೆ ಅಗತ್ಯವಿರುವ ನೀರಿನ ಬವಣೆ ನಿವಾರಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ 200 ಎಕರೆ ಜಾಗವನ್ನು ಸೌರ ವಿದ್ಯುತ್ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಶಿಲಾನ್ಯಾಸ ನೆರವೇರಿಸಲಾಗಿತ್ತು. ಆದರೆ ತಾಂತ್ರಿಕ ಕಾರಣದಿಂದ ಈ ಸ್ಥಳದಲ್ಲಿ ಅಡಚಣೆ ಎದುರಾದ ಹಿನ್ನೆಲೆ ತಾಲೂಕಿನ ನಾಲ್ಕು ಭಾಗಗಳಲ್ಲಿ ಖಾಸಗಿ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ಭೂಮಿಯನ್ನು ಪಡೆದ ಸೌರ ವಿದ್ಯುತ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದರು.ಗೊರಹಳ್ಳಿ ಕುಳ್ಳಯ್ಯನ ಕೊಪ್ಪಲು ಬಳಿ 07 ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಘಟಕವನ್ನು ನಿರ್ಮಿಸಿ ಬೆಟ್ಟದಪುರ ಉಪ ವಿದ್ಯುತ್ ಕೇಂದ್ರಕ್ಕೆ ಸರಬರಾಜು ಮಾಡುವ ಮೂಲಕ ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸಲಾಗುವುದು. ಅದೇ ರೀತಿ ಮರಡಿಯೂರು ಗ್ರಾಮದ ಬಳಿ 05 ಮೆಗಾ ವ್ಯಾಟ್ ವಿದ್ಯುತ್ ಸಾಮರ್ಥ್ಯದ ವಿದ್ಯುತ್ ಘಟಕವನ್ನು ನಿರ್ಮಿಸಿ ಬೈಲು ಕುಪ್ಪೆ ಉಪ ಕೇಂದ್ರ ವ್ಯಾಪ್ತಿಯ ರೈತರಿಗೆ ಅನುಕೂಲ ಮಾಡಲಾಗುತ್ತಿದೆ ಎಂದರು.
ಅದೇ ರೀತಿ ಪಿರಿಯಾಪಟ್ಟಣದ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ 27 ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಘಟಕವನ್ನು ನಿರ್ಮಿಸಿ ಪಿರಿಯಾಪಟ್ಟಣ ಉಪ ಕೇಂದ್ರ ವ್ಯಾಪ್ತಿಯ ಬಡಾವಣೆಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಿ ಸ್ಥಾವರ ಕೆಲಸ ಆರಂಭಿಸಲಾಗಿದ್ದು ಈ ಕಾರ್ಯ ಶೀಘ್ರದಲ್ಲೇ ಜನರಿಗೆ ತಲುಪಲಿದೆ ಈ ಎಲ್ಲ ಕಾರ್ಯಕ್ರಮಗಳು ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಹಗಲಿನ ವೇಳೆಯೇ ಸಮರ್ಪಕ ವಿದ್ಯುತ್ ಪೂರೈಸಲು ನೆರವಾಗುವ ಫೀಡರ್ ಮಟ್ಟದ ಸೌರೀಕರಣ ಯೋಜನೆಯಾದ ಕುಸುಮ್- ಸಿ’ಗೆ ವೇಗ ನೀಡಿ, ಶಕ್ತಿ ತುಂಬಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ. ಈ ಯೋಜನೆಯಿಂದ ರೈತರಿಗೆ 7 ಗಂಟೆಗಳ ಕಾಲ ವಿದ್ಯುತ್ ನೀಡಲು ಸಾಧ್ಯವಾಗಲಿದೆ. ಈ ಸೌರ ಘಟಕದಿಂದ ಒಟ್ಟು 4 ಕೃಷಿ ಫೀಡರ್ಗಳು ಸೋಲಾರ್ ವಿದ್ಯುತ್ ವಿತರಣೆ ಜಾಲವಾಗಿ ಬದಲಾಗಲಿದೆ ಎಂದರು.ಕುಸುಮ್-ಸಿ ಯೋಜನೆ ರೈತರಿಗೆ ಅದರಲ್ಲೂ ಮುಖ್ಯವಾಗಿ ಪಿರಿಯಾಪಟ್ಟಣದ ಜನತೆಗೆ ಗ್ರಾಮೀಣ ಭಾಗದ ರೈತರಿಗೆ ವರದಾನವಾಗಿದೆ. ಯೋಜನೆ ಜಾರಿಗೊಳಿಸಲು ಸರ್ಕಾರ ಎಲ್ಲಾ ರೀತಿಯ ಬೆಂಬಲ ನೀಡುತ್ತಿದೆ.
ಸರ್ಕಾರಿ ಭೂಮಿ ಲಭ್ಯವಿರದ ಸ್ಥಳಗಳಲ್ಲಿ ರೈತರೇ ಭೂಮಿಯನ್ನು ಗುತ್ತಿಗೆ ನೀಡುವ ಮೂಲಕ ವಾರ್ಷಿಕ ಆದಾಯಗಳಿಸಬಹುದಾಗಿದೆ. ಹಾಗಾಗಿ, ರೈತರು ಭೂಮಿ ನೀಡಲು ಮುಂದೆ ಬರಬೇಕು. ಕುಸುಮ್ ಸಿ ಯೋಜನೆಯಡಿ ಪ್ರತಿ ಎಕರೆ ಭೂಮಿಗೆ 25 ಸಾವಿರ ರು. ಅನ್ನು ಖಾಸಗಿ ವಿದ್ಯುತ್ ಉತ್ಪಾದಕರು ಪಾವತಿಸಬೇಕು. ಆ ಮೊತ್ತವನ್ನು ಜಿಲ್ಲಾಧಿಕಾರಿಗಳ ಬಳಿ ಇಟ್ಟು ಉಪಕೇಂದ್ರ ಇರುವ ಗ್ರಾಮದ ಸರ್ಕಾರಿ ಶಾಲೆ, ಅಂಗನವಾಡಿಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು. ಖಾಸಗಿ ಭೂಮಿಯಾಗಿದ್ದರೆ, ನವೀಕರಿಸಬಹುದಾದ ಇಂಧನ ಸೇವಾ ಕಂಪನಿಯ ಡೆವಲಪರ್ಗಳು ಗುತ್ತಿಗೆಗೆ ತೆಗೆದುಕೊಂಡು, ಭೂಮಾಲೀಕರಿಗೆ ಎಕರೆಗೆ ಕನಿಷ್ಠ ರೂ.25,000 ಪರಿಹಾರ ನೀಡುತ್ತಾರೆ ಎಂದರು.ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ತಹಸೀಲ್ದಾರ್ ನಿಸರ್ಗ ಪ್ರಿಯಾ, ಅಭಿಯಂತರ ರಾಧ ಪಿಡಬ್ಲ್ಯೂಡಿ ವೆಂಕಟೇಶ್. ಕುಮಾರ್, ತಾಪಂ ಇಒ ಸುನಿಲ್ ಕುಮಾರ್, ಸೆಸ್ಕ್ ವ್ಯವಸ್ಥಾಪಕ ಸುನೀಲ್ ಕುಮಾರ್, ಎಇ,ಎಇಇ ಗುರು ಬಸವರಾಜಸ್ವಾಮಿ, ಜೆಇ ಸುನಿಲ್ ಯಾದವ್, ಪ್ರಶಾಂತ್ ಇದ್ದರು.